Pankaj Udhas: ಕಿಚ್ಚ ಸುದೀಪ್ ಹಾಡಿಗೆ ಧ್ವನಿಯಾಗಿದ್ದ ಪಂಕಜ್ ಉಧಾಸ್ ನಿಧನ
ಭಾರತದ ಜನಪ್ರಿಯ ಗಾಯಕ ಹಾಗೂ ಗಜಲ್‌ನ ದಂತಕಥೆ ಪಂಕಜ್ ಉಧಾಸ್(73) ಇಂದು (ಫೆಬ್ರವರಿ 26) ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಪಂಕಜ್ ಉಧಾಸ್, 90ರ ದಶಕದಲ್ಲಿ ಕನ್ನಡ, ಗಜಲ್ ಮತ್ತು ಹಿಂದಿ ಸಿನಿಮಾಗಳ ಹಾಡಿನಿಂದ ಭಾರಿ ಜನಪ್ರಿಯರಾಗಿದ್ದರು. ಹೆಚ್ಚಾಗಿ ಗಜಲ್ ಹಾಡುಗಳಿಂದ ಗಾಯಕ ಪಂಕಜ್ ಉದಾಸ್ ಫೇಮಸ್ ಆಗಿದ್ದು ಅದರಿಂದಲೇ ಹೆಚ್ಚು ಗುರುತಿಸಿಕೊಂಡಿದ್ದರು.

ಬಾಲಿವುಡ್ನ ಅನೇಕ ಹಿಟ್ ಹಾಡುಗಳಿಗೆ ಪಂಕಜ್ ಉಧಾಸ್ ಧ್ವನಿಯಾಗಿದ್ದು, ಕನ್ನಡದಲ್ಲಿಯೂ ಇವರ ಧ್ವನಿ ಚಿರಪರಿಚಿತವಾಗಿತ್ತು. ಕಿಚ್ಚ ಸುದೀಪ್ ನಾಯಕ ನಟರಾಗಿ ಅಭಿನಯಿಸಿರುವ 'ಸ್ಪರ್ಶ' ಸಿನಿಮಾದ ಗೀತೆಗಳನ್ನು ಪಂಕಜ್ ಉಧಾಸ್ ಹಾಡಿದ್ದು, ಈ ಮೂಲಕ ಕನ್ನಡ ಸಂಗೀತ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.
ಕಿಚ್ಚ ಸುದೀಪ್ ಅವರ ಬರೆಯದ ಮೌನದ ಕವಿತೆ ಹಾಡಾಯಿತು.., ಚಂದಕಿಂತ ಚಂದ ನೀನೇ ಸುಂದರ ಹಾಡುಗಳಿಗೆ ಪಂಕಜ್ ಉಧಾಸ್ ಧ್ವನಿಯಾಗಿದ್ದರು. 1980ರ ದಶಕದಲ್ಲಿ ಪಂಕಜ್ ಉಧಾಸ್ ಅವರು ಗಝಲ್ ಗಾಯನದ ಮೂಲಕ ಫೇಮಸ್ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಒಂದು ಕಾಲದಲ್ಲಿ ಪಂಕಜ್ ಉಧಾಸ್ ಕಂಠಕ್ಕೆ ಮನಸೋಲದವರಿಲ್ಲ ಎನ್ನುವಂತಾಗಿತ್ತು.
ಗಾಯಕ ಪಂಕಜ್ ಉದಾಸ್ ಅವರಿಗೆ ಏನಾಗಿತ್ತು..?
ಕಳೆದ 10 ದಿನದ ಹಿಂದೆ ಗಾಯಕ ಪಂಕಜ್ ಉದಾಸ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಈ ವಿಚಾರವನ್ನು ಸ್ವತಃ ಕುಟುಂಬಸ್ಥರೇ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕಂಚಿನ ಕಂಠದ ಗಾಯಕನ ಅಗಲಿಕೆಗೆ ಸಂಗೀತ ಕ್ಷೇತ್ರ ಗಣ್ಯರು ಹಾಗೂ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.












Click it and Unblock the Notifications