Reels Case: ರಜತ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ, ದಂಡ ಕಟ್ಟಿ ಸೇಫ್ ಆದ ವಿನಯ್ ಗೌಡ
ಮಚ್ಚು ಹಿಡಿದು ರೀಲ್ಸ್ ಮಾಡಿದ ಕೇಸ್‌ನಲ್ಲಿ ಬಿಗ್‌ಬಾಸ್ ಖ್ಯಾತಿಯ ರಜತ್ ಕಿಶನ್ ಅವರನ್ನು ಪೊಲೀಸರು ಎರಡನೇ ಬಾರಿ ಬಂಧಿಸಿದ್ದರು. ಜಾಮೀನು ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ರಜತ್‌ರನ್ನ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ರಜತ್ ಕಿಶನ್ ಜಾಮೀನು ರದ್ದು ಮಾಡಿದ ಕೋರ್ಟ್, ಏಪ್ರಿಲ್ 29ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹೀಗಾಗಿ ರಜತ್ ಅವರು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಲಿದ್ದಾರೆ.
ಇತ್ತೀಚೆಗೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪದ ಮೇರೆಗೆ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿ ಮೂರು ದಿನ ಕಸ್ಟಡಿಗೆ ನೀಡಲಾಗಿತ್ತು. ಬಳಿಕ ಇಬ್ಬರೂ ಜಾಮೀನು ಅರ್ಜಿ ಸಲ್ಲಿಸಿದ್ದರು. ಷರತ್ತುಗಳನ್ನು ವಿಧಿಸಿ ಇಬ್ಬರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆ ವಿನಯ್-ರಜತ್ ಜೈಲಿನಿಂದ ರಿಲೀಸ್ ಆಗಿದ್ದರು. ಆದರೆ ಜಾಮೀನು ಷರತ್ತಿನಂತೆ ರಜತ್ ಕಿಶನ್ ವಿಚಾರಣೆ ಹಾಜರಾಗದೆ ಗೈರಾಗಿದ್ದರು.

ಈ ಹಿನ್ನೆಲೆ ಎರಡು ಬಾರಿ ನೋಟಿಸ್ ಕೊಟ್ಟರೂ ರಜತ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆ ರಜತ್ ವಿರುದ್ಧ ವಾರಂಟ್ ಕೂಡ ಜಾರಿಯಾಗಿತ್ತು. ಇದನ್ನು ಕಡೆಗಣಿಸಿದ್ದ ರಜತ್‌ಗೆ ವಿಚಾರಣೆಗೆ ಬರುವಂತೆ ಮತ್ತೆ ನೋಟಿಸ್ ನೀಡಲಾಗಿತ್ತು. ಅದರಂತೆ ರಜತ್ ಇಂದು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ರಜತ್ ಅವರನ್ನು ಪೊಲೀಸರು ಮತ್ತೆ ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಿದರು.
ರಜತ್ ನಿಯಮ ಉಲ್ಲಂಘಿಸಿರುವ ಕಾರಣ ಜಾಮೀನು ರದ್ದು ಮಾಡಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ರಜತ್ ಪರ ವಕೀಲರು ಜಾಮೀನಿಗೆ ಮನವಿ ಮಾಡಿದ್ದು, ಇದರ ವಿಚಾರಣೆಯನ್ನು ನಾಳೆ (ಗುರುವಾರ) ನಡೆಸುವುದಾಗಿ ಕೋರ್ಟ್ ಹೇಳಿದೆ. ಒಂದು ವೇಳೆ ನಾಳಿನ ವಿಚಾರದಲ್ಲಿ ಜಾಮೀನು ಸಿಕ್ಕರಷ್ಟೇ ರಜತ್ ಮತ್ತೆ ರಿಲೀಫ್ ಆಗಲಿದ್ದಾರೆ. ಇಲ್ಲದಿದ್ದರೆ, ಮತ್ತೆ ರಜತ್‌ಗೆ ಜೈಲೇ ಗತಿಯಾಗಲಿದೆ. ರೀಲ್ಸ್ ಕೇಸ್‌ನಲ್ಲಿ ಒಂದು ಬಾರಿ ಅರೆಸ್ಟ್ ಆಗಿದ್ದ ರಜತ್, ಜಾಮೀನು ಸಿಕ್ಕ ಖುಷಿಯಲ್ಲಿದ್ದರು. ಆದರೆ ಷರತ್ತುಗಳನ್ನು ಪಾಲಿಸದ ಕಾರಣ ಅವರ ಜಾಮೀನು ರದ್ದಾಗಿದೆ.

ಬಂಧನದಿಂದ ವಿನಯ್ ಗೌಡ ಪಾರು!
ಇದೇ ಕೇಸ್‌ನಲ್ಲಿ ಮತ್ತೊಬ್ಬ ಆರೋಪಿಯಾಗಿರುವ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ ಅವರು ಕೂಡ ಇಂದು ಕೋರ್ಟ್‌ಗೆ ತಮ್ಮ ವಕೀಲರೊಂದಿಗೆ ಹಾಜರಾದರು. ಬಳಿಕ ದಂಡ ಪಾವತಿಸಿದ ಕಾರಣ ಅವರು ಬಂಧನದಿಂದ ಪಾರಾಗಿದ್ದಾರೆ. ವಿಚಾರಣೆ ಬಳಿಕ ಮಾತನಾಡಿರುವ ವಿನಯ್‌ಗೌಡ, ನಾನು ನಿನ್ನೆ ಸಂಜೆಯೂ ಖುದ್ದಾಗಿ ಪೊಲೀಸರ ಮುಂದೆ ಹಾಜರಾಗಿದ್ದೆ. ನನಗೆ ವಾರಂಟ್ ಆಗಿರಲಿಲ್ಲ. ಲಾಯರ್ ಮೂಲಕ ನಾನು ಹಾಜರಾದೆ ಎಂದಿದ್ದಾರೆ. ರಜತ್ ಮತ್ತೆ ಜೈಲಿಗೆ ಹೋಗಿದ್ದು ಬೇಸರ ತಂದಿದೆ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರೂ ಚೆನ್ನಾಗಿದ್ದೇವೆ ಎಂದು ವಿನಯ್ ಗೌಡ ಹೇಳಿದ್ದಾರೆ.












Click it and Unblock the Notifications