ಬಿಗ್‌ಬಾಸ್ ವಿನ್ನರ್ ಹನುಮಂತುಗೆ ಸಿಹಿಮುತ್ತಿನ ಕಾಟ, ಯಾರಿಂದ?
ಕನ್ನಡ ಬಿಗ್ ಬಾಸ್ ಸೀಸನ್ 11ರ ಕಿರೀಟ ಗೆಲ್ಲುವ ಮೂಲಕ ಹನುಮಂತ ಅವರು ಕರ್ನಾಟಕದ ಮನೆಮಾತಾಗಿದ್ದಾರೆ. ಗಾಯಕನಾಗಿ ಕನ್ನಡಿಗರ ಮುಂದೆ ಬಂದ ಹನುಮಂತ ಬಿಗ್‌ಬಾಸ್ ಮೂಲಕ ಮತ್ತಷ್ಟು ಹತ್ತಿರವಾಗಿದ್ದಾರೆ. ಬಿಗ್‌ಬಾಸ್ ವಿನ್ನರ್ ಆದ ಮೇಲಂತೂ ಇವರ ಹಳ್ಳಿಹೈದರೆಲ್ಲ ಇವರನ್ನು ನೋಡಿ ಭುಜ ತಟ್ಟಿಕೊಳ್ತಿದಾರೆ. ಆದರೆ, ಇತ್ತೀಚೆಗೆ ಒಂದು ಸಮಸ್ಯೆ ಎದುರಾಗಿದೆಯಂತೆ. ಅದೇನು ಅಂತಾ ಅವರೇ ಹೇಳಿದ್ದಾರೆ ನೋಡಿ..
ಹನುಮಂತು ಅವರು ಬಿಗ್‌ಬಾಸ್ ಕಿರೀಟ ಗೆದ್ದು ಬೀಗಿದ್ದಾರೆ. ಬಳಿಕ ಅವರ ಕರ್ನಾಟಕದ ಲೇಟೆಸ್ಟ್ ಸೆಲೆಬ್ರಿಟಿಯೂ ಆಗಿದ್ದಾರೆ. ಹನುಮಂತು ಹೋಗಿ ಬಂದಲ್ಲೆಲ್ಲ ಜನ ಮುತ್ತಿಕೊಳ್ಳುತ್ತಿದ್ದಾರೆ. ಹಳ್ಳಿಹೈದನಾದ ಹನುಮಂತನಿಗೆ ಇದನ್ನು ಕಂಡು ತುಸು ಹೆದರಿಕೆಯಾಗಿದ್ದೂ ಉಂಟು, ಜನ ತೋರಿಸುತ್ತಿರುವ ಪ್ರೀತಿಗೆ ಖುಷಿಯಾಗಿದ್ದೂ ಉಂಟು. ಆದರೆ ಹನುಮಂತು ಅವರಿಗೆ ಈಗ ಜನ ಮುತ್ತು ಕೊಡಲು ಮುಗಿಬೀಳುತ್ತಿದ್ದಾರಂತೆ.

ಹೌದು ಈ ಬಗ್ಗೆ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಹನುಮಂತ, ಜನ ನನ್ನ ನೋಡಲು ಬರ್ತಾರೆ. ಆಗ ನನ್ನ ಎಡಗೈಗೆ ಹೆಚ್ಚಾಗಿ ಮುತ್ತು ಕೊಡುತ್ತಾರೆ. ಆಗ ನಾನು ಯಾಕೆ ಇದೇ ಕೈಗೆ ಮುತ್ತು ಕೊಡ್ತೀರಿ ಎಂದು ಕೇಳಿದೆ. ಆಗ ಎಲ್ಲರೂ ಇದು ಕಿಚ್ಚ ಸುದೀಪ್ ಅವರು ಹಿಡಿದುಕೊಂಡಿದ್ದ ಕೈ ಎಂದು ಮುತ್ತು ಕೊಡುತ್ತಾರೆ. ಅನೇಕರು ಇದೇ ಮಾತನ್ನು ಹೇಳಿ ಕೈಗೆ ಮುತ್ತಿಕ್ಕುತ್ತಾರೆ ಎಂದು ಹನುಮಂತ ಹೇಳಿದ್ದಾರೆ.
ನಿನ್ನ ಕೈಯನ್ನ ಸುದೀಪ್ ಅವರು ಹಿಡಿದಿದ್ದರು. ಅವರು ನಿನ್ನನ್ನ ತಬ್ಬಿಕೊಂಡಿದ್ದರು. ಹಾಗಾಗಿ ನೀನು ತುಂಬಾ ಪುಣ್ಯವಂತ ಎಂದು ಹೇಳುತ್ತಾರೆ. ನಂತರ ನನ್ನನ್ನೂ ತಬ್ಬಿಕೊಳ್ತಾರೆ. ಈಗಂತೂ ನನ್ನ ಕೈಗೆ ಮುತ್ತು ನೀಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹನುಮಂತು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋಗೆ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ನೀಡಿದ್ದ ಹನುಮಂತ ಅವರು ಸೈಲೆಂಟಾಗಿದ್ದರು. ಫಿನಾಲೆ ವೇಳೆಗೆ ಚತುರತೆಯ ಆಟ ಪ್ರದರ್ಶಿಸಿ ವೀಕ್ಷಕರ ಮನಗೆದ್ದಿದ್ದರು. ಬರೋಬ್ಬರಿ 5,23,89,31 ಮತಗಳನ್ನು ಪಡೆಯುವ ಮೂಲಕ ಹನುಮಂತ ಲಮಾಣಿ ಬಿಗ್‌ಬಾಸ್ ಕನ್ನಡ ಸೀಸನ್ 11ರ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದರು. ಇನ್ನು ಬಿಗ್‌ಬಾಸ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೋಟ್ ಪಡೆದ ಸ್ಪರ್ಧಿಯಾಗಿಯೂ ಹನುಮಂತು ದಾಖಲೆ ನಿರ್ಮಿಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಯಾವುದೇ ಜಗಳವಾಡದೆ ತಮ್ಮ ಮುಗ್ಧ ಸ್ವಭಾದಿಂದಲೇ ಅವರು ವೀಕ್ಷಕರಿಗೆ ಹತ್ತಿರವಾಗಿದ್ದರು. ಹನುಮಂತ ಅವರ ಆಟದ ಶೈಲಿಯು ಕಿಚ್ಚ ಸುದೀಪ್ ಅವರಿಗೂ ಅಚ್ಚರಿ ಮೂಡಿಸಿತ್ತು. ಫಿನಾಲೆಯಲ್ಲಿ ಟ್ರೋಫಿ ಗೆಲ್ಲುವ ಮೂಲಕ ಹನುಮಂತು ಹಳ್ಳಿಹೈದರ ಬ್ರ್ಯಾಂಡ್ ಆದರು. ಈ ವೇಳೆ ಸುದೀಪ್ ಅವರು ಹನುಮಂತು ಅವರ ಕೈ ಹಿಡಿದು ವಿನ್ನರ್ ಎಂದು ಘೋಷಿಸಿದ್ದರು. ಹಾಗಾಗಿ ಸುದೀಪ್ ಅವರು ಹಿಡಿದಿದ್ದ ಕೈ ಎಂದು ಈಗ ಹನುಮಂತು ಕೈಗೆ ಎಲ್ಲೆಡೆ ಡಿಮ್ಯಾಂಡ್ ಹೆಚ್ಚಾಗಿದೆ. ಹನುಮಂತು ಎಲ್ಲಿ ಕಾಣಿಸಿಕೊಂಡರು ಜನ ಕಿಸ್...ಕಿಸ್...ಕಿಸ್...ಎಂದು ಹಿಂದೆ ಬೀಳುತ್ತಿದ್ದಾರೆ.












Click it and Unblock the Notifications