Bigg Boss 12 Finale: ಬಿಗ್‌ಬಾಸ್ ಗೆಲ್ಲೋದು ನನ್ನ ಹಣೆಯಲ್ಲಿ ಬರೆದಿಲ್ಲ ಅಂದುಕೊಳ್ತೀನಿ: ಗಿಲ್ಲಿ
ಕನ್ನಡ ಬಿಗ್‌ಬಾಸ್ ಸೀಸನ್-12ರ ಬಹು ನಿರೀಕ್ಷಿತ ಗ್ರ್ಯಾಂಡ್ ಫಿನಾಲೆ ಅಧಿಕೃತವಾಗಿ ಆರಂಭಗೊಂಡಿರುವ ನಡುವೆಯೇ, ಫೇವರಿಟ್ ಸ್ಪರ್ಧಿ ಗಿಲ್ಲಿ ನೀಡಿದ ಒಂದು ಮಾತು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಆರಂಭದಿಂದಲೇ ಈ ಬಾರಿ ಬಿಗ್‌ಬಾಸ್ ಟ್ರೋಫಿ ಗಿಲ್ಲಿಯದ್ದೇ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿದ್ದರೂ, ಅಂತಿಮ ಕ್ಷಣದಲ್ಲಿ ಗಿಲ್ಲಿ ಹೇಳಿದ ಮಾತುಗಳು ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಇದರಿಂದ ಗಿಲ್ಲಿ ಅಭಿಮಾನಿಗಳು ಕೂಡ ಆಘಾತಕ್ಕೆ ಒಳಗಾಗಿದ್ದಾರೆ.
ಫಿನಾಲೆಯಲ್ಲಿ ಉಳಿದಿರುವ ಟಾಪ್ ಆರು ಸ್ಪರ್ಧಿಗಳ ಪೈಕಿ ಯಾರು ಮೊದಲು ಮನೆ ಬಿಡಬೇಕು? ಎಂದು ನಿರೂಪಕ ಕಿಚ್ಚ ಸುದೀಪ್ ಪ್ರಶ್ನಿಸಿದ ವೇಳೆ, ಗಿಲ್ಲಿ "ಬಿಗ್‌ಬಾಸ್ ಗೆಲ್ಲೋದು ನನ್ನ ಹಣೆಯಲ್ಲಿ ಬರೆದಿಲ್ಲ ಅಂದುಕೊಳ್ತೀನಿ" ಎಂದು ಹೇಳಿರುವ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಈ ಪ್ರೋಮೋ ಪ್ರಸಾರವಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ, ಊಹಾಪೋಹಗಳು ಜೋರಾಗಿವೆ.

ಗಿಲ್ಲಿಯೇ ವಿನ್ನರ್ ಟ್ರೆಂಡ್
ಈ ಸೀಸನ್ ಸಂಪೂರ್ಣವಾಗಿ ನೋಡಿದರೆ, ಗಿಲ್ಲಿ ತಮ್ಮ ನೇರ ಮಾತು, ಸ್ಪಷ್ಟ ನಿಲುವು, ಟಾಸ್ಕ್‌ಗಳಲ್ಲಿ ಹೋರಾಟ ಮತ್ತು ಯಾವುದೇ ರಾಜಿ ಇಲ್ಲದ ಆಟದ ಮೂಲಕ ಭಾರಿ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದರು. ಮನೆಯೊಳಗೆ ಆಗಾಗ ಉಂಟಾದ ಸಂಘರ್ಷಗಳಲ್ಲೂ ತಮ್ಮ ಅಭಿಪ್ರಾಯವನ್ನು ಧೈರ್ಯದಿಂದ ಹೇಳುವ ಗುಣವೇ ಅವರಿಗೆ ಜನಮನ್ನಣೆ ತಂದುಕೊಟ್ಟಿತ್ತು. ಹೀಗಾಗಿ, ವೋಟಿಂಗ್ ಅಂಕಿಅಂಶಗಳು ಹಾಗೂ ಸೋಷಿಯಲ್ ಮೀಡಿಯಾ ಟ್ರೆಂಡ್‌ಗಳನ್ನು ಗಮನಿಸಿದರೆ, ಗಿಲ್ಲಿಯೇ ವಿನ್ನರ್ ಎನ್ನುವ ಅಂದಾಜು ಬಹುತೇಕರು ಮಾಡಿಕೊಂಡಿದ್ದರು.
ಇಂತಹ ಸಂದರ್ಭದಲ್ಲಿ ಗಿಲ್ಲಿಯ ಈ ಮಾತುಗಳು ಅಭಿಮಾನಿಗಳಿಗೆ ಆಘಾತದಂತೆ ಭಾಸವಾಗಿವೆ. ಫಿನಾಲೆ ಹಂತದಲ್ಲಿ ಒತ್ತಡ, ಭಾವನಾತ್ಮಕ ಕ್ಷಣಗಳು ಹೆಚ್ಚಿರುವ ಕಾರಣ ಅವರು ಈ ರೀತಿ ಮಾತನಾಡಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ, ಕೆಲ ಅಭಿಮಾನಿಗಳು ಇದು ಪ್ರೋಮೋ ಎಡಿಟಿಂಗ್ ಅಥವಾ ಫಿನಾಲೆಯ ರೋಚಕತೆಯನ್ನು ಹೆಚ್ಚಿಸಲು ಬಳಸಿದ ತಂತ್ರವಾಗಿರಬಹುದು ಎಂದು ಊಹಿಸುತ್ತಿದ್ದಾರೆ.
ಮತ್ತೊಂದೆಡೆ ಈಗಾಗಲೇ ಜ್ಯೋತಿಷಿಗಳ ಭವಿಷ್ಯವಾಣಿಗಳು, ದಾಖಲೆ ಮಟ್ಟದ ವೋಟಿಂಗ್, ಹಾಗೂ ಅಲ್ಪ ಮತಾಂತರದ ಬಗ್ಗೆ ಕಿಚ್ಚ ಸುದೀಪ್ ನೀಡಿದ್ದ ಹೇಳಿಕೆಗಳು ಫಿನಾಲೆಗೆ ಇನ್ನಷ್ಟು ಕುತೂಹಲವನ್ನು ತಂದಿವೆ. ಗಿಲ್ಲಿಯ ಈ ಮಾತುಗಳು, ವಿನ್ನರ್ ಘೋಷಣೆಗೆ ಕೊನೆಯ ಕ್ಷಣದವರೆಗೂ ಸಸ್ಪೆನ್ಸ್ ಉಳಿಯಲಿದೆ. ಕನ್ನಡ ಬಿಗ್‌ಬಾಸ್-12ರ ಗ್ರ್ಯಾಂಡ್ ಫಿನಾಲೆ ಭಾವನಾತ್ಮಕ ಕ್ಷಣಗಳು, ಅಚ್ಚರಿ ತಿರುವುಗಳು ಮತ್ತು ಭಾರೀ ಕುತೂಹಲದ ನಡುವೆ ಸಾಗುತ್ತಿದ್ದು, ಗಿಲ್ಲಿಯ ಈ ಹೇಳಿಕೆ ಫಿನಾಲೆಯ ಹವಾ ಮತ್ತಷ್ಟು ಹೆಚ್ಚಾಗಿದೆ. ಅವರು ಹೇಳಿದಂತೆ ಅದೊಂದು ಭಾವನಾತ್ಮಕ ಮಾತೇ, ಅಥವಾ ಫಲಿತಾಂಶದ ಮುನ್ಸೂಚನೆಯೇ ಎಂಬುದಕ್ಕೆ ಉತ್ತರ ಸಿಗಲು ಇನ್ನು ಕೆಲವೇ ಕ್ಷಣಗಳು ಬಾಕಿಯಿವೆ.












Click it and Unblock the Notifications