₹15 ಲಕ್ಷ ಸಂಬಳ ಕೊಡಬೇಕು, ನಾನು ಒಂಟಿ ಮಹಿಳೆ: ನೆರೆ ಪರಿಹಾರ ಕೇಳಿದ್ದಕ್ಕೆ ನಟಿ ಕಂಗನಾ ಗರಂ
ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಅವರು ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ. ಸಾಮಾನ್ಯವಾಗಿ ತಮ್ಮ ಕ್ಷೇತ್ರದ ಜನರು ಸಮಸ್ಯೆ ಅಂತ ಬಂದಾಗ ಜನಪ್ರತಿನಿಧಿಗಳು ಅದಕ್ಕೆ ಸ್ಪಂದಿಸಬೇಕು. ಆದರೆ ರಾಜಕಾರಣಿಯಾಗಿರುವ ನಟಿ ಕಂಗನಾ ರನೌತ್, ತಮ್ಮ ಬಳಿ ಸಮಸ್ಯೆ ಹೇಳಿಕೊಂಡವರಿಗೆ ತಮ್ಮದೇ ಸಮಸ್ಯೆ ಹೇಳಿಕೊಂಡು ಟೀಕೆಗೆ ಗುರಿಯಾಗಿದ್ದಾರೆ. ಕುಲು-ಮನಾಲಿಯಲ್ಲಿ ಭೀಕರ ದುರಂತ ಸಂಭವಿಸಿ, ಮೂರು ವಾರಗಳ ನಂತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂಡಿ ಸಂಸದೆ ಕಂಗನಾ ರನೌತ್ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.
ಕಂಗನಾ ಅವರನ್ನ ಕಪ್ಪು ಬಾವುಟಗಳೊಂದಿಗೆ ಅಲ್ಲಿನ ಜನ ಸ್ವಾಗತಿಸಿದರು. ಗೋ ಬ್ಯಾಕ್ ಘೋಷಣೆಗಳನ್ನು ಕೂಗಲಾಯಿತು. ಸಮಸ್ಯೆ ಹೇಳಿಕೊಳ್ಳಲು ಬಂದ ಸಾರ್ವಜನಿಕರಿಗೆ ಪರಿಹಾರದ ಬದಲಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ನೀವು ನನ್ನ ಮೇಲೆ ದಾಳಿ ಮಾಡಲು ಅಥವಾ ಪ್ರಶ್ನೆಗಳನ್ನು ಕೇಳಲು ಬಂದಿದ್ದೀರಾ? ಶಾಂತವಾಗಿರಿ ಎಂದು ಕಂಗನಾ ಡೈಲಾಗ್ ಹೊಡೆದಿದ್ದಾರೆ.

ಮನಾಲಿಯಲ್ಲಿ ಮನೆ ಹೊಂದಿರುವ ಕಂಗನಾ, ಈ ವರ್ಷದ ಫೆಬ್ರವರಿಯಲ್ಲಿ ರೆಸ್ಟೋರೆಂಟ್‌ವೊಂದನ್ನು ತೆರೆದಿದ್ದಾರೆ. ಮನಾಲಿಯ ಮಾಜಿ ಬಿಜೆಪಿ ಶಾಸಕ ಗೋಬಿಂದ್ ಠಾಕೂರ್ ಮತ್ತು ಬಿಜೆಪಿ ರಾಜ್ಯ ವಕ್ತಾರ ಅಖಿಲೇಶ್ ಕಪೂರ್ ಅವರೊಂದಿಗೆ ಕಂಗನಾ ಸೋಲಾಂಗ್ ಕಣಿವೆ, ಬಹ್ಂಗ್ ಗ್ರಾಮ, ಪಲ್ಚನ್ ಮತ್ತು ಪಟ್ಲಿಕುಹಾಲ್ ಸೇರಿದಂತೆ ಪ್ರವಾಹ, ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ನನ್ನ ರೆಸ್ಟೋರೆಂಟ್‌ನಲ್ಲಿ ಕೇವಲ ₹50 ಬಿಸಿನೆಸ್ ಆಗಿದೆ
ಆಗ ಹಿಮಾಚಲ ಪ್ರದೇಶದ ವಿಪತ್ತು ಪೀಡಿತ ಜನರಿಗೆ ಹಣ ಸಂಗ್ರಹ ಏಕೆ ಮಾಡಲಿಲ್ಲ ನೀವು ಎಂದು ಮಾಧ್ಯಮದವರು ಕೂಡ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಕಂಗನಾ, ನನ್ನ ದುಃಖವನ್ನ ನೀವು ಅರ್ಥಮಾಡಿಕೊಳ್ಳಿ. ನಾನು ಕೂಡ ಒಬ್ಬ ಮನುಷ್ಯಳು. ನನಗೂ ಇಲ್ಲಿ ಒಂದು ಮನೆ ಮತ್ತು ಒಂದು ರೆಸ್ಟೋರೆಂಟ್ ಇದೆ. ನನ್ನ ರೆಸ್ಟೋರೆಂಟ್‌ನಲ್ಲಿ ನಿನ್ನೆ ಕೇವಲ 50 ರೂಪಾಯಿ ಬಿಸಿನೆಸ್ ಆಗಿದೆ. ಅಲ್ಲಿನ ಉದ್ಯೋಗಿಗಳಿಗೆ ನಾನೂ ಮಾಸಿಕ 15 ಲಕ್ಷ ರೂಪಾಯಿ ಸಂಬಳ ಕೊಡಬೇಕು. ನಾನು ಒಂಟಿ ಮಹಿಳೆ, ಸಂತ್ರಸ್ತರಿಗೆ ಏನನ್ನೂ ಮಾಡುತ್ತಿಲ್ಲ ಎಂಬಂತೆ ನನ್ನ ಮೇಲೆ ದಾಳಿ ಮಾಡಬೇಡಿ. ನಾನು ಕೂಡ ನಿಮ್ಮಂತೆ ಒಬ್ಬಳು ಎಂದಿದ್ದಾರೆ.

ಕಂಗನಾ ಪಟ್ಲಿಕುಹಾಲ್ ತಲುಪಿದಾಗ ಸ್ಥಳೀಯ ಕಾಂಗ್ರೆಸ್ ಬೆಂಬಲಿಗರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ, ಕಂಗನಾ ಹಿಂತಿರುಗಿ ಎಂದು ಘೋಷಣೆಗಳನ್ನ ಕೂಗಿದರು. ಕಳೆದ ಜುಲೈನಲ್ಲೂ ತಮ್ಮ ಕ್ಷೇತ್ರವಾದ ಮಂಡಿಯ ಪ್ರವಾಹ ಪೀಡಿತ ಸೆರಾಜ್ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಗನಾ ವಿವಾದಕ್ಕೆ ಕಾರಣರಾಗಿದ್ದರು. ವಿಪತ್ತು ಪೀಡಿತರಿಗೆ ಆರ್ಥಿಕ ಸಹಾಯದ ಬಗ್ಗೆ ಕೇಳಿದಾಗ, ಕಂಗನಾ ಅವರು ತಮ್ಮ ಬಳಿ ಸಚಿವ ಸ್ಥಾನ ಅಥವಾ ನಿಧಿ ಇಲ್ಲದ ಕಾರಣ ಅಸಹಾಯಕಳಾಗಿದ್ದೇನೆ ಎಂದಿದ್ದರು. ಇದೀಗ ಮತ್ತೆ ನಿರ್ಲಕ್ಷ್ಯದ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.












Click it and Unblock the Notifications