Jason Sanjay: ತಂದೆಯ ಪ್ರಮಾಣವಚನಕ್ಕೂ ಗೈರು, ತಮಿಳುನಾಡು ಸಿಎಂ ಆದ ಬೆನ್ನಲ್ಲೇ ವಿಜಯ್‌ಗೆ ಮತ್ತೊಂದು ಶಾಕ್ ಕೊಟ್ಟ ಪುತ್ರ
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಭರ್ಜರಿ ಯಶಸ್ಸಿನ ನಂತರ ನಟ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಈ ಸಂಭ್ರಮದ ನಡುವೆಯೇ ವಿಜಯ್ ಅವರ ಕುಟುಂಬದಲ್ಲಿನ ಬಿರುಕು ಮತ್ತೊಮ್ಮೆ ಬಹಿರಂಗವಾಗಿದ್ದು, ಅವರ ಪುತ್ರ ಜೇಸನ್ ಸಂಜಯ್ ಅವರ ಕೆಲವು ನಿರ್ಧಾರಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.
ಸಹಿಯಲ್ಲಿದ್ದ ತಂದೆಯ V ಹೆಸರು ಬದಲು
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಜೇಸನ್ ಸಂಜಯ್ ಅವರು ತಮ್ಮ ಸಹಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಹಿಂದೆ "Jason Sanjay V" (ತಂದೆ ವಿಜಯ್ ಹೆಸರಿನ ಮೊದಲ ಅಕ್ಷರ) ಎಂದು ಸಹಿ ಮಾಡುತ್ತಿದ್ದ ಅವರು, ಈಗ ಅದನ್ನು ಬದಲಿಸಿ "Jason Sanjay S" (ತಾಯಿ ಸಂಗೀತ ಹೆಸರಿನ ಮೊದಲ ಅಕ್ಷರ) ಎಂದು ಬಳಸುತ್ತಿದ್ದಾರೆ ಎನ್ನಲಾಗಿದೆ.

ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಪ್ರಮಾಣವಚನ ಸಮಾರಂಭಕ್ಕೆ ವಿಜಯ್ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಗೈರಾಗಿದ್ದರು. ವಿಜಯ್ ಮತ್ತು ಸಂಗೀತ ನಡುವೆ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಅನ್‌ಫಾಲೋ
ಈ ವರ್ಷದ ಆರಂಭದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಕೆಯಾದ ಬೆನ್ನಲ್ಲೇ ಜೇಸನ್ ಸಂಜಯ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಂದೆಯನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ವರದಿಗಳೂ ಕೇಳಿಬಂದಿವೆ. ಕುಟುಂಬದ ಸದಸ್ಯರು ಗೈರಾಗಿದ್ದರೂ, ವಿಜಯ್ ಅವರ ಪೋಷಕರಾದ ಶೋಭಾ ಚಂದ್ರಶೇಖರ್ ಮತ್ತು ಎಸ್.ಎ. ಚಂದ್ರಶೇಖರ್ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಗನಿಗೆ ಬೆಂಬಲ ನೀಡಿದರು. ಅಲ್ಲದೆ, ನಟಿ ತ್ರಿಶಾ ಕೃಷ್ಣನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ರಾಜಕೀಯದಲ್ಲಿ ದೊಡ್ಡ ಇತಿಹಾಸ ಬರೆದಿರುವ ವಿಜಯ್ ಅವರ ವೈಯಕ್ತಿಕ ಜೀವನದ ಈ ಏರಿಳಿತಗಳು ಈಗ ಅವರ ಅಭಿಮಾನಿಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅವರ ಪತ್ನಿ ಸಂಗೀತ ಅವರ ಅನುಪಸ್ಥಿತಿ ಇಂಟರ್ನೆಟ್‌ನಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯವಾಯಿತು. ಕಳೆದ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಸಂಗೀತ, ವಿಜಯ್ ವಿರುದ್ಧ ಪರ ಸ್ತ್ರೀ ಸಂಬಂಧದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 2021ರ ಏಪ್ರಿಲ್‌ನಲ್ಲಿ ಪತಿ ವಿಜಯ್ ಅವರು ನಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿರುವುದು ನನ್ನ ಗಮನಕ್ಕೆ ಬಂದಿತು. ಇದು ನನಗೆ ತೀವ್ರ ಮಾನಸಿಕ ವೇದನೆ ಉಂಟುಮಾಡಿದ್ದಲ್ಲದೆ, ವೈವಾಹಿಕ ಜೀವನದ ನಂಬಿಕೆಗೆ ಎಸಗಿದ ದ್ರೋಹ ಎಂದು ಸಂಗೀತಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ವದಂತಿಗಳ ಬಗ್ಗೆ ನಟ ವಿಜಯ್ ಆಗಲಿ ಅಥವಾ ಅವರ ಹೆಸರಿನೊಂದಿಗೆ ಕೇಳಿಬರುತ್ತಿರುವ ನಟಿ ತ್ರಿಶಾ ಆಗಲಿ ಈವರೆಗೆ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ವಿಜಯ್ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ, ಪತ್ನಿ ಸಂಗೀತ ಹೆಸರಿನಲ್ಲಿರುವ ಸ್ಥಿರ ಠೇವಣಿ ಮತ್ತು ಚಿನ್ನಾಭರಣಗಳ ವಿವರಗಳನ್ನು ಉಲ್ಲೇಖಿಸಿದ್ದರು ಎಂದು ವರದಿಯಾಗಿದೆ. ವಿಚ್ಛೇದನ ಪ್ರಕರಣದ ವಿಚಾರಣೆ ಪ್ರಸ್ತುತ ಪ್ರಗತಿಯಲ್ಲಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಈ ಪ್ರಕರಣದ ವಿಚಾರಣೆಯನ್ನು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ಇದೀಗ ಜೂನ್ 15ಕ್ಕೆ ನಿಗದಿಪಡಿಸಿದೆ. ಮುಖ್ಯಮಂತ್ರಿಯಾಗಿ ರಾಜಕೀಯ ಜೀವನದ ಉತ್ತುಂಗದಲ್ಲಿರುವ ವಿಜಯ್ ಅವರಿಗೆ ಈ ಕೌಟುಂಬಿಕ ಕಾನೂನು ಹೋರಾಟ ದೊಡ್ಡ ಸವಾಲಾಗಿ ಪರಿಣಮಿಸಿದೆ.













Click it and Unblock the Notifications