ಅರಣ್ಯ ನಿಯಮ ಉಲ್ಲಂಘನೆ ಆರೋಪ: ಕಾಂತಾರ ಚಿತ್ರತಂಡಕ್ಕೆ ಬಿಗ್ ರಿಲೀಫ್
ಬೆಂಗಳೂರು, ಜನವರಿ 23: ಚಿತ್ರೀಕರಣದ ವೇಳೆ ಅರಣ್ಯ ನಿಯಮ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿದ್ದ ಕಾಂತಾರ ಚಾಪ್ಟರ್ 1 ತಂಡಕ್ಕೆ ಸದ್ಯ ಕ್ಲೀನ್ ಚೀಟ್ ಸಿಕ್ಕಿದೆ. ಚಿತ್ರತಂಡ ಚಿತ್ರೀಕರಣದ ನೆಪದಲ್ಲಿ ಅರಣ್ಯಕ್ಕೆ ಹಾನಿಯುಂಟು ಮಾಡುತ್ತಿದೆ ಎನ್ನುವ ಆರೋಪವನ್ನು ಸದ್ಯ ತಳ್ಳಿಹಾಕಲಾಗಿದ್ದು, ಚಿತ್ರೀಕರಣ ಮುಂದುವರಿಸುವಂತೆ ಅನುಮತಿ ನೀಡಲಾಗಿದೆ. ಅಷ್ಟಕ್ಕೂ ಆಗಿದ್ದೇನು? ಚಿತ್ರತಂಡದ ವಿರುದ್ಧ ಆರೋಪವೇನು? ಈ ಬಗ್ಗೆ ವಿವರ ಇಲ್ಲಿದೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿದೆ. ಜಾಗತೀಕ ಮಟ್ಟದಲ್ಲಿ ಕಾಂತಾರ ಯಶಸ್ಸು ಕಂಡ ಬಳಿಕ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಚಿತ್ರವನ್ನು ಕೈಗೆತ್ತಿಕೊಂಡರು. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಕಾಂತಾರ ಚಾಪ್ಟರ್ 1 ಅಕ್ಟೋಬರ್ 2ರಂದು ತೆರೆ ಕಾಣಲಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಚಿತ್ರತಂಡದ ವಿರುದ್ಧ ಆರೋಪ ಕೇಳಿ ಬಂದಿದ್ದು, ಅರಣ್ಯ ಇಲಾಖೆಯಿಂದ ತನಿಖೆ ಎದುರಿಸುವ ಪರಿಸ್ಥಿತಿ ಕೂಡ ನಿರ್ಮಾಣ ಆಗಿತ್ತು.

ಕಾಂತಾರ ಚಾಪ್ಟರ್ 1 ಚಿತ್ರತಂಡದ ವಿರುದ್ಧ ಬಂದ ಆರೋಪವೇನು?
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೆರೂರು ಗ್ರಾಮದ ಬಳಿ ಕಾಂತಾರ ಚಾಪ್ಟರ್ 1 ಚಿತ್ರೀಕರಣ ನಡೆಸಲಾಗುತ್ತಿದೆ. ಅನುಮತಿ ಪಡದೇ ಈ ಸ್ಥಳಕ್ಕೆ ಬಂದ ಚಿತ್ರತಂಡ ಚಿತ್ರೀಕರಣದ ನೆಪದಲ್ಲಿ ಅರಣ್ಯಕ್ಕೆ ಹಾನಿಯುಂಟು ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಚಿತ್ರತಂಡ ಸಿನಿಮಾದ ಚಿತ್ರೀಕರಣಕ್ಕಾಗಿ ಗೋಮಾಳ ಜಾಗವನ್ನು ಪರವಾನಿಗೆ ಪಡೆದುಕೊಂಡಿದ್ದು, ಅರಣ್ಯ ಜಾಗದಲ್ಲಿ ಮರಗಳನ್ನು ಕಡಿದು, ಸ್ಫೋಟಕಗಳನ್ನು ಬಳಸಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಅಲ್ಲದೇ ಈ ಭಾಗದಲ್ಲಿ ಇರುವ ವನ್ಯಜೀವಿಗಳಿಗೆ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು.
ಈ ವಿಚಾರ ಅರಣ್ಯ ಇಲಾಖೆಯವರೆಗೂ ತಲುಪಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶ ಹೊರಡಿಸಿದ್ದರು. ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತೆ ಬಳಿ ಇರುವ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಜನವರಿ 3ರಿಂದ ಜನವರಿ 25ರವರೆಗೆ ಕಾಂತಾರಾ ಚಾಪ್ಟರ್ 1 ಚಿತ್ರೀಕರಣಕ್ಕೆ ಷರತ್ತುಬದ್ಧ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.
ಆದರೆ ಕಾಂತಾರಾ ತಂಡ ಕಾಡಿನಂಚಿನ ಪರಿಭಾವಿತ ಅರಣ್ಯ ಪ್ರದೇಶದ ಬಳಿ ನಡೆಸುತ್ತಿರುವ ಚಿತ್ರೀಕರಣದ ವೇಳೆ ಸ್ಫೋಟಕ ಬಳಸುತ್ತಿದ್ದು. ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿರುತ್ತದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ. ಒಂದೊಮ್ಮೆ ಚಿತ್ರತಂಡದಿಂದ ಷರತ್ತುಗಳ ಉಲ್ಲಂಘನೆಯಾಗಿ, ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಯಾವುದೇ ಹಾನಿ ಆಗಿದ್ದಲ್ಲಿ ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದರು. ಇದೀಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಅರಣ್ಯ ನಿಯಮ ಉಲ್ಲಂಘನೆ ಆಗಿಲ್ಲ ಎನ್ನುವುದು ತಿಳಿದು ಬಂದಿದೆ ಎಂದು ವರದಿಯಾಗಿದೆ.












Click it and Unblock the Notifications