ಬಾಲಿವುಡ್ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಿ, ಅವಾರ್ಡ್ ಗೆಲ್ಲುತ್ತಾರೆ - ರಿಷಬ್ ಶೆಟ್ಟಿ
ಬೆಂಗಳೂರು, ಆಗಸ್ಟ್ 21: ರಾಷ್ಟ್ರ ಪ್ರಶಸ್ತಿ ವಿಶೇತ ನಟ ರಿಷಬ್ ಶೆಟ್ಟಿ ಅವರು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಚಿತ್ರಗಳನ್ನೇ ನೀಡಿದ್ದಾರೆ. ರಿಷಬ್ ಶೆಟ್ಟಿ ನಟನೆ ಅಥವಾ ನಿರ್ದೇಶನ ಅಂದರೆ ಪ್ರೇಕ್ಷಕರು ಕೂಡ ಅಂತಹ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಸಾಮಾನ್ಯವಾಗಿ ರಿಷಬ್ ಶೆಟ್ಟಿ ಸಿನಿಮಾಗಳಲ್ಲಿ ಸಮಾಜಕ್ಕೆ ಬಹಳ ಬಲವಾದ ಸಂದೇಶ ನೀಡಲಾಗಿರುತ್ತದೆ. ಉದಾಹರಣೆಗೆ ರಿಕ್ಕಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸರಗೋಡು. ರಿಷಬ್ ಶೆಟ್ಟಿ ಇಂತಹ ಸಿನಿಮಾಗಳನ್ನೇ ಯಾಕೆ ಮಾಡುತ್ತಾರೆ ಎನ್ನುವುದಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ.
ಮೆಟ್ರೋ ಸಾಗ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿರುವ ಆಗುಹೋಗುಗಳ ಬಗ್ಗೆ ಗಮನಿಸಬೇಕು. ಸಿನಿಮಾ ನನ್ನ ವೃತ್ತಿ ಆಗಿರುವುದರಿಂದ ಇದರ ಮೂಲಕ ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವ ಅವಕಾಶ ನನಗೆ ಇದೆ. ಏನೇ ಮಾಡಲು ಒಂದು ರೀತಿ- ನೀತಿ ಅಂತಾ ಇರುತ್ತದೆ. ನಮ್ಮ ಭಾರತೀಯ ಚಿತ್ರಗಳಲ್ಲಿ ಅದರಲ್ಲೂ ಬಾಲಿವುಡ್ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ, ಕೇವಲವಾಗಿ ತೋರಿಸಿ, ಹೊರ ದೇಶಗಳಲ್ಲಿ ತೋರಿಸಿ ಅವಾರ್ಡ್ ಗೆದ್ದುಕೊಂಡು ಬಂದಿರುವುದನ್ನು ನಾನು ಗಮನಿಸಿದ್ದೇನೆ ಎಂದರು.

ನಮ್ಮ ದೇಶ ನಮ್ಮ ಹೆಮ್ಮೆ, ನಮ್ಮ ರಾಜ್ಯ ನಮ್ಮ ಹೆಮ್ಮೆ, ನಮ್ಮ ಭಾಷೆ ನನಗೆ ಹೆಮ್ಮೆ, ಹೀಗಾಗಿ ನಾನ್ಯಾಕೆ ಇದನ್ನು ಪಾಸಿಟಿವ್‌ವಾಗಿ ಇದನ್ನು ತೆಗೆದುಕೊಂಡು ಹೋಗಬಾರದು. ನಮ್ಮಲ್ಲಿರುವ ವಿಚಾರಗಳನ್ನು, ಪಾಸಿಟಿವ್ ಇರುವ ವಿಚಾರಗಳನ್ನು, ಪಾಸಿಟಿವ್ ಆಗಿಯೇ ಜನರಿಗೆ ತೋರಿಸಬಹುದಲ್ಲ. ನೆಗೆಟಿವಿಟಿಯನ್ನು ಬಿಟ್ಟು ಏನು ಮಾಡಲು ಸಾಧ್ಯವಿದೆ. ಈ ರೀತಿಯಾಗಿ ನಾನು ಯೋಚನೆ ಮಾಡುತ್ತೇನೆ.
ಯಾವುದೇ ಕಾರಣಕ್ಕೂ ಯಾರಿಗೂ ಬೇಸರವಾಗಬಾರದು, ಯಾವುದೇ ಕಾರಣಕ್ಕೂ ಯಾರಿಗೂ ನೋವಾಗಬಾರದು, ಯಾವುದೇ ಕಾರಣಕ್ಕೂ ಕೆಟ್ಟ ಪರಿಣಾಮ ಬೀರಬಾರದು ಎನ್ನುವ ವಿಚಾರಗಳ ಬಗ್ಗೆ ನಾನು ಬಹಳ ಸೂಕ್ಷ್ಮವಾಗಿರುತ್ತೇನೆ. ಅಲ್ಲಿ ಏನೇ ಒಂದು ಸಾಲು ಬರುತ್ತದೆ ಅಂದರೂ, ಅದರ ಬಗ್ಗೆ ನಾನು ಯೋಚನೆ ಮಾಡುತ್ತೇನೆ. ನಾವು ಮಾಡುವ ತಮಾಷೆಯಿಂದ ಯಾರಿಗಾದರೂ ನೋವಾಗಿ, ನಾವು ಸಿಕ್ಕಾಗ ಅವರು ಹೇಳಿದರು ಅಂದರೆ ನಾನು ಮತ್ತೆ ಅಂತಹ ವಿಚಾರಗಳಿಗೆ ಅಲರ್ಟ್ ಆಗುತ್ತೇನೆ ಎಂದು ಹೇಳಿದರು.

ನನ್ನ ಪ್ರತಿ ಸಿನಿಮಾದಲ್ಲೂ ಒಂದು ಉದ್ದೇಶ ಇರುತ್ತದೆ. ಸರ್ಕಾರಿ ಶಾಲೆ ಸಿನಿಮಾವನ್ನು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದು. ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಗಮನ ಹರಿಸಬೇಕು ನಾವು. ಜೊತೆಗೆ ಅದನ್ನು ಎಂಜಾಯ್ ಮಾಡುವ ತರ ಪ್ಯಾಕೇಜ್ ಮಾಡಿ ಜನರಿಗೆ ಕೊಡಬೇಕು ಎನ್ನುವುದು ನನಗೆ ಇತ್ತು. ಅವಾಗ ಮಾತ್ರ ಆ ಸಿನಿಮಾ ಜನಪ್ರಿಯವಾಗಿ ಜನರಿಗೆ ತಲುಪಲು ಸಾಧ್ಯ ಎನ್ನುವುದು ನನ್ನ ನಂಬಿಕೆ. ಜನ ಅದನ್ನು ಸುಳ್ಳು ಮಾಡಿಲ್ಲ. ಹೀಗಾಗಿ ಇಂತಹ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.












Click it and Unblock the Notifications