CBFC: "ಜನ ನಾಯಗನ್" ಸಿನಿಮಾ ಲೀಕ್ ವರದಿ ಆಧಾರರಹಿತ: ಆರೋಪಗಳಿಗೆ ಸಿಬಿಎಫ್‌ಸಿ ಸ್ಪಷ್ಟನೆ
ನಟ ದಳಪತಿ ವಿಜಯ್ ನಟನೆಯ "ಜನ ನಾಯಗನ್" ಸಿನಿಮಾ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಸೋರಿಕೆಯಾಗಿದೆ ಎಂಬ ವರದಿಗಳನ್ನು ಮಂಡಳಿಯು ತಳ್ಳಿಹಾಕಿದೆ. ಈ ವದಂತಿಗಳು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತದ್ದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಚಿತ್ರದ ದೃಶ್ಯಗಳು ಸೆನ್ಸಾರ್ ಮಂಡಳಿಯಿಂದಲೇ ಸೋರಿಕೆಯಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.
ಸಿಬಿಎಫ್‌ಸಿ ಹೇಳಿದ್ದೇನು?
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಬಿಎಫ್‌ಸಿ, "ಸಿನಿಮಾದ ಡಿಸಿಪಿ (Digital Cinema Package) ಸೋರಿಕೆಯಾಗಿದೆ ಎಂಬ ಮಾತುಗಳಲ್ಲಿ ಸತ್ಯಾಂಶವಿಲ್ಲ. ಮಂಡಳಿಯ ಕಚೇರಿಯಿಂದ ಯಾವುದೇ ದೃಶ್ಯಗಳು ಹೊರಹೋಗಿಲ್ಲ" ಎಂದು ಸ್ಪಷ್ಟಪಡಿಸಿದೆ. "ಜನ ನಾಯಗನ್" ಚಿತ್ರದ ಡಿಸಿಪಿಯನ್ನು ಅಧಿಕೃತವಾಗಿ ಮಾರ್ಚ್ 17ರಂದು ಮುಂಬೈನಲ್ಲಿ ಅರ್ಜಿದಾರರಿಗೆ ಹಸ್ತಾಂತರಿಸಲಾಗಿತ್ತು. ಚಿತ್ರತಂಡವು ಸ್ವೀಕೃತಿ ಪತ್ರದೊಂದಿಗೆ ಅದನ್ನು ಪಡೆದುಕೊಂಡಿದ್ದು, ಅಂದಿನಿಂದ ಅದು ಅವರ ವಶದಲ್ಲೇ ಇದೆ ಎಂದು ಹೇಳಿದೆ.

ಮಂಡಳಿಯು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದು, ಅರ್ಜಿದಾರರ ಬಳಿಯಿರುವ ದಾಖಲೆಗಳ ಸುರಕ್ಷತೆಗೆ ಅವರೇ ಹೊಣೆಗಾರರಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ. ಈ ಸ್ಪಷ್ಟನೆಯ ಮೂಲಕ ಚಿತ್ರದ ಸೋರಿಕೆ ವಿಚಾರದಲ್ಲಿ ಸೆನ್ಸಾರ್ ಮಂಡಳಿಯ ಮೇಲೆ ಕೇಳಿಬಂದಿದ್ದ ಆರೋಪಗಳಿಗೆ ಈಗ ತೆರೆ ಬಿದ್ದಂತಾಗಿದೆ.
ಸೋರಿಕೆ ಸಾಧ್ಯವೇ ಇಲ್ಲ
ಸೆನ್ಸಾರ್ ಮಂಡಳಿಯು ಚಿತ್ರಗಳ ಸುರಕ್ಷತೆಗಾಗಿ ಅತ್ಯಂತ ಸುಧಾರಿತ ಕೆಡಿಎಂ (Key Delivery Message) ವ್ಯವಸ್ಥೆಯನ್ನು ಅನುಸರಿಸುತ್ತದೆ ಎಂದು ತಿಳಿಸಿದೆ. ಈ ವ್ಯವಸ್ಥೆಯಡಿ ಚಿತ್ರದ ವಿಷಯವು ಸಂಪೂರ್ಣವಾಗಿ ಪಾಸ್‌ವರ್ಡ್‌ನಿಂದ ಸಂರಕ್ಷಿಸಲ್ಪಟ್ಟಿರುತ್ತದೆ. ಈ ರಹಸ್ಯ ಕೀಲಿ ಕೇವಲ ನಿರ್ಮಾಪಕರು ಅಥವಾ ಚಿತ್ರನಿರ್ಮಾಪಕರ ಬಳಿ ಮಾತ್ರ ಇರುತ್ತದೆ. ಮಾನ್ಯವಾದ ಕೆಡಿಎಂ ಇಲ್ಲದೆ ಯಾವುದೇ ಕಾರಣಕ್ಕೂ ಸಿನಿಮಾವನ್ನು ವೀಕ್ಷಿಸಲು ಅಥವಾ ಪ್ರವೇಶಿಸಲು ಸಾಧ್ಯವೇ ಇಲ್ಲ. ಹೀಗಾಗಿ ಮಂಡಳಿಯಿಂದ ಚಿತ್ರ ಸೋರಿಕೆಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿಬಿಎಫ್‌ಸಿ ವಿವರಿಸಿದೆ. ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಇಂತಹ ಹಾದಿತಪ್ಪಿಸುವ ಸುದ್ದಿಗಳು ಚಿತ್ರೋದ್ಯಮಕ್ಕೆ ಮಾರಕವಾಗಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಲಾಗಿದೆ.
Reports claiming that the Tamil film “Jana Nayagan” was leaked from the Central Board of Film Certification (CBFC) are baseless and misleading.
— PIB in Maharashtra 🇮🇳 (@PIBMumbai) April 11, 2026
CBFC has clarified that it follows a secure KDM (Key Delivery Message) system for all theatrical films submitted for certification.… pic.twitter.com/V8qwL7GotP
ದಳಪತಿ ವಿಜಯ್ ತಮ್ಮ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ' ಘೋಷಿಸಿದ ನಂತರ ಬಿಡುಗಡೆಯಾಗುತ್ತಿರುವ ಪ್ರಮುಖ ಚಿತ್ರಗಳಲ್ಲಿ "ಜನ ನಾಯಗನ್" ಕೂಡ ಒಂದು. ಈ ಕಾರಣಕ್ಕಾಗಿಯೇ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಆದರೆ, ಚಿತ್ರದ ಪ್ರಮುಖ ದೃಶ್ಯಗಳು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಸೋರಿಕೆಯಾಗಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು.
ಕಳೆದ ಕೆಲವು ದಿನಗಳಿಂದ ಎಕ್ಸ್ (ಟ್ವಿಟರ್) ಮತ್ತು ಟೆಲಿಗ್ರಾಂನಂತಹ ವೇದಿಕೆಗಳಲ್ಲಿ "ಜನ ನಾಯಗನ್" ಚಿತ್ರದ ಕೆಲವು ದೃಶ್ಯಗಳು ಲೀಕ್ ಆಗಿವೆ ಎಂಬ ವರದಿಗಳು ಹರಿದಾಡಿದ್ದವು. ಚಿತ್ರವು ಸೆನ್ಸಾರ್ ಪ್ರಕ್ರಿಯೆಗೆ ಒಳಗಾಗಿದ್ದಾಗ ಮಂಡಳಿಯ ಕಚೇರಿಯಿಂದಲೇ ಈ ಲೋಪವಾಗಿದೆ ಎಂದು ಕೆಲವರು ಆರೋಪಿಸಿದ್ದರು. ಇದರಿಂದ ಚಿತ್ರತಂಡ ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು.












Click it and Unblock the Notifications