Manjula: ಮಂಜುಳಾ ಸಾವಿಗೆ ಕಾರಣವೇನು? ನಟಿ ಅಂತ್ಯವನ್ನು ಕಣ್ಣಾರೆ ಕಂಡವರು ಹೇಳಿದ್ದೇನು?
80ರ ದಶಕದಲ್ಲಿ ಕನ್ನಡ ಚಿತ್ರರಂಗ ಅದೆಷ್ಟೋ ನಟಿಯರನ್ನು ಕಂಡಿದೆ. ಒಂದಿಷ್ಟು ಕಲಾವಿದೆಯರು ಜನಮಾನಸದಲ್ಲಿ ಉಳಿದರೆ, ಇನ್ನೂ ಕೆಲವು ನಟಿಯರು ಕಾರಣಾಂತರಗಳಿಂದ ತೆರೆ ಮರೆಗೆ ಸರಿದರು. ಆದರೆ ತಮ್ಮ ನಟನೆಯಿಂದ ಜನರ ಮೆಚ್ಚುಗೆ ಗಳಿಸಿ ಅಪಾರ ಅಭಿಮಾನ ಗಳಿಸಿದ್ದ ಕೆಲ ನಟಿಯರು ದುರಂತ ಅಂತ್ಯ ಕಂಡಿರುವುದು ವಿಷಾದನೀಯ. ಈ ಪೈಕಿ ಹಿರಿಯ ನಟಿ ಮಂಜುಳಾ ಕೂಡ ಒಬ್ಬರು.
80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಮಂಜುಳಾ, ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದು ತಮ್ಮ ಅಮೋಘ ನಟನೆಯ ಮೂಲಕ ಯಶಸ್ಸು ಕಂಡಿದ್ದರು. ವರ ನಟ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಶ್ರೀನಾಥ್‌ರಂತಹ ಮುಂತಾದ ಸಮಕಾಲೀನ ನಟರೊಂದಿಗೆ ತೆರೆ ಹಂಚಿಕೊಂಡು ನಟನೆಯಲ್ಲಿ ಮಂಜುಳಾ ಸೈ ಎನಿಸಿಕೊಂಡು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದರು.

ಖಾಸಗಿ ಜೀವನದಲ್ಲಿ ಏರಿಳಿತಗಳನ್ನು ಕಂಡ ನಟಿ ಮಂಜುಳಾ ತಮ್ಮ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು. ಆದರೆ ಇವರ ಸಾವಿನ ಸುತ್ತ ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದವು. ಅವರ ಸಾವು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎನ್ನುವುದರ ಬಗ್ಗೆ ಅನೇಕ ವಿಚಾರಗಳು ಹರಿದಾಡಿದ್ದವು. ಮಂಜುಳಾ ಅವರ ಸಾವಿನ ನೈಜ ವಿಚಾರಗಳು ಈಗೀಗ ಬೆಳಕಿಗೆ ಬರುತ್ತಿದ್ದು, ಅವರ ಅತ್ಯಾಪ್ತರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.
ನಟಿ ಮಂಜುಳಾ ಅವರ ಸಹೋದರನ ಪತ್ನಿ ಅಗ್ನಿ ದುರಂತ ನಡೆದ ದಿನ ಏನಾಯ್ತು ಎನ್ನುವುದರ ಬಗ್ಗೆ ವಿವರಿಸಿದ್ದಾರೆ. ಮಂಜುಳ ಅವರೊಂದಿಗಿನ ಬಾಂಧವ್ಯದ ಬಗ್ಗೆ ಹೇಳಿಕೊಂಡ ಅವರು, ಏನು ಮಾಡುವುದು ಅವರನ್ನು ಕಳೆದುಕೊಂಡೆವು, ಆ ದಿನ ಒಂದು ಸೆಕೆಂಡ್‌ನಲ್ಲಿ ನಡೆದ ಅವಘಡದಿಂದ ಹೀಗೆ ಆಗಿ ಹೋಯ್ತು ಎಂದು ಭಾವುಕರಾಗಿದ್ದರೆ.
'ಮಗ ಬಂದಿದ್ದಾನೆ ಎಂದು ಅವರು ಸ್ಟೌವ್ ಹಚ್ಚಿದ್ದರು. ಆದರೆ ಗ್ಯಾಸ್ ಹಚ್ಚಿರುವುದು ಅವರಿಗೆ ನೆನಪಿಲ್ಲ. ಆಗೆಲ್ಲಾ ಸಂಜೆ ಹೊತ್ತಲ್ಲಿ ಸೊಳ್ಳೆ ಬರುತ್ತದೆ ಎಂದು ನಾವು ಕಿಟಕಿಯಲ್ಲ ಕ್ಲೋಸ್ ಮಾಡಿದ್ದೇವು. ಅವರಿಗೆ ಗ್ಯಾಸ್ ಹಚ್ಚಿರುವುದೇ ನೆನಪಿಲ್ಲ. ಮಗ ಬಂದ ಎಂದು ಅವನ ಜೊತೆ ಹೋಗಿದ್ದಾರೆ. ಸ್ವಲ್ಪ ಸಮಯ ಬಿಟ್ಟು ಬಂದು ಬೆಂಕಿ ಅಂಟಿಸಿದ್ದಾರೆ. ಮೊದಲೇ ಸಿಂತಟಿಕ್ ಬಟ್ಟೆ ಧರಿಸಿದ್ದರು, ಇದರಿಂದ ಮೈಗೆ ಬೆಂಕಿ ಹೊತ್ತಿಕೊಂಡಿತ್ತು.'

'ಆ ದಿನ ಯಾರು ಇರಲಿಲ್ಲ ಬೇರೆ. ಜೊತೆಯಲ್ಲಿ ಚಿಕ್ಕ ಮಕ್ಕಳಿದ್ದರು. ಅವರು ಜೋರಾಗಿ ಕೂಗಿಕೊಂಡಾಗ ಏನು ಮಾಡಬೇಕೋ ತಿಳಿಯಲಿಲ್ಲ. ಮನೆಯಲ್ಲಿದ್ದ ಹೊದಿಕೆಯೊಂದನ್ನು ತೆಗೆದುಕೊಂಡು ತಕ್ಷಣವೇ ಸುತ್ತಿದೆವು. ಬಳಿಕ ಆಟೋದಲ್ಲಿ ಸಮೀಪದ ಆಸ್ಪತ್ರೆಗೆ ಹೋದೆವು. ಬೆಂಕಿ ಅವಘಡ ಆದ ಕಾರಣ ಅಲ್ಲಿ ಚಿಕಿತ್ಸೆ ನೀಡಲಿಲ್ಲ. ಹೀಗಾಗಿ ಮತ್ತೆ ವಿಕ್ಟೋರಿಯಾಕ್ಕೆ ಹೋದೆವು.
ರಾತ್ರಿ 8 ಗಂಟೆ ಆಗಿತ್ತು.. ಆಟೋದಲ್ಲೇ ನೀರು ಬೇಕು ನೀರು ಬೇಕು ಎನ್ನುತ್ತಿದ್ದರು. ನಾನು ಆಟೋ ನಿಲ್ಲಿಸಿ ನೀರು ತಂದು ಕೊಟ್ಟೆ, ತಣ್ಣಗಾಯ್ತು ಅಂದಿದ್ದರು. ಆ ಬಳಿಕ ಆಸ್ಪತ್ರೆಗೆ ದಾಖಲಿಸಿದೆವು..ಆಮೇಲೆ ಏನಾಯ್ತು ಎಲ್ಲರಿಗೂ ಗೊತ್ತಿದೆ. ನಾವು ಅವರನ್ನು ಕಳೆದುಕೊಂಡೆವು..ಆತ್ಮಹತ್ಯೆಯೂ ಅಲ್ಲ ಏನೂ ಅಲ್ಲ ಇದೊಂದು ಅಗ್ನಿ ಅವಘಡ, ನಾನೇ ನೋಡಿದ್ದೇನೆ. ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದು. ಎಂದು ಆ ದಿನದ ಇಂಚಿಚೂ ಮಾಹಿತಿಯನ್ನು ತೆರೆದಿಟ್ಟಿದ್ದಾರೆ.












Click it and Unblock the Notifications