ಕೊಲ್ಲೂರು ದೇವಸ್ಥಾನಕ್ಕೆ ದುಬಾರಿ ವಜ್ರದ ಕಿರೀಟ ನೀಡಿದ ಇಳಯರಾಜ, ಇದರ ಬೆಲೆ ಎಷ್ಟು?
ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ (Ilayaraja) ಅವರು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ದುಬಾರಿ ಆಭರಣವನ್ನು ದಾನ ಮಾಡಿದ್ದಾರೆ. ಕೊಲ್ಲೂರು ದೇವಸ್ಥಾನಕ್ಕೆ ವಜ್ರದ ಕಿರೀಟಗಳು ಮತ್ತು ಚಿನ್ನದ ಕತ್ತಿಯನ್ನು ಇಳಯರಾಜ ದಾನ ಮಾಡಿದ್ದಾರೆ. ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವುಗಳ ಬೆಲೆ ಕೇಳಿ ಜನ ದಂಗಾಗಿದ್ದಾರೆ.
ಮೂಕಾಂಬಿಕಾ ದೇವಸ್ಥಾನದ ಅರ್ಚಕ ಕೆ.ಎನ್.ಸುಬ್ರಹ್ಮಣ್ಯ ಅಡಿಗ ಅವರು ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಳಯರಾಜ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಕಿರೀಟಗಳು ಮತ್ತು ಚಿನ್ನದ ಖಡ್ಗಯನ್ನು ದಾನ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿವೆ. ಬರೋಬ್ಬರಿ 4.50 ಕೋಟಿ ರೂಪಾಯಿ ಮೌಲ್ಯದ ವಜ್ರದ ಕಿರೀಟವನ್ನು ಸಮರ್ಪಣೆ ಮಾಡಿದ್ದಾರೆ.

ದೇವರಿಗೆ ವಜ್ರದ ಕಿರೀಟ ಮತ್ತು ಅಮೂಲ್ಯವಾದ ಚಿನ್ನದ ಖಡ್ಗವನ್ನು ನೀಡಿದ್ದು, ಇಳಯರಾಜ ಅವರು ಮೊದಲು ದೇವಿಯ ದರ್ಶನ ಪಡೆದು ನಂತರ ಸುಬ್ರಹ್ಮಣ್ಯ ಅಡಿಗ ಅವರ ಸಮ್ಮುಖದಲ್ಲಿ ಆಭರಣಗಳನ್ನು ದೇವಾಲಯಕ್ಕೆ ಅರ್ಪಿಸಿದ್ದಾರೆ. ಅವರ ಮಗ ಕಾರ್ತಿಕ್ ರಾಜ್, ಮೊಮ್ಮಗ ಯತೀಶ್ ಮತ್ತು ಕುಟುಂಬ ಸದಸ್ಯರು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 2006ರಲ್ಲಿಯೂ ಇಳಯರಾಜ ಅವರು ದೇವಿಗೆ ಆಭರಣ ಸಹ ನೀಡಿದ್ದರು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಹೇಳಿದೆ.
ಎಲ್ಲ ದೇವಿಯ ಆಶೀರ್ವಾದ
ಪೂಜೆಗಳು ಮುಗಿದ ನಂತರ ದೇವಾಲಯದ ಪ್ರಧಾನ ಅರ್ಚಕರು ದೇವಿಯ ಫೋಟೋವನ್ನು ಈ ಕಾಣಿಕೆಗಳೊಂದಿಗೆ ಇಳಯರಾಜರಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇಳಯರಾಜ, ಜಗನ್ಮಾತೆ ಮೂಕಾಂಬಿಕೆಯ ಆಶೀರ್ವಾದದಿಂದ ಮಾತ್ರ ಇದೆಲ್ಲವೂ ಸಾಧ್ಯವಾಯಿತು, ಇದರಲ್ಲಿ ನಾನು ಏನೂ ಮಾಡಿಲ್ಲ ಎಂದು ಹೇಳಿದರು. ಕೊಲ್ಲೂರು ಮೂಕಾಂಬಿಕೆ ದೇವಿಗೆ ವಜ್ರದ ಕಿರೀಟ ಸಮರ್ಪಣೆ ಮಾಡಿದ ಬಳಿಕ ಇಳಯರಾಜ ಅವರು ಮಾಧ್ಯಮಗಳ ಮುಂದೆ ಕನ್ನಡದಲ್ಲಿಯೇ ಮಾತನಾಡಿ ಅಚ್ಚರಿ ಮೂಡಿಸಿದರು. ನಾನು ಮಾತನಾಡುವವನಲ್ಲ, ನನ್ನದೇನಿದ್ದರೂ ಕೆಲಸ ಎಂದಿದ್ದಾರೆ.
ಇಳಯರಾಜ ಅವರು ಹಿಂದಿನಿಂದಲೂ ತಾಯಿ ಮೂಕಾಂಬಿಕೆಗೆ ಆಭರಣ ಅರ್ಪಿಸುತ್ತಾ ಬಂದಿದ್ದಾರೆ. ಈಗ ಕೋಟ್ಯಂತರ ಬೆಲೆಬಾಳುವ ವಜ್ರದ ಕಿರೀಟ ಹಾಗೂ ಇತರ ಆಭರಣಗಳನ್ನು ಮಾಡಿಸಿ ಕೊಟ್ಟಿದ್ದಾರೆ. ಆಭರಣಗಳ ಸಮರ್ಪಣಾ ಕಾರ್ಯಕ್ರಮ ಕೂಡ ಅತ್ಯಂತ ಸರಳವಾಗಿ ನೆರವೇರಿದ್ದು, ಮೆರವಣಿಗೆಯಲ್ಲಿ ಬಂದ ಆಡಳಿತ ಮಂಡಳಿಯವರು ಪೂಜೆಯ ನಂತರ ವಜ್ರದ ಕಿರೀಟವನ್ನು ತಾಯಿಯ ಮುಡಿಗೆ ಅರ್ಪಿಸಿದರು. ಬಳಿಕ ವೀರಭದ್ರ ಸ್ವಾಮಿಗೂ ಬೆಳ್ಳಿಯ ಕಿರೀಟ ಹಾಗೂ ಖಡ್ಗವನ್ನು ಇಳಯರಾಜ ಸಮರ್ಪಿಸಿದರು.
ಮೂಕಾಂಬಿಕೆ ತನ್ನ ಜೀವನದಲ್ಲಿ ಪವಾಡಗಳನ್ನು ನಡೆಸುತ್ತಲೇ ಬಂದಿದ್ದಾಳೆ ಎಂದು ಇಳಯರಾಜ ಹೇಳಿದ್ದು, ಈ ಹಿಂದೆಯೂ ಅನೇಕ ಸಂದರ್ಶನಗಳಲ್ಲಿ ಮೂಕಾಂಬಿಕೆಯ ಕುರಿತು ತನ್ನ ಭಕ್ತಿಯನ್ನು ಉಲ್ಲೇಖಿಸಿದ್ದರು. ದಶಕಗಳ ಹಿಂದೆಯೂ ಮೂಕಾಂಬಿಕೆಗೆ ಆಭರಣಗಳನ್ನು ಅರ್ಪಿಸಿದ್ದರು. ಈ ಬಾರಿ ಯಾವುದೇ ಆಡಂಬರವಿಲ್ಲದೆ ಅವರ ಈ ಆಭರಣಗಳನ್ನು ದಾನ ಮಾಡಿದ್ದಾರೆ. ಅಲ್ಲದೆ ಪ್ರತಿ ವರ್ಷವೂ ಅವರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಮೂಕಾಂಬಿಕೆಯೇ ನನ್ನ ಸಂಗೀತ ಸಾಧನೆಗಳಿಗೆ ಪ್ರೇರಣೆ ಎಂದು ಅವರು ಆರಾಧಿಸುತ್ತಾರೆ.












Click it and Unblock the Notifications