ಕನ್ನಡ ಕಮ್ಮಿ ಅಂತ ಹೇಳುವುದು ನನ್ನ ಉದ್ದೇಶವಲ್ಲ ಆದರೆ..: ನಟ ಕಮಲ್ ಹಾಸನ್ ಪತ್ರ !
ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳಬೇಕು ಎಂದು ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ ಎಂದು ವರದಿಯಾಗುತ್ತಿರುವ ಸಂದರ್ಭದಲ್ಲಿಯೇ ಅವರು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಕನ್ನಡ ಹಾಗೂ ತಮಿಳು ಭಾಷಾ ವಿವಾದವು ಹೊಸ ಸ್ವರೂಪವನ್ನು ಪಡೆದುಕೊಂಡಿದೆ. ಈ ರೀತಿ ಇರುವಾಗಲೇ ಇದೀಗ ಪತ್ರವೊಂದನ್ನು ನಟ ಕಮಲ್ ಹಾಸನ್ ಅವರು ಬರೆದುಕೊಂಡಿದ್ದಾರೆ. ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ನಟ ಕಮಲ್ ಅವರು ಇನ್ನೂ ಕ್ಷಮೆ ಕೇಳಿಲ್ಲ. ನಾನು ಕ್ಷಮೆ ಕೇಳಲ್ಲ ಎನ್ನುತ್ತಲ್ಲೇ ಅವರೊಂದು ಪತ್ರವನ್ನು ಬರೆದುಕೊಂಡಿದ್ದಾರೆ.
ತಮಿಳು - ಕನ್ನಡದ ತಾಯಿ ಅಂತ ಹೇಳಿದ್ದ ನಟ ಕಮಲ್ ಹಾಸನ್ ಅವರು, ಇದೀಗ ತಮ್ಮ ಸಿನಿಮಾಗಾಗಿ ಕರ್ನಾಟಕ ಫಿಲ್ಮ್ ಚೇಂಬರ್‌ಗೆ ಸುದೀರ್ಘ ಪತ್ರವನ್ನು ಬರೆದುಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಕಮಲ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ. ಕಮಲ್ ಹಾಸನ್ ಅವರಿಗೆ ಈಚೆಗೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು ಪತ್ರ ಬರೆದಿದ್ದರು. ನಿಮ್ಮ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದ್ದು. ನೀವು ಕ್ಷಮೆ ಕೇಳಬೇಕು ಎಂದಿದ್ದರು. ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಯಾವ ರೀತಿ ಅಡ್ಡಿ ಆಗುತ್ತಿದೆ ಎನ್ನುವುದನ್ನು ಅವರು ವಿವರಿಸಿದ್ದರು. ಈ ನಡುವೆ ಆ ಪತ್ರಕ್ಕೆ ನಟ ಕಮಲ್ ಹಾಸನ್ ಅವರು ಪ್ರತಿಕ್ರಿಯಿಸಿದ್ದು, ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

ಮತ್ತೊಮ್ಮೆ ಅದೇ ಹಳೆಯ ಹಾಡನ್ನೇ ಹಾಡಿರುವ ನಟ ಕಮಲ್ ಹಾಸನ್ ಅವರು, ನನಗೆ ಕರ್ನಾಟಕದ ಜನರ ಮೇಲಿನ ಆಳವಾದ ಗೌರವದಿಂದಲೇ ಪ್ರಾಮಾಣಿಕವಾಗಿ ಈ ವಿಚಾರವನ್ನು ಹೇಳುತ್ತಿದ್ದೇನೆ ಎಂದು ನಟ ಕಮಲ್ ಹಾಸನ್ ಅವರು ಪತ್ರವನ್ನು ಕಮಲ್ ಹಾಸನ್ ಪತ್ರ ಪ್ರಾರಂಭಿಸಿದ್ದಾರೆ.
ತಮಿಳಿನ ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್‌ಕುಮಾರ್ ಅವರ ಕುಟುಂಬದ ಬಗ್ಗೆ ಹಾಗೂ ವಿಶೇಷವಾಗಿ ಶಿವ ರಾಜ್‌ಕುಮಾರ್ ಅವರ ಬಗ್ಗೆ ನಿಜವಾದ ಪ್ರೀತಿಯಿಂದ ಹೇಳಲಾಗಿರುವ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ಮುಂದುವರಿದು ಅದನ್ನು ಬೇರೆ ರೀತಿ ಭಾವಿಸಿರುವುದು ನನಗೂ ನೋವುಂಟು ಮಾಡಿದೆ. ನಾವೆಲ್ಲರೂ ಒಂದೇ ಮತ್ತು ಒಂದೇ ಕುಟುಂಬದವರು ಎನ್ನುವುದಷ್ಟೇ ನನ್ನ ಮಾತಾಗಿತ್ತು. ಕನ್ನಡವನ್ನು ಯಾವುದೇ ರೀತಿಯಲ್ಲಿ ಕಮ್ಮಿ ಅಂತ ಹೇಳುವುದು ನನ್ನ ಉದ್ದೇಶವಲ್ಲ ಅಂತ ನಟ ಕಮಲ್ ಹಾಸನ್ ಅವರು ಹೇಳಿದ್ದಾರೆ.
ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳು ಈ ನೆಲದ ಎಲ್ಲಾ ಭಾಷೆಗಳೊಂದಿಗಿನ ನನ್ನ ಬಾಂಧವ್ಯವು ಶಾಶ್ವತವಾಗಿದೆ. ನಾನು ಯಾವಾಗಲೂ ಎಲ್ಲಾ ಭಾರತೀಯ ಭಾಷೆಗಳ ಸಮಾನತೆಯ ಪರವಾಗಿ ನಿಲ್ಲುತ್ತೇನೆ. ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ ಎಂದು ಹೇಳಿರುವ ಅವರು, ಈ ರೀತಿಯ ಅಸಮತೋಲನವು ಭಾರತದ ಒಕ್ಕೂಟದ ಭಾಷಾ ರಚನೆಗೆ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂದಿದ್ದಾರೆ.
ಹಿರಿಯರು ನನಗೆ ಕಲಿಸಿಕೊಟ್ಟ ಪ್ರೀತಿ ಮತ್ತು ಬಾಂಧವ್ಯವನ್ನು ನಾನು ಹಂಚಿಕೊಳ್ಳುವುದಕ್ಕೆ ಬಯಸಿದ್ದೆ. ಅದೇ ಪ್ರೀತಿ ಮತ್ತು ಬಾಂಧವ್ಯದಿಂದ ನಟ ಶಿವರಾಜ್ ಕುಮಾರ್ ಅವರು ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಇದರಿಂದಾಗಿ ಶಿವಣ್ಣ ಇಷ್ಟೊಂದು ಮುಜುಗರ ಅನುಭವಿಸಬೇಕಾಯಿತು ಎನ್ನುವುದು ನನಗೆ ನಿಜವಾಗಿಯೂ ವಿಷಾದವಿದೆ ಅಂತಲೂ ಹೇಳಿದ್ದಾರೆ.
ನಾನು ಎಂದಿಗೂ ಸಾರ್ವಜನಿಕವಾಗಿ ಅಶಾಂತಿ ಮತ್ತು ದ್ವೇಷಕ್ಕೆ ಯಾವುದೇ ರೀತಿಯ ಅವಕಾಶ ನೀಡಿಲ್ಲ. ಎಂದಿಗೂ ಬಯಸುವುದಿಲ್ಲ ಎಂದು ಕಮಲ್ ಹಾಸನ್ ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ ಅಥವಾ ಚರ್ಚೆ ನಡೆದೇ ಇಲ್ಲ. ತಮಿಳಿನಂತೆಯೇ ಕನ್ನಡವು ನಾನು ಬಹಳ ಹಿಂದಿನಿಂದಲೂ ಮೆಚ್ಚುಗೆಯ ಹೆಮ್ಮೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ. ನನ್ನ ವೃತ್ತಿಜೀವನದುದ್ದಕ್ಕೂ ಕನ್ನಡ ಮಾತನಾಡುವ ಸಮುದಾಯವು ನನಗೆ ನೀಡಿರುವ ಗೌರವ ಮತ್ತು ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದದ್ದು ಹಾಗೂ ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಹೊಂದಿರುವ ಪ್ರೀತಿಗೆ ನನಗೆ ಅಪಾರ ಗೌರವವಿದೆ ಎಂದಿದ್ದು, ನಾನು ಇದನ್ನು ಸ್ಪಷ್ಟ ಆತ್ಮಸಾಕ್ಷಿ ಮತ್ತು ದೃಢನಿಶ್ಚಯದಿಂದ ಹೇಳುತ್ತೇನೆ ಎಂದಿದ್ದಾರೆ.












Click it and Unblock the Notifications