ಎರಡ್ಮೂರು ವರ್ಷಕ್ಕೊಂದು ಸಿನಿಮಾ ಮಾಡೋ ಹೀರೋಗಳಿಗೆ ಗಣೇಶ್ ಕೌಂಟರ್
ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳ ಕೊರತೆ ಇದೆ. ಪ್ರಮುಖ ನಟರ ಸಿನಿಮಾಗಳು ಕೂಡ ತಡವಾಗಿ ತೆರೆ ಕಾಣುತ್ತಿವೆ ಎನ್ನುವುದು ಕನ್ನಡ ಸಿನಿಪ್ರೇಕ್ಷಕರ ಮಾತು. ಮೊದಲಾದರೆ ವರ್ಷವಿಡೀ ಸ್ಯಾಂಡಲ್‌ವುಡ್ ಹೀರೋಗಳ ಸಿನಿಮಾಗಳು ಸಾಲು ಸಾಲಾಗಿ ರಿಲೀಸ್ ಆಗುತ್ತಿತ್ತು. ಆದರೆ ಕಳೆದ ವರ್ಷಗಳಲ್ಲಿ ಪ್ರಮುಖ ನಟರ ಸಿನಿಮಾಗಳು ವರ್ಷಕ್ಕೋ, ಎರಡು ವರ್ಷಕ್ಕೋ ಬಿಡುಗಡೆಯಾಗುತ್ತಿದೆ. ಇದು ಚಿತ್ರರಂಗದ ಮೇಲೆ ಭಾರಿ ಹೊಡೆತ ಬಿದ್ದಿದೆ ಎಂದು ದೂರು ಕೂಡ ಇದೆ. ಈಗ ಇದೇ ವಿಚಾರವಾಗಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರು ಇರುವುದೇ ಬೆರಳೆಣಿಕೆ ಮಂದಿ. ಹಾಗಾಗಿ ಮೊದಲೆಲ್ಲ ಈ ನಟರ ಸಿನಿಮಾ ವರ್ಷಕ್ಕೆ ಒಂದು ಅಥವಾ ಎರಡು ರಿಲೀಸ್ ಆಗುತ್ತಿತ್ತು. ಫ್ಯಾನ್ಸ್ ಕೂಡ ನೆಚ್ಚಿನ ನಟನ ಸಿನಿಮಾ ಕಣ್ತುಂಬಿಕೊಂಡು ಶಿಳ್ಳೆ ಹೊಡೆಯುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೆಲವು ನಟರ ಸಿನಿಮಾಗಳು ತುಂಬಾ ಟೈಮ್ ತೆಗೆದುಕೊಳ್ಳುತ್ತಿವೆ. ಅದರಲ್ಲೂ ಸ್ಟಾರ್ ನಟರ ಸಿನಿಮಾಗಳು ಮೂರು ವರ್ಷಕ್ಕೊಂದು, ಎರಡು ವರ್ಷಕ್ಕೊಂದು ರಿಲೀಸ್ ಆಗತೊಡಗಿದೆ. ಕೆಲವು ನಟರದ್ದು ಮಾತ್ರ ಕನಿಷ್ಠ ಒಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ನಟ ಗಣೇಶ್ ಅವರೂ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದರ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರು, 'ನಾನು ಕನ್ನಡ ಚಿತ್ರರಂಗಕ್ಕೆ ಬಂದು ಎರಡು ದಶಕಗಳು ಕಳೆದಿವೆ. ಈ ಹಿಂದೆ ಕನ್ನಡ ಸಿನಿಮಾಗಳು ಥಿಯೇಟರ್‌ಗಳಲ್ಲಿ 50ರಿಂದ 100 ದಿನಗಳವರೆಗೆ ಪ್ರದರ್ಶನ ಕಾಣುತ್ತಿತ್ತು. ಮೊದಲಿಗೆ ಒಂದು ವರ್ಷಕ್ಕೆ ಐದು ಸಿನಿಮಾ ಆದ್ರೂ ಮಾಡ್ತಿದ್ವಿ' ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ ಮಳೆ ಹುಡುಗ ಗಣೇಶ್.
'ಆದರೆ ಈಗ ಎಂತಹ ಸಿನಿಮಾ ಆದರೂ ಕನ್ನಡದಲ್ಲಿ ಪ್ರದರ್ಶನ ಕಾಣುತ್ತಿರುವುದು ಅಬ್ಬಬ್ಬಾ ಅಂದ್ರೆ ಎರಡು ವಾರ. ಕನ್ನಡದಲ್ಲಿ ಈಗ ಒಂದು ವರ್ಷಕ್ಕೋ ಅಥವಾ ಎರಡು ವರ್ಷಕ್ಕೋ ಒಂದು ಸಿನಿಮಾ ಮಾಡುವ ಪರಿಸ್ಥಿತಿ ಬಂದಿದೆ. ಇದು ಹೀಗೆಯೇ ಮುಂದುವರಿದರೆ ಸ್ಯಾಂಡಲ್‌ವುಡ್‌ಗೆ ದೊಡ್ಡ ಹೊಡೆತ ಬೀಳಲಿದೆ. ಇದು ಯಾಕೋ ಸರಿ ಹೋಗುತ್ತಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಹೀಗಾಗಿ ನಾನು ಒಂದು ವರ್ಷಕ್ಕೆ ಮೂರು ಸಿನಿಮಾ ಆದ್ರೂ ಮಾಡಬೇಕು ಎಂದುಕೊಂಡಿದ್ದೇನೆ' ಎಂದು ಗಣೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ನನ್ನ ಒಂದು ಸಿನಿಮಾ ಈಗಾಗಲೇ ಶೂಟಿಂಗ್ ಮುಗಿದಿದೆ. ಇದೇ ತಿಂಗಳಿನಿಂದ "ಪಿನಾಕ" ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಇದರ ಜೊತೆಗೆ ಇನ್ನೊಂದು ಸಿನಿಮಾ ಕೂಡ ಸೆಟ್ಟೇರಲಿದೆ. ಹೀಗಾಗಿ ಈ ವರ್ಷ ನನ್ನ ಮೂರು ಸಿನಿಮಾಗಳು ಥಿಯೇಟರ್‌ಗೆ ಬರುತ್ತೆ. ನಾನಂತೂ ಈಗ ಒಂದು ತಿಂಗಳಲ್ಲಿ ಕನಿಷ್ಠ 25 ದಿನವಾದರೂ ಸಿನಿಮಾಗಳಿಗೆ ಡೇಟ್ಸ್ ಕೊಡುತ್ತಿದ್ದೀನಿ. ಒಟ್ಟಾರೆ ವರ್ಷವಿಡೀ ನಾನು ಬಿಡುವಿಲ್ಲದೇ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದೇನೆ' ಎಂದಿದ್ದಾರೆ.

'ಒಂದು ಸಿನಿಮಾ ಚೆನ್ನಾಗಿದ್ದರೆ, ಪ್ರೇಕ್ಷಕರು ಎತ್ತಿನ ಬಂಡಿ, ಆಟೋ ಟೆಂಪೋ ಹತ್ತಿಕೊಂಡಾದರೂ ಥಿಯೇಟರ್‌ಗಳಿಗೆ ಬರುವುದನ್ನು ನಾನು ನೋಡಿದ್ದೇನೆ. ಹಾಗಾಗಿ ಸಿನಿಮಾಗಳಿಗೆ ಪ್ರೇಕ್ಷಕರು ಬರೋದಿಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಅದೇ ಒಂದು ಸಿನಿಮಾ ಕೆಟ್ಟದಾಗಿದ್ದರೆ ಜನರಿಗೆ ಹಣ ಕೊಟ್ಟು, ಒಳ್ಳೆ ಊಟ ಹಾಕಿಸಿ ಸಿನಿಮಾ ನೋಡ್ರಪ್ಪ ಅಂದ್ರೂ ಥಿಯೇಟರ್ ಕಡೆಗೆ ಕಾಲಿಡಲ್ಲ. ಹಾಗಾಗಿ ಪ್ರೇಕ್ಷಕರ ಕಡೆ ಬೊಟ್ಟು ಮಾಡುವುದು ತಪ್ಪಾಗುತ್ತೆ. ಸಿನಿಮಾ ತಂಡಗಳು ಚೆನ್ನಾಗಿ ಕೆಲಸ ಮಾಡಿದರೆ ಪ್ರೇಕ್ಷಕರು ಎಂದಿಗೂ ಕೈಹಿಡಿಯುತ್ತಾರೆ' ಎಂದು ಗಣೇಶ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications