IFFI: ಮತ್ತೊಂದು ಇತಿಹಾಸ ಬರೆದ ಕಾಂತಾರ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಿಷಬ್ ಚಿತ್ರಕ್ಕೆ ವಿಶೇಷ ಪ್ರಶಸ್ತಿ
ಬೆಂಗಳೂರು, ನವೆಂಬರ್ 29: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಚಿತ್ರ ಕಾಂತಾರ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿತ್ತು. ಕಾಂತಾರ ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸುಗಳಿಸಿದ ಕಾರಣ ಕಾಂತಾರ ಚಾಪ್ಟರ್-1 ಚಿತ್ರ ಕೂಡ ಸಿದ್ಧವಾಗುತ್ತಿದೆ. ಸೋಮವಾರವಷ್ಟೇ ಕಾಂತಾರ ಚಾಪ್ಟರ್-1 ಫಸ್ಟ್ ಲುಕ್ ರಿಲೀಸ್ ಆಗಿದ್ದು, ರಿಷಬ್ ಶೆಟ್ಟಿ ಭಯಂಕರ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಿಕ್ವೇಲ್‌ನ ಫಸ್ಟ್ ಲುಕ್ ಮೂಲಕ ಮತ್ತೆ ಸುದ್ದಿಗೆ ಬಂದ ಕಾಂತಾರ ಸದ್ಯ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ನಿನ್ನೆ (ನವೆಂಬರ್ 28)ರಂದು ಗೋವಾದಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಇಂಥದ್ದೊಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ.

54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿ ಸ್ಪರ್ಧಾ ವಿಭಾಗದಲ್ಲಿ ಒಟ್ಟು 15 ಚಿತ್ರಗಳು ಕಣದಲ್ಲಿದ್ದವು. ಈ ಸಿನಿಮಾಗಳ ಪೈಕಿ ಕಾಂತಾರ ಸೇರಿದಂತೆ ಭಾರತದ ಒಟ್ಟು ಮೂರು ಸಿನಿಮಾಗಳು ಕಣದಲ್ಲಿದ್ದವು. ಉಳಿದೆಲ್ಲಾ ಚಿತ್ರಗಳನ್ನು ಹಿಂದಿಕ್ಕಿ ಕಾಂತಾರ ಚಿತ್ರ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯು ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಪ್ರಶಸ್ತಿಯನ್ನು ಸ್ವತಃ ರಿಷಬ್ ಶೆಟ್ಟಿ ಸ್ವೀಕರಿಸಿದ್ದು, ಈ ವಿಶೇಷವಾದ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗದ ಹಿರಿಯ ನಟ-ನಿರ್ದೇಶಕ ಶಂಕರ್ ನಾಗ್ ಅವರಿಗೆ ಅರ್ಪಿಸಿದ್ದಾರೆ. ಈ ವಿಚಾರವನ್ನು ರಿಷಬ್ ಶೆಟ್ಟಿ ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಮ್ಮೆಲ್ಲರ ಸ್ಫೂರ್ತಿ ಶಂಕರ್ ನಾಗ್ ಅವರಿಗೆ ಈ ಪ್ರಶಸ್ತಿ ಅರ್ಪಣೆ ಎಂದಿದ್ದಾರೆ.
ಕಾಂತರ ಚಿತ್ರದ ಬಗ್ಗೆ ನಿಮಗೆಷ್ಟು ಗೊತ್ತು..?
ಕರಾವಳಿ ಸಂಸ್ಕೃತಿಯನ್ನು ಹೊತ್ತು ತಂದ ಕಾಂತಾರ ಚಿತ್ರ ಸಪ್ಟೆಂಬರ್ 30,2022 ರಂದು ಕನ್ನಡದಲ್ಲಿ ರಿಲೀಸ್ ಆಗಿತ್ತು. ಷಬ್ ಶೆಟ್ಟಿ ಅವರ ನೂತನ ಶೈಲಿಯ ಚಿತ್ರಕಥೆ ಹಾಗೂ ನಟನೆಗೆ ಕನ್ನಡ ಮಾತ್ರವಲ್ಲದೇ ಇತರ ಭಾಷೆ ಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಳಿಕ ಕಾಂತಾರ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಎಲ್ಲಾ ಭಾಷೆಗಳಲ್ಲೂ ಡಬ್ ಆಗಿತ್ತು. ಕೇವಲ 16 ಕೋಟಿ ರೂಪಾಯಿ ನಲ್ಲಿ ನಿರ್ಮಾಣವಾಗಿದ್ದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಅಲ್ಲದೇ ಸಾಲು ಸಾಲು ಪ್ರಶಸ್ತಿಗಳನ್ನು ಚಿತ್ರ ಬಾಚಿಕೊಂಡಿತ್ತು.

ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರಲಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಅಧ್ಯಾಯ 1 ಫಸ್ಟ್ ಲುಕ್ ರಿಲೀಸ್ ಆಗಿದೆ. ರಿಷಬ್ ಶೆಟ್ಟಿ ಶಿವನ ಅವತಾರದ ಮತ್ತೊಂದು ರೂಪವಾಗಿ ಫಸ್ಟ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದುಕೊಂಡಿರುವ ಕಾಂತಾರ ಅಧ್ಯಾಯ 1 ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.












Click it and Unblock the Notifications