Dhananjaya: ಧನಂಜಯ್ ಮದುವೆಗೆ ವಿಶೇಷ ಉಡುಗೊರೆ ಕೊಟ್ಟ ಅಂಚೆ ಇಲಾಖೆ
ನಟ ಡಾಲಿ ಧನಂಜಯ ಮದುವೆಗೆ ಮುನ್ನ ಭಾರತೀಯ ಅಂಚೆ ಇಲಾಖೆ ವಿಶೇಷ ಉಡುಗೊರೆ ನೀಡಿ ಗೌರವಿಸಿದೆ. ಧನಂಜಯ ಡಾ. ಧನ್ಯತಾ ಅವರನ್ನು ಮೈಸೂರಿನಲ್ಲಿ ಮದುವೆಯಾಗಲಿದ್ದು ಎಲ್ಲಾ ತಯಾರಿ ನಡೆಯುತ್ತಿದೆ. ವಿವಿಧ ಗಣ್ಯರನ್ನು ಧನಂಜಯ ಮದುವೆಗೆ ಆಹ್ವಾನಿಸಿದ್ದು, ಅಭಿಮಾನಿಗಳಿಗೂ ಮದುವೆ ಕರೆದಿದ್ದು ವಿಶೇಷ ವ್ಯವಸ್ಥೆ ಮಾಡಿದ್ದಾರೆ.
ಧನಂಜಯ ಅವರಿಗಾಗಿ ಭಾರತೀಯ ಅಂಚೆ ಇಲಾಖೆ ಮದುವೆ ಉಡುಗೊರೆಯಾಗಿ ವಿಶೇಷವಾಗಿ ವಿನ್ಯಾಸ ಮಾಡಿದ ಅಂಚೆ ಚೀಟಿಗಳನ್ನು ಉಡುಗೊರೆಯಾಗಿ ನೀಡಿದೆ. ಶುಭ ವಿವಾಹ ಮತ್ತು ಮದುವೆಯ ಶುಭಾಶಯಗಳು ಎನ್ನುವ ಸಂದೇಶ ಇರುವ, ವಿಶೇಷ ಅಂಚೆಚೀಟಿಯಲ್ಲಿ ದಂಪತಿಗಳ ಚಿತ್ರವಿದ್ದು, ಇದು ವಿಶೇಷ ಉಡುಗೊರೆಯಾಗಿದೆ.

ಮೈಸೂರಿನ ಇಂಡಿಯಾ ಅಂಚೆ ಕಚೇರಿಯ ಅಧಿಕಾರಿಗಳು ವೈಯಕ್ತಿಕವಾಗಿ ಕಸ್ಟಮೈಸ್ ಮಾಡಿರುವ ಅಂಚೆ ಚೀಟಿಗಳನ್ನು ಧನಂಜಯ ಅವರಿಗೆ ನೀಡಿದ್ದಾರೆ. ಮದುವೆಗೆ ಸಜ್ಜಾಗಿರುವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಧನಂಜಯ ಕೆಲಸಕ್ಕೆ ಮೆಚ್ಚುಗೆ
ಧನಂಜಯ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಇನ್‌ಲ್ಯಾಂಡ್ ಲೆಟರ್ ರೀತಿ ವಿನ್ಯಾಸ ಮಾಡಿಸಿದ್ದರು. ಇದು ಅಂಚೆ ಇಲಾಖೆಯ ಗತ ವೈಭವವನ್ನು ನೆನಪಿಗೆ ತಂದಿತ್ತು. ದೂರವಾಣಿ, ಮೊಬೈಲ್ ಬರುವ ಮುನ್ನ ದೇಶದ ಜನರ ನಡುವಿನ ಸಂಪರ್ಕ ಸೇತುವೆಯಾಗಿದ್ದು ಇಂತಹ ಇನ್‌ಲ್ಯಾಂಡ್ ಪತ್ರಗಳನ್ನು ಧನಂಜಯ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಾಗಿ ವಿನ್ಯಾಸಗೊಳಿಸುವ ಮೂಲಕ ಇದರ ಬಗ್ಗೆ ಜನರಿಗೆ ಆಸಕ್ತಿ ಮೂಡುವಂತೆ ಮಾಡಿದ್ದಾರೆ.
ಡಾಲಿ ಧನಂಜಯ ಅವರ ವಿವಾಹ ಆಮಂತ್ರಣ ಪತ್ರಗಳು ವೈರಲ್ ಆದ ಬಳಿಕ, ಅಂಚೆ ಕಚೇರಿಗಳಲ್ಲಿ ಇನ್‌ಲ್ಯಾಂಡ್ ಪತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನ ಮತ್ತೊಮ್ಮೆ ಕೈಬರಹ ಇರುವ ಆಮಂತ್ರಣ ಪತ್ರಗಳ ಮಹತ್ವವನ್ನು ಅರಿತುಕೊಂಡಿದ್ದಾರೆ.
ಅಂಚೆ ಇಲಾಖೆ ತಮ್ಮ ಮದುವೆಗೆ ವಿಶೇಷ ಉಡುಗೊರೆ ಕೊಟ್ಟಿರುವುದಕ್ಕೆ ಧನಂಜಯ ಪ್ರತಿಕ್ರಿಯೆ ನೀಡಿದ್ದು ಧನ್ಯವಾದ ತಿಳಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಅಂಚೆ ಚೀಟಿಯ ಫೋಟೊ ಹಂಚಿಕೊಂಡಿರುವ ನಟ ಧನಂಜಯ ಇಂಡಿಯಾ ಪೋಸ್ಟ್‌ಗೆ ಧನ್ಯವಾದ ತಿಳಿಸಿದ್ದು, "ನನ್ನ ಮದುವೆಗೆ ಅದ್ಭುತ ಉಡುಗೊರೆ ಮತ್ತು ಹೃತ್ಪೂರ್ವಕ ಶುಭಾಶಯ ತಿಳಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು! ಇನ್‌ಲ್ಯಾಂಡ್ ಲೆಟರ್ ಫಾರ್ಮ್ಯಾಟ್ ಅನ್ನು ಬಳಸಿಕೊಂಡು ನನ್ನ ವಿಶಿಷ್ಟ ವಿವಾಹ ಆಮಂತ್ರಣ ಕಲ್ಪನೆಯು ನಿಮಗೆ ಇಷ್ಟವಾಯಿತು ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ." ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಹಿರಿಯ ನಟ ಡಾ. ಶಿವರಾಜ್‌ಕುಮಾರ್, ಸುದೀಪ್, ತೆಲುಗು ನಟ ಅಲ್ಲು ಅರ್ಜುನ್ ಸೇರಿದಂತೆ ಹಲವರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಫೆಬ್ರವರಿ 16ರಂದು ಮೈಸೂರಿನ ಪ್ರದರ್ಶನ ಮೈದಾನದಲ್ಲಿ ಮದುವೆ ನಡೆಯಲಿದೆ.











Click it and Unblock the Notifications