ಬಿಗ್‌ಬಾಸ್‌ನಿಂದ ಹೊರಬಂದ ಚೈತ್ರಾ ಮತ್ತೆ ಹಳೇ ಅಖಾಡಕ್ಕೆ ಎಂಟ್ರಿ
ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಅವರು ಭಾನುವಾರವೇ ಎಲಿಮಿನೇಟ್ ಆಗಿದ್ದಾರೆ. ಬಿಗ್‌ಬಾಸ್ ಪಯಣ ಮುಗಿಸಿರುವ ಚೈತ್ರಾ ಅವರು ಮತ್ತೆ ತಮ್ಮ ಹಳೆಯ ಅಖಾಡಕ್ಕಿಳಿದು ಅಬ್ಬರಿಸಿದ್ದಾರೆ. ಹಿಂದೂ ಕಾರ್ಯಕರ್ತೆ ಎಂದೇ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರು ಈ ಖ್ಯಾತಿಯಿಂದಲೇ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಇದೀಗ ಬಿಗ್‌ಬಾಸ್‌ನಿಂದ ಹೊರಗೆ ಬಂದ ಕೂಡಲೇ ಅವರು ಹಿಂದೂ ಕಾರ್ಯಕರ್ತೆಯಾಗಿ ಗುಡುಗಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದಿರುವ ಘಟನೆ ಹಿಂದೂ ಕಾರ್ಯಕರ್ತರಲ್ಲಿ ಕಿಚ್ಚು ಹೊತ್ತಿಸಿದೆ. ಇದೇ ವಿಚಾರವಾಗಿ ಮಾತನಾಡಿರುವ ಚೈತ್ರಾ ಕುಂದಾಪುರ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ಕಿಡಿಗೇಡಿಗಳು ಇಂದು ಹಸುವಿನ ಮೇಲೆ ಈ ರೀತಿ ಕೃತ್ಯ ಎಸಗಿದ್ದಾರೆ, ನಾಳೆ ಮನುಷ್ಯರ ಮೇಲೂ ಇದೇ ರೀತಿ ದಾಳಿ ಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಾಯಿ, ಬೆಕ್ಕುಗಳಿಗೆ ಏನಾದ್ರೂ ಆದಾಗ ಧ್ವನಿ ಎತ್ತುವ ಪ್ರಾಣಿದಯಾ ಸಂಘ ಈಗೆಲ್ಲಿವೆ? ಅವರಿಗೆ ಹಸುಗಳು ಪ್ರಾಣಿ ಎಂದು ಕಾಣಿಸುತ್ತಿಲ್ವಾ? ಹಸುಗಳಿಗಾಗಿ ಪ್ರಾಣಿ ದಯಾ ಸಂಘ ಧ್ವನಿ ಎತ್ತುವುದಿಲ್ಲವಾ? ಎಂದು ಆಕ್ರೋಶ ಹೊರಹಾಕಿದ್ದಾರೆ. ಬಿಹಾರದ ವ್ಯಕ್ತಿ ಬಂದು ಬೆಂಗಳೂರಿನಲ್ಲಿ ಹಸುಗಳ ಮೇಲೆ ಕ್ರೌರ್ಯ ಮೆರೆದಿದ್ದಾನೆ ಎಂದರೆ ಏನರ್ಥ? ರಾಜ್ಯ ಸರ್ಕಾರ ಇಂತಹ ಘಟನೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಾವು ಗೋವುಗಳನ್ನು ಮಾತೆ ಎಂದು ಪೂಜೆ ಮಾಡುತ್ತೇವೆ. ಆದರೆ ಕಿಡಿಗೇಡಿ ಆ ಮಾತೆಗೆ ಇಂತಹ ಕೃತ್ಯ ಎಸಗಿದ್ದಾನೆ. ಕುಡಿದ ಅಮಲಿನಲ್ಲಿ ಈ ಕ್ರೌರ್ಯ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಇದೊಂದು ಉದ್ದೇಶಪೂರ್ವಕವಾಗಿ ಮಾಡಿರುವ ಕೆಲಸ ಅನಿಸುತ್ತಿದೆ. ಇದನ್ನು ಒಂದು ಸಣ್ಣ ಪ್ರಕರಣ ಎಂದು ಭಾವಿಸಿರುವುದು ಬೇಸರ ತರಿಸಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಬಗ್ಗೆಯೂ ಆತನ ವಿರುದ್ಧ ಕೇಸ್ ದಾಖಲಿಸಬೇಕು. ಇದು ಚಿಕ್ಕ ಘಟನೆ ಅಲ್ಲವೇ ಅಲ್ಲ, ಇದರ ಹಿಂದೆ ಬೇರೇನೋ ಉದ್ದೇಶವಿದೆ ಎಂದು ಚೈತ್ರಾ ಕುಂದಾಪುರ ಅನುಮಾನ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?: ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲನ್ನು ಕತ್ತರಿಸುವ ಮೂಲಕ ಕಿಡಿಗೇಡಿಗಳು ವಿಕೃತ ಕೃತ್ಯ ಎಸಗಿತ್ತು. ಸದ್ಯ ಈ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಲಾಗಿದ್ದು, ಆತ ಬಿಹಾರ ಮೂಲದವನು ಎಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಮತಾಂಧರ ಅಡ್ಡೆಯಾಗಿರುವ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಿಡಿಗೇಡಿಗಳು ಬ್ಲೇಡ್‌ನಿಂದ ಗೋಮಾತೆಯ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಮಾಜಘಾತುಕರು ಚಾಮರಾಜಪೇಟೆಯ ವಿನಾಯಕ ನಗರದ ನಿವಾಸಿ ಕರ್ಣ ಎಂಬುವವರಿಗೆ ಸೇರಿದ 8 ಹಸುಗಳ ಪೈಕಿ 3 ಹಸುಗಳ ಕೆಚ್ಚಲು ಕೊಯ್ದಿದ್ದಾರೆ. ಚಾಮರಾಜಪೇಟೆಯ ಪಶು ಆಸ್ಪತ್ರೆಯನ್ನು ತೆರುವು ಮಾಡಲು ಭ್ರಷ್ಟ ಕಾಂಗ್ರೆಸ್ ಹೊಂಚು ಹಾಕಿ ಕೂತಿತ್ತು. ಈ ಹಿನ್ನೆಲೆ ಆಸ್ಪತ್ರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೆ ಹಸುಗಳ ಮಾಲೀಕ ಸಿದ್ಧರಾಗಿದ್ದರು. ಇದರ ನಡುವೆ ಇಂಥಹ ಅಮಾನವೀಯ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ.

ಈ ಘಟನೆಯನ್ನು ಖಂಡಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗೋವು ಅಂದ್ರೆ ಸಕಲ ಜೀವರಾಶಿಗಳಿಗೂ ಮಾತೆ. ಹೀಗಾಗಿ ಹಿಂದೂಗಳು ಗೋವನ್ನು ಮಾತೃದೇವತೆಯ ಸ್ಥಾನ ನೀಡಿ ಕಾಮಧೇನು ಎಂದು ಪೂಜಿಸುತ್ತಾರೆ. ಕರ್ನಾಟಕದ ಸಂಸ್ಕೃತಿಯಲ್ಲಿ ಪುಣ್ಯಕೋಟಿಯ ಕಥೆಯ ಹಾಡು ಜಗತ್ತಿನ ಮೂಲೆ ಮೂಲೆಗೂ ಪಸರಿಸಿದೆ ಎಂದಿದ್ದಾರೆ.
ನಾಳಿನ ಮಕರ ಸಂಕ್ರಾಂತಿಯಂದು ಗೋ ಮಾತೆಗೆ ಪೂಜೆ ಸಲ್ಲಿಸುವುದು ಹಬ್ಬದ ಆಚರಣೆಯ ಮಹತ್ವದ ಭಾಗ, ಇಂತಹ ಪಾವಿತ್ರ್ಯತೆಯ ಸಂದರ್ಭದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಭೀಕರವಾಗಿ ಕತ್ತರಿಸಿರುವುದು ಅತ್ಯಂತ ಹೇಯ, ಅಮಾನುಷ ಕೃತ್ಯವಾಗಿದ್ದು ಇದನ್ನು ಬಿಜೆಪಿ ಖಂಡಿಸುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದೆ. ಮೊನ್ನೆ ಗೋಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಪ್ರಕಟಿಸಿದ್ದೆಲ್ಲವೂ ಗೋ ಭಕ್ಷಕ ಜನರ ಓಲೈಕೆಗಾಗಿ ಅಲ್ಲದೆ ಬೇರೇನೂ ಅಲ್ಲ ಎಂದು ದೂರಿದ್ದಾರೆ. ಇರಿಯುವುದು, ಕತ್ತರಿಸುವುದನ್ನು ಕೇಳಿದ್ದೇವೆ, ಆದರೆ ಮಾತೃ ಕೊರತೆ ನೀಗಿಸಲು ಕ್ಷೀರಧಾರೆ ಹರಿಸುವ ಕೆಚ್ಚಲನ್ನೇ ಕತ್ತರಿಸುವಷ್ಟು ಪರಮ ನೀಚ ಕೃತ್ಯಕ್ಕೆ ಇಳಿದಿರುವ ಘಟನೆ ಕರ್ನಾಟಕದ ರಾಜಧಾನಿಯಲ್ಲೇ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಹಿಂದಿರುವ ಕುಮ್ಮಕ್ಕಿನ ಶಕ್ತಿ ಯಾವುದು ಎನ್ನುವುದು ಊಹಿಸಿಕೊಳ್ಳದಷ್ಟು ಕರುನಾಡಿನ ಜನತೆ ಮುಗ್ಧರಲ್ಲ, ಕೃತ್ಯ ನಡೆದಿರುವ ಕ್ಷೇತ್ರ ಯಾರ ಮುಷ್ಠಿಯಲ್ಲಿದೆ? ಈ ರಾಜ್ಯ ಆಳುತ್ತಿರುವವರ ಮನಸ್ಥಿತಿ ಯಾರ ಪರವಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ದಿನದಿಂದ ದಿನಕ್ಕೆ ಹಿಂದೂ ಆಚಾರ-ವಿಚಾರ ಹಾಗೂ ಜನರ ಮೇಲೆ ನಡೆಯುತ್ತಿರುವ ಅಟ್ಟಹಾಸ ಮೀರುತ್ತಿದೆ. ಜನರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಇಂತಹ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿಯಿರಿ, ಇಲ್ಲದಿದ್ರೆ ಇದಕ್ಕೆ ಕುಮ್ಮಕ್ಕು ನೀಡುತ್ತಿರುವವರು ಸರ್ಕಾರದ ಶಕ್ತಿಗಳು ಎಂಬ ತೀರ್ಮಾನಕ್ಕೆ ಬರಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.












Click it and Unblock the Notifications