'ನನ್ನ ಗಂಡ ಮದುವೆಗೂ ಮುಂಚೆ ನನ್ನ ಡೈಪರ್ ಕೂಡ ಚೇಂಜ್ ಮಾಡ್ತಿದ್ರು': ನಗಿಸುವ ನಟಿಯ ನೋವಿನ ಕಥೆ
ಗಿಚ್ಚಿ ಗಿಲಿ-ಗಿಲಿ ಖ್ಯಾತಿಯ ಪ್ರಿಯಾಂಕಾ ಕಾಮತ್ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ತಮ್ಮ ಪತಿ ಅಮಿತ್ ಜೊತೆಗೆ ಈ ಬಾರಿಯ ರಾಜಾ-ರಾಣಿ ರಿಯಾಲಿಟಿ ಶೋಗೆ ಸ್ಪರ್ಧಿಗಳಾಗಿ ಎಂಟ್ರಿಕೊಟ್ಟಿದ್ದಾರೆ.
ಗುಂಡಗಿನ ಮುದ್ದಾದ ಮುಖ..ಸದಾ ನಗುವ ಹಾಗೂ ನಗಿಸುವ ಪ್ರಿಯಾಂಕಾ ಕಾಮತ್ ತಮ್ಮ ಆರೋಗ್ಯದ ವಿಚಾರದಲ್ಲಿ ಸಾಕಷ್ಟು ನೋವು ತಿಂದಿದ್ದಾರೆ ಎನ್ನುವುದು ಈ ಹಿಂದೆಯೇ ಎಲ್ಲಿಗೂ ಗೊತ್ತಿತ್ತು. ಆದರೆ ಇಂತಹ ಸಮಯದಲ್ಲಿ ಅವರ ಪತಿ ಆ ಸಮಯದಲ್ಲಿ ಭಾವಿ ಪತಿಯಾಗಿದ್ದ ಅಮಿತ್ ಹೇಗೆ ಜೊತೆಗೆ ನಿಂತರು ಎನ್ನುವುದನ್ನು ಪ್ರಿಯಾಂಕಾ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ರಾಜಾ-ರಾಣಿ ಶೋನಲ್ಲಿ ಪ್ರಿಯಾಂಕಾ ಕಾಮತ್ ಹಾಗೂ ಅಮಿತ್ ಅವರು ತಮ್ಮ ಪ್ರೀತಿ ಶುರುವಾದ ಬಗ್ಗೆ ಹೇಳಿಕೊಂಡಿದ್ದಾರೆ. ಅರೆಂಜ್ ಮ್ಯಾರೇಜ್ ಆಗಬೇಕೆಂದುಕೊಂಡಿದ್ದ ಪ್ರಿಯಾಂಕಾ ಕಾಮತ್ ಅವರು ಆರಂಭದಲ್ಲಿ ಕೆಲ ಮದುವೆ ಸಂಬಂಧಗಳನ್ನು ರಿಜೆಕ್ಟ್ ಮಾಡಿದ್ದರಂತೆ, ಅದಕ್ಕಿಂತ ಜಾಸ್ತಿ ಹುಡುಗರು ಅವರನ್ನು ರಿಜೆಕ್ಟ್ ಮಾಡಿದ್ದರಂತೆ. ಒಟ್ಟು 258 ಸಂಬಂಧಗಳನ್ನು ಪ್ರಿಯಾಂಕಾ ನೋಡಿದ್ದರಂತೆ.
ಹೀಗಾಗಿ ಮದುವೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ಪ್ರಿಯಾಂಕಾ ಅಣ್ಣನ ಮದುವೆಯಲ್ಲಿ ಪ್ರಿಯಾಂಕಾ ಅವರು ಅಮಿತ್‌ರನ್ನು ಮೊದಲ ಬಾರಿಗೆ ಭೇಟಿ ಮಾಡಿ ಬಳಿಕ ಮಾತನಾಡಿ ಮದುವೆಯಾಗುವುದಾಗಿ ನಿರ್ಧರಿಸಿದ್ದರಂತೆ. ಆದರೆ ದುರಾದೃಷ್ಟವಶಾತ್ ಅದೇ ಸಮಯದಲ್ಲಿ ಪ್ರಿಯಾಂಕಾಗೆ ಆರೋಗ್ಯ ಹದಗೆಟ್ಟಿದ್ದು, ಎರಡು ಬಾರಿ ಸರ್ಜರಿಗೊಳಗಾದರು.

ಕೂರಲು ಏಳಲು ಆಗದ ಸ್ಥಿತಿಯಲ್ಲಿದ್ದ ಪ್ರಿಯಾಂಕಾ ಅವರನ್ನು ಮನೆಯವರಷ್ಟೇ ಅಮಿತ್ ಕೂಡ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರಂತೆ. ಪ್ರಿಯಾಂಕಾ ಅವರ ಡೈಪರ್ ಚೇಂಜ್ ಮಾಡುವುದು, ಸ್ಪಂಜ್ ಬಾತ್ ಮಾಡಿಸುವುದು ಸೇರಿ ಎಲ್ಲವನ್ನೂ ಅಮಿತ್ ಮದುವೆಗೂ ಮುಂಚೆಯೇ ಮಾಡಿದ್ದರಂತೆ. ಅಮಿತ್ ಒಳ್ಳೆತನ ಕಂಡ ಪ್ರಿಯಾಂಕಾ, ನನ್ನ ಜೀವನ ಮುಂದೆ ಹೇಗೆ ಅಂತಾ ಗೊತ್ತಿಲ್ಲ. ಆದರೆ ನಿಮ್ಮ ಜೀವನ ಹಾಳಾಗಬಾರದು ಎಂದು ಈ ಮದುವೆ ಬೇಡ ಅಂದಿದ್ದರಂತೆ. ಆದರೆ ಅಮಿತ್ ಜೊತೆಗೆ ಇದ್ದು ಪ್ರಿಯಾಂಕಾಗೆ ಧೈರ್ಯ ತುಂಬಿದ್ದು, ಕೊನೆಗೂ ಪ್ರಿಯಾಂಕಾ ಈ ಎಲ್ಲಾ ಕಷ್ಟದಿಂದ ಹೊರ ಬಂದರು.
ಕಷ್ಟದ ಸಮಯದಲ್ಲಿ ತನ್ನ ಜೊತೆಗಿದ್ದ ಅಮಿತ್ ಅವರನ್ನು ಪ್ರಿಯಾಂಕಾ ಅದ್ಧೂರಿಯಾಗಿ ಮದುವೆಯಾದರು. ಸತತ ಹತ್ತು ದಿನಗಳ ಕಾಲ ಮದುವೆ ನಡೆದಿದ್ದು, ಕಿರುತೆರೆ ಕಲಾವಿದರು ಸೇರಿ ಅನೇಕರು ಭಾಗಿಯಾಗಿದ್ದರು. ಟ್ರಾವೆಲ್ ಮಾಡಿಕೊಂಡು ಖುಷಿ ಖುಷಿಯಾಗಿರುವ ಈ ಜೋಡಿ ಸದ್ಯ ರಾಜಾ-ರಾಣಿ ರಿಲೋಡೆಡ್ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟಿದ್ದು, ಇತರ ಸ್ಪರ್ಧಿಗಳಿಗೆ ಹೇಗೆ ಕಾಂಪಿಟೇಷನ್ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications