Puttakkana Makkalu: ಟಿಆರ್‌ಪಿ ಪಟ್ಟಿಯಲ್ಲಿ ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ?
ಕಿರುತೆರೆಯಲ್ಲಿ ರಿಯಾಲಿಟಿ ಶೋ ಹಾಗೂ ಧಾರವಾಹಿಗಳದ್ದೇ ಕಾರುಬಾರು. ಅದರಲ್ಲೂ ಪ್ರತಿ ದಿನ ಪ್ರಸಾರವಾಗುವ ಧಾರವಾಹಿಗಳದ್ದೇ ಕಿರುತೆರೆಯಲ್ಲಿ ಮೇಲು ಗೈ. ವೀಕ್ಷಕರ ಜೀವನದಲ್ಲಿ ಧಾರವಾಹಿಗಳು ಹಾಸು ಹೊಕ್ಕಿರುತ್ತದೆ. ಮಧ್ಯಾಹ್ನ ಹಾಗೂ ಸಂಜೆ, ರಾತ್ರಿ ಪ್ರಸಾರವಾಗುವ ಧಾರಾವಾಹಿ ವೀಕ್ಷಿಸಲು ಅಭಿಮಾನಿಗಳ ದೊಡ್ಡ ಬಳಗವೇ ಇದೆ. ದೊಡ್ಡವರಿಂದ ಚಿಕ್ಕವರ ತನಕ ಧಾರಾವಾಹಿಗಳನ್ನು ವೀಕ್ಷಿಸುತ್ತಾರೆ. ಇಂತಹ ಧಾರವಾಹಿಗಳ ಗುಣಮಟ್ಟ ಅಥವಾ ಜನಪ್ರಿಯತೆಯನ್ನು ಅಳೆಯುವ ಮಾಪನವೇ ಟಿಆರ್‌ಪಿ.
ಇದೀಗ 21ನೇ ವಾರದ ಧಾರಾವಾಹಿ ಟಿಆರ್‌ಪಿ ಹೊರಬಿದ್ದಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡಿದೆ. ಕೆಲವು ವಾರಗಳಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲನೇ ಸ್ಥಾನದಲ್ಲೇ ಇದ್ದು, ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಧಾರಾವಾಹಿಗಳೇ ಈ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಟಾಪ್ ಐದು ಸ್ಥಾನಗಳನ್ನು ಪಡೆದುಕೊಂಡಿದ್ದು, ಮೊದಲ ಐದು ಸ್ಥಾನಗಳನ್ನು ಪಡೆದಿರುವ ಧಾರಾವಾಹಿಗಳ ವಿವರ ಇಲ್ಲಿದೆ.

1. ಪುಟ್ಟಕ್ಕನ ಮಕ್ಕಳು
ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 21ನೇ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹಲವು ವಾರಗಳಿಂದ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನ ಕಾಪಾಡಿಕೊಂಡಿದೆ. ತಾಯಿ ಹಾಗೂ ಮೂವರು ಹೆಣ್ಣು ಮಕ್ಕಳ ಬದುಕಿನ ಕಥಾ ಹಂದರವಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕಥೆ ದಿನದಿಂದ ದಿನಕ್ಕೆ ಇಂಟ್ರಸ್ಟಿಂಗ್ ಅನಿಸುತ್ತಿದೆ.
ಅತ್ತ ಸ್ನೇಹಳನ್ನು ಬಂಗಾರಮ್ಮ ಸೊಸೆ ಎಂದು ಒಪ್ಪಿಕೊಂಡರೆ, ಇತ್ತ ಮನೆ ಬಿಟ್ಟು ಬಂದ ಸಹನಾ ಪುಟ್ಟ ಹೋಟೆಲ್ ಆರಂಭಿಸಿ ತನ್ನ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ. ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಪುಟ್ಟಕ್ಕನಲ್ಲಿ ಸಹನಾ ಬದುಕಿರುವ ಬಗ್ಗೆ ಹೊಸ ಆಶಾಭಾವ ಮೂಡಿದ್ದು, ಮಗಳನ್ನು ಹುಡುಕಿಕೊಂಡು ಪುಟ್ಟಕ್ಕ ಬೆಂಗಳೂರಿಗೆ ತೆರಳಿದ್ದಾಳೆ. ಸದ್ಯದ ಕಥೆಯ ವಿವರ ಇದಾಗಿದ್ದು, ಮುಂದೆ ಏನಾಗಲಿದೆ ಎನ್ನುವ ಕುತೂಹಲ ವೀಕ್ಷರಲ್ಲಿ ಹೆಚ್ಚಿದೆ.

2. ಲಕ್ಷ್ಮೀ ನಿವಾಸ
ಇತ್ತೀಚೆಗೆ ಪ್ರಸಾರ ಕಂಡ ಲಕ್ಷ್ಮೀ ನಿವಾಸ ಧಾರಾವಾಹಿ ಈ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ಕೂಡ ಕುಟುಂಬದವರ ಕನಸಿನ ಬಗ್ಗೆ ಕಥಾಹಂದರ ಹೊಂದಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಒಂದೊಂದು ಪಾತ್ರವೂ ವೀಕ್ಷಕರಿಗೆ ಹತ್ತಿರವಾಗಿದೆ. ಸದ್ಯ ಧಾರಾವಾಹಿಯಲ್ಲಿ ಜಾಹ್ನವಿ-ಜಯಂತ್ ಜೋಡಿಯ ಸ್ಟೋರಿಯೇ ಹೈಲೆಟ್ ಆದರೆ, ಹರೀಶನ ಕಥೆ ಕೂಡ ಪ್ರೇಕ್ಷಕರಿಗೆ ಇಂಟ್ರಸ್ಟಿಂಗ್ ಎನಿಸಿದೆ. ಒಂದೆಡೆ ಜಯಂತ್ ನಡವಳಿಕೆ ಬಗ್ಗೆ ಅಜ್ಜಿಗೆ ಅನುಮಾನ ಬಂದರೆ, ಇನ್ನೊಂದೆಡೆ ಸಿದ್ಧೇಗೌಡರ ಮದುವೆ ತಯಾರಿ ಜೋರಾಗಿದೆ. ಮೊದ ಮೊದಲು ಮೊದಲ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಸದ್ಯ ಎರಡನೇ ಸ್ಥಾನಕ್ಕೆ ಕುಸಿದಿದ್ದು ಕಥೆ ಇನ್ನಷ್ಟು ಇಂಟ್ರಸ್ಟಿಂಗ್ ಆಗುವ ಸಾಧ್ಯತೆ ಇದೆ.

3. ಶ್ರಾವಣಿ ಸುಬ್ರಮಣ್ಯ
ಶ್ರಾವಣಿ ಸುಬ್ರಮಣ್ಯ ಈ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಿನಿಸ್ಟರ್ ಮಗಳು ಶ್ರಾವಣಿಯ ತರಲೆ, ಮಿನಿಸ್ಟರ್ ಬಲಗೈ ಬಂಟ ಸುಬ್ರಮಣ್ಯನ ಜೋಡಿ ನಡುವಿನ ಬಾಂಧವ್ಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇತ್ತೀಚಿಗೆ ತಂದೆಗೆ ಮಗಳ ಮೇಲೆ ಕಾಳಜಿ ಆರಂಭವಾಗಿದ್ದು, ಪರೀಕ್ಷೆಯಲ್ಲಿ ಪಾಸಾಗಿ ಶ್ರಾವಣಿ ತಂದೆ ಪ್ರೀತಿ ಪಡೆಯುತ್ತಾಳಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.

4. ಅಮೃತಧಾರೆ
ನಟ ರಾಜೇಶ್ ಛಾಯಾ ಸಿಂಗ್ ಅಭಿನಯದ ಅಮೃತಧಾರೆ ಧಾರಾವಾಹಿ ಈ ವಾರದ ಟಿಆರ್‌ಪಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಮೃತಧಾರೆ ಧಾರಾವಾಹಿ ಕಥೆ ಹಲವು ತಿರುವುಗಳನ್ನು ಪಡೆದು ಸಾಗುತ್ತಿದ್ದು, ಗೌತಮ್ ದಿವಾನ್ ಹಾಗೂ ಭೂಮಿಕಾ ನಡುವೆ ಪ್ರೀತಿ ಆರಂಭವಾಗಿದ್ದರೆ, ಇತ್ತ ಭಾವನ ತಮ್ಮನನ್ನೇ ಪ್ರೀತಿ ಮಾಡುತ್ತಿರುವ ಅಪೇಕ್ಷಾಳಿಗೆ ಮದುವೆ ಮಾಡಲು ಮಂದಾಕಿನಿ ಮುಂದಾಗಿದ್ದಾರೆ. ಇನ್ನು ಮಲ್ಲಿ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಜೈದೇವ್‌ಗೆ ಭೂಮಿಕಾ ಹೊಸ ಭಯ ಹುಟ್ಟಿಸಿದ್ದಾಳೆ. ಹೀಗೆ ಅಮೃತಧಾರೆ ಧಾರಾವಾಹಿ ಕಥೆ ಇಂಟ್ರಸ್ಟಿಂಗ್ ಆಗಿ ಸಾಗುತ್ತಿದೆ.

5. ಸೀತಾ ರಾಮ
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸೀತಾ ರಾಮ ಧಾರಾವಾಹಿ ಟಿಆರ್‌ಪಿ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಸೊಗಸಾದ ಹಾಡು, ವಿಭಿನ್ನವಾದ ಕಥೆಯಿಂದ ಜನರ ಮನಸ್ಸು ಗೆದ್ದಿರುವ ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಎನ್ನುವ ಪುಟಾಣಿಯ ಪಾತ್ರವೇ ಹೈಲೆಟ್. ಸದ್ಯ ಈ ಧಾರಾವಾಹಿಯಲ್ಲಿ ಸೀತಾ ರಾಮರ ಕಲ್ಯಾಣದ ಸಂಚಿಕೆಗಳು ನಡೆಯುತ್ತಿದ್ದು, ಸೀತಾ ರಾಮರ ವೈವಾಹಿಕ ಜೀವನಕ್ಕೆ ಸಿಹಿಯಾದ ಮುನ್ನುಡಿ ಬರೆಯಲಾಗಿದೆ. ಸದ್ಯ ಧಾರಾವಾಹಿ ಮುಖ್ಯ ಕಥೆಯತ್ತ ಸಾಗುತ್ತಿದೆ.












Click it and Unblock the Notifications