Jana Nayagan: ದಳಪತಿ ವಿಜಯ್ ನಟನೆಯ ಜನ ನಾಯಗನ್ ಸಿನಿಮಾಗೆ ಮತ್ತೆ ಹಿನ್ನಡೆ, ಸದ್ಯಕ್ಕಿಲ್ಲ ಬಿಡುಗಡೆ
ಚೆನ್ನೈ: ನಟ-ರಾಜಕಾರಣಿ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರದ ಪ್ರಮಾಣೀಕರಣ ಕುರಿತ ವಿವಾದದಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಮದ್ರಾಸ್ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದ್ದು, ಚಿತ್ರತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಮಂಗಳವಾರ ನೀಡಿದ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ.ಅರುಲ್ ಮುರುಗನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಸಿನಿಮಾಗೆ ತಕ್ಷಣವೇ U/A (16+) ಪ್ರಮಾಣಪತ್ರ ನೀಡುವಂತೆ ಆದೇಶಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ರದ್ದುಪಡಿಸಿದೆ.
ಅಲ್ಲದೆ ಪ್ರಕರಣವನ್ನು ಮರು ವಿಚಾರಣೆಗೆ ಕಳುಹಿಸಿದೆ. ಇದರಿಂದ 'ಜನ ನಾಯಗನ್' ಸಿನಿಮಾಗೆ ಮತ್ತೆ ಹಿನ್ನಡೆಯಾಗಿದ್ದು, ಬಿಡುಗಡೆ ಸದ್ಯಕ್ಕಿಲ್ಲ. ಸಿಬಿಎಫ್‌ಸಿ ಪರ ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾಯಾಲಯವು ರಿಟ್ ಅರ್ಜಿಯನ್ನು ನಿರ್ಧರಿಸುವ ಮೊದಲು ಪ್ರತಿಜ್ಞಾಪತ್ರ ಸಲ್ಲಿಸಲು ಸಮರ್ಪಕ ಸಮಯ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ. ಈ ಕಾರಣದಿಂದಾಗಿ ಏಕಸದಸ್ಯ ಪೀಠದ ಆದೇಶವು ನ್ಯಾಯಸಮ್ಮತ ಕ್ರಮವನ್ನು ಅನುಸರಿಸದೆ ನೀಡಲಾಗಿದೆ ಎಂದು ಪೀಠ ಹೇಳಿದೆ.

ಏನಿದು ಪ್ರಕರಣ?
ಅಲ್ಲದೆ, 'ಜನ ನಾಯಗನ್' ಚಿತ್ರದ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್‌ಗೆ ತಮ್ಮ ರಿಟ್ ಅರ್ಜಿಯನ್ನು ತಿದ್ದುಪಡಿ ಮಾಡುವ ಹಾಗೂ ಸಿಬಿಎಫ್‌ಸಿ ಅಧ್ಯಕ್ಷರು ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ರವಾನಿಸಿದ ನಿರ್ಧಾರವನ್ನೇ ನೇರವಾಗಿ ಪ್ರಶ್ನಿಸುವ ಅವಕಾಶವನ್ನೂ ನ್ಯಾಯಾಲಯ ನೀಡಿದೆ. ಈ ಮೇಲ್ಮನವಿ ವಿಚಾರಣೆ ಜನವರಿ 20ರಂದು ಪೂರ್ಣಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿತ್ತು.
ಇದಕ್ಕೂ ಮೊದಲು ಜನವರಿ 9ರಂದು ನ್ಯಾಯಮೂರ್ತಿ ಪಿ.ಟಿ.ಆಶಾ ಅವರು ನಿರ್ಮಾಪಕರ ಪರ ತೀರ್ಪು ನೀಡಿ, ಪರಿಶೀಲನಾ ಸಮಿತಿಯು ಸೂಚಿಸಿದ 14 ಕಟ್‌ಗಳನ್ನು ಪಾಲಿಸಿದ ಹಿನ್ನೆಲೆ ಚಿತ್ರಕ್ಕೆ ತಕ್ಷಣವೇ U/A ಪ್ರಮಾಣಪತ್ರ ನೀಡಬೇಕು ಎಂದು ಸಿಬಿಎಫ್‌ಸಿಗೆ ನಿರ್ದೇಶಿಸಿದ್ದರು. ಆದರೆ, ಆ ಆದೇಶವನ್ನು ಸಿಬಿಎಫ್‌ಸಿ ಪ್ರಶ್ನಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿಗಳ ಪೀಠ ಅದೇ ದಿನ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಈ ತಡೆಯಾಜ್ಞೆಯನ್ನು ರದ್ದುಪಡಿಸುವ ಪ್ರಯತ್ನದಲ್ಲಿ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೊರೆ ಹೋದರೂ, ಅಲ್ಲಿ ಪರಿಹಾರ ಸಿಗದೆ ಪ್ರಕರಣವನ್ನು ಮತ್ತೆ ಹೈಕೋರ್ಟ್‌ಗೆ ಕಳಿಸಿತ್ತು. ವಿಚಾರಣೆಯ ವೇಳೆ ಸಿಬಿಎಫ್‌ಸಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಆರ್.ಎಲ್. ಸುಂದರೇಶನ್ ಅವರು ಪರಿಶೀಲನಾ ಸಮಿತಿ ಕೇವಲ ಸಲಹಾ ಸ್ವರೂಪದ್ದಾಗಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಸಿನಿಮಾಟೋಗ್ರಾಫ್ ಕಾಯ್ದೆ ಪ್ರಕಾರ ಮಂಡಳಿಗೇ ಸೇರಿದೆ ಎಂದು ತಿಳಿಸಿದರು.
ಇತ್ತ ನಿರ್ಮಾಪಕರ ಪರ ವಾದಿಸಿದ ಹಿರಿಯ ವಕೀಲ ಸತೀಶ್ ಪರಸರಣ್, ಕಮಿಟಿಗೆ ಚಿತ್ರವನ್ನು ಕಳುಹಿಸುವ ಮೊದಲು ದೂರುದಾರರ ಪ್ರತಿಯನ್ನು ನೀಡದೆ ಕ್ರಮ ಕೈಗೊಂಡಿರುವುದು ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ ಎಂದು ವಾದಿಸಿದರು. ಈಗ ಈ ಹೊಸ ತೀರ್ಪಿನೊಂದಿಗೆ 'ಜನ ನಾಯಗನ್' ಚಿತ್ರದ ಪ್ರಮಾಣೀಕರಣ ಕುರಿತ ಕಾನೂನು ಹೋರಾಟ ಮತ್ತೊಮ್ಮೆ ಮುಂದುವರಿಯುವ ಸಾಧ್ಯತೆ ಇದೆ. ದಳಪತಿಯ ಕೊನೆಯ ಸಿನಿಮಾ ಕಣ್ತುಂಬಿಕೊಳ್ಳಲು ಕಾದಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ.












Click it and Unblock the Notifications