"ಆ ಎರಡು ಜಾಗದಲ್ಲಿ ನನಗೆ ಭಯಾನಕ ಅನುಭವ ಆಯ್ತು, ತಾಯತ ಕಟ್ಟಿಸಿಕೊಂಡೆ"
ದೆವ್ವ, ಭೂತ ಅಂದ್ರೆ ಈ ಕಾಲದವರು ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಇನ್ನೂ ಯಾವ ಕಾಲದಲ್ಲಿದ್ದೀಯ ಸುಮ್ನೆ ನಡಿ ಅಂತಿರ್ತಾರೆ. ಆದರೆ "ಅಮೃತ ವರ್ಷಿಣಿ" ಹಾಗೂ "ನೀ ಇರಲು ಜೊತೆಯಲಿ" ಸೀರಿಯಲ್‌ಗಳ ಮೂಲಕ ಮನೆಮಾತಾಗಿರುವ ಕಿರುತೆರೆ ನಟಿ ರಜಿನಿ ಅವರಿಗೂ ದೆವ್ವ ಭೂತದ ಅನುಭವಗಳಾಗಿದೆಯಂತೆ. ಒಂದಲ್ಲ, ಎರಡು ಜಾಗಗಳಲ್ಲಿ ತಮಗೆ ಈ ರೀತಿಯ ಭಯಾನಕ ಅನುಭವಗಳಾಗಿತ್ತು ಎಂದು ಇತ್ತೀಚಿನ ಸಂದರ್ಶನದಲ್ಲಿ ಬಿಚ್ಚಿಬೀಳಿಸುವ ಸಂಗತಿಗಳನ್ನು ಹೇಳಿಕೊಂಡಿದ್ದಾರೆ.
'ಮೊದಲು ನಾನು ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನನಗೊಂದು ಭಯಾನಕ ಅನುಭವ ಆಗಿತ್ತು. ಆಗ ಗಾಡಿಯಲ್ಲಿ ಟ್ರಾವೆಲ್ ಮಾಡಬೇಕಿತ್ತು. ಮಾರ್ಗಮಧ್ಯೆ ನಮಗೆ ವಾಶ್‌ರೂಂ ವ್ಯವಸ್ಥೆ ಎಲ್ಲ ಇರುತ್ತಿರಲಿಲ್ಲ. ಹೀಗಾಗಿ ಎಲ್ಲಾದ್ರೂ ರಸ್ತೆ ಪಕ್ಕ ನಿಲ್ಲಿಸ್ತಿದ್ರು. ಒಂದು ರಾತ್ರಿ ನನಗೆ ಅಂತಹ ಭಯಾನಕ ಅನುಭವ ಆಗಿತ್ತು. ಏನೋ ಮನೆಗೆ ಬಂದಿರೋ ತರ, ನಾನು ಮಲಗಿದ್ದಾಗ ಓಡಾಡೋ ತರ ಎಲ್ಲ ಅನಿಸಿತ್ತು. ತುರುವೇಕೆರೆ ಅಂತ ಒಂದು ಊರು. ಅಲ್ಲಿಂದ ಬಂದ ಮೇಲೆ ನನಗೆ ಈ ರೀತಿಯ ಅನುಭವಗಳಾಗಿತ್ತು' ಎಂದು ರಾಜೇಶ್‌ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ರಜಿನಿ ಹೇಳಿದ್ದಾರೆ.

'ತುರುವೇಕೆರೆ ಬಳಿ ಹೋಗುತ್ತಿದ್ದಾಗ ವಾಶ್‌ರೂಂಗಾಗಿ ನಿಲ್ಲಿಸಿದ್ರು. ಅಲ್ಲಿ ಕೆರೆ ಏರಿ ಇದೆ. ಅಲ್ಲೇ ನಾವು ಲೇಡೀಸ್ ಎಲ್ಲ ಹೋಗಿದ್ವಿ. ಅಲ್ಲಿಂದ ಮನೆಗೆ ಬಂದ ಮೇಲೆ ಇಂತಹ ಅನುಭವ ಆಗಿತ್ತು. ಆ ಮೇಲೆ ನನ್ನ ತಾಯಿ ಕರ್ಕೊಂಡು ಹೋಗಿ ತಾಯತ ಕಟ್ಟಿಸಿದ್ರು. ಆ ಮೇಲೆ ಸರಿ ಹೋಯ್ತು' ಎಂದು ರಾಜೇಶ್ ಗೌಡ ಯುಟ್ಯೂಬ್ ಚಾನಲ್‌ನಲ್ಲಿ ರಜಿನಿ ತಿಳಿಸಿದ್ದಾರೆ.
'ಮಲ್ಲಿಗೆ ಮುಡಿದಾಗ ಆ ರೀತಿ ಆಗ್ತಿತ್ತು'
'ಅಮೃತವರ್ಷಿಣಿ ಸೆಟ್‌ನಲ್ಲೂ ನನಗೆ ಕೆಟ್ಟ ಅನುಭವ ಆಗಿತ್ತು. ರಾಜರಾಜೇಶ್ವರಿ ನಗರದಲ್ಲಿದ್ದ ಮನೆಯಲ್ಲಿ ನಾಲ್ಕು ವರ್ಷ ಸೀರಿಯಲ್ ಶೂಟಿಂಗ್ ಮಾಡಿದ್ವಿ. ಆ ಮನೆಯಲ್ಲಿ ಹೆಚ್ಚಾಗಿ ನಕಾರಾತ್ಮಕ ಭಾವನೆ ಕೊಡುತ್ತಿತ್ತು. ನಾನು ಯಾವಾಗಲೂ ನನ್ನ ಪಾತ್ರಕ್ಕಾಗಿ ಸೀರೆ, ಮಲ್ಲಿಗೆ ಹೂವು ಮುಡಿಯುತ್ತಿದ್ದೆ. ಮಲ್ಲಿಗೆ ಹೂವಿಗೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಆಕರ್ಷಿತವಾಗುತ್ತೆ ಅಂತ ನಾನು ಎಲ್ಲೋ ಕೇಳಿದ್ದೆ'.
'ಆ ಸೆಟ್‌ನಲ್ಲಿ ನಾನು ಶೂಟಿಂಗ್ ಇಲ್ಲದಾಗ ಕೋಣೆಯಲ್ಲಿ ಮಲಗಿರುತ್ತಿದ್ದೆ. ನಾನು ಹೂವು ಮುಡಿದಿದ್ದಾಗ ಏನೇ ಹೀಗೆ ನನ್ನ ಮೇಲೆ ಬಂದು ಕುಳಿತಂತೆ ಆಗುತ್ತಿತ್ತು. ಅದು ನನಗೆ ಕ್ಲಿಯರ್ ಆಗಿ ಗೊತ್ತಾಗುತ್ತಿತ್ತು. ಆಗ ನನ್ನ ಅಕ್ಕಪಕ್ಕದಲ್ಲೇ ಜನ ಇದ್ದರೂ ಮಾತನಾಡೋಕೆ, ಕಿರುಚಾಡಲು ಕೂಡ ಆಗುತ್ತಿರಲಿಲ್ಲ. ಆದರೆ ಹೂವು ಮುಡಿಯದೆ ಮಲಗಿದ್ರೆ ಆ ರೀತಿ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಹೂವು ಮುಡಿದಾಗ ಮಾತ್ರವೇ ಹಾಗೆ ಆಗ್ತಿತ್ತು. ಆ ಮೇಲೆ ಒಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ, ತಾಯತ ಕಟ್ಕೊಂಡು ಬಂದೆ' ಎಂದು ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ.












Click it and Unblock the Notifications