'ನನ್ನ ಗಂಡ ಅವರ ಅಕ್ಕನನ್ನೇ ಮದುವೆಯಾಗಿರುವುದು ಅಂತಾ ಗೊತ್ತೇ ಇರಲಿಲ್ಲ'
ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ವಸಿಷ್ಠ ಅಜ್ಜಿ ಪಾತ್ರದಲ್ಲಿ ನಟಿಸಿದ್ದ ಹಿರಿಯ ನಟಿ ಕಮಲಶ್ರೀ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಸದ್ಯ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗುಣಮುಖರಾಗಲು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಆರೋಗ್ಯದ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದರು.
ಹಿರಿಯ ನಟಿಯಾಗಿರುವ ಕಮಲಶ್ರೀ ಅವರು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಅವರು ತಮ್ಮ ಮದುವೆ ಹಾಗೂ ಗಂಡನ ಬಗ್ಗೆ ಮೌನ ಮುರಿದಿದ್ದಾರೆ. ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ನನಗೆ ಮದುವೆಯಾಗಿ ಎರಡು ತಿಂಗಳಿಗೆ ಗಂಡ ಬಿಟ್ಟು ಹೋದರು. ನನ್ನ ತಾಯಿಯೇ ನೋಡಿ ಮಾಡಿದ್ದು, ನನಗೆ ಲವ್ ಎಲ್ಲಾ ಏನೂ ಗೊತ್ತಿಲ್ಲ. ಬಹುಶಃ ಲವ್ ಮಾಡಿ ಮದುವೆ ಆಗಿದ್ದರೆ ಚೆನ್ನಾಗಿ ಇರುತ್ತಿದ್ದೇನೇನೋ. ಗೆಜ್ಜೆ ಪೂಜೆ ಸಿನಿಮಾದಲ್ಲಿ ಅವರ ಅಮ್ಮ ನಮ್ಮ ಅಮ್ಮನಿಗೆ ಪರಿಚಯ ಆದರು. ಅಲ್ಲಿಂದ ನನ್ನ ಮದುವೆ ಬಂದು ನನ್ನ ಕುತ್ತಿಗೆಗೆ ಬಂತು' ಎಂದರು.

'ಸಕಲಕಲಾವಲ್ಲಭ ಅವನು. ಮೊದಲು ಮದುವೆ ಆಗಿತ್ತಂತೆ. ನನ್ನ ಮದುವೆಯಾಗಿ ಎರಡೇ ತಿಂಗಳಿಗೆ ಬಿಟ್ಟು ಬೇರೆ ಮದುವೆ ಆದರು. ಪಾಪ ಆಕೆ ತೀರಿ ಹೋದರು. ಅವಳ ತಂಗಿ ಹಾಗೂ ನಾನು ತುಂಬಾ ಆತ್ಮೀಯರು. ನನ್ನ ಗಂಡ ಅವರ ಅಕ್ಕನನ್ನೇ ಮದುವೆಯಾಗಿರುವುದು ಅಂತಾ ನನಗೆ ಗೊತ್ತೇ ಇರಲಿಲ್ಲ. ಆಮೇಲೆ ಗೊತ್ತಾಯಿತು. ಅವಳು ಹಾಗೂ ನಾನು ಒಟ್ಟಿಗೆ ನಾಟಕ ಮಾಡುತ್ತಿದ್ದೇವು. ನಮ್ಮ ಬಾವ ಹಾಗೇ ಹೀಗೆ ಎನ್ನುತ್ತಿದ್ದಳು. ಒಂದು ಸಲ ಬೈಕ್ ನಿಲ್ಲಿಸುವಾಗ ನಮ್ಮ ಬಾವ ಅಂತಾ ತೋರಿಸಿದಳು ನೋಡಿದರೆ ನನ್ನ ಗಂಡನೇ. ಇವರಾ ನಿಮ್ಮ ಬಾವ ಅಂದರೆ ಹೌದು ಅಂದಳು ಗಂಡನಿಗೆ ಹೆಂಡತಿಯನ್ನು ಪರಿಚಯ ಮಾಡಿಕೊಟ್ಟಳು'.
'ಅವತ್ತು ನಮ್ಮ ತಾಯಿಯನ್ನು ಕರೆದುಕೊಂಡು ಹೋಗಿದ್ದೆ ಆಕೆ ಬಾವ, ಇವರು ಕಮಲ ಹಾಗೂ ಅವರ ಅಮ್ಮ ಅಂತಾ ಪರಿಚಯ ಮಾಡಿಕೊಟ್ಟಳು. ಹೇಗಿರುತ್ತದೆ ನೋಡಿ ಯಾವುದೋ ಸಿನಿಮಾ ಧಾರಾವಾಹಿ ರೀತಿಯ ದೃಶ್ಯ ಅದು. ಇದು ನನ್ನ ಜೀವನದಲ್ಲಿ ನಡೆದ ಘಟನೆ. ನಾವು ಹೇಳುವ ಹಾಗಿಲ್ಲ, ಅವರು ಹೇಳುವ ಹಾಗಿಲ್ಲ. ಅಂದಿನ ಪರಿಸ್ಥಿತಿ ಹಾಗಿತ್ತು' ಎಂದು ಬೇಸರ ವ್ಯಕ್ತಪಡಿಸಿದರು.

'ಅವರು ನನ್ನನ್ನೇ ನೋಡುತ್ತಿದ್ದರು. ಆಗ ಅವಳು ತಪ್ಪು ತಿಳಿದುಕೊಂಡಳು. ಗಂಡ ಬಿಟ್ಟವಳು ಇವಳು ನನ್ನ ಬಾವನಿಗೆ ಲೈನ್ ಹೊಡೆಯುತ್ತಿದ್ದಾಳೆ. ನಮ್ಮ ನಾವ ಇವಳಿಗೆ ಲೈನ್ ಹೊಡೆಯುತ್ತಿದ್ದಾರೆ ಅಂದುಕೊಂಡು ಏನೇನು ತಪ್ಪು ತಿಳಿದುಕೊಂಡರು ಅಂತಾ ಗೊತ್ತಿಲ್ಲ. ಬೇರೆಯವರೆಲ್ಲಾ ಬಂದು ಹೇಳಿದರು ಅವರು ನಿಮ್ಮ ಇಬ್ಬರ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ ಅಂತಾ. ಯಾರು ಏನಾದರೂ ತಿಳಿದುಕೊಳ್ಳಲಿ ನನಗೂ ಅವರಿಗೂ ಈಗ ಸಂಬಂಧ ಇಲ್ಲ. ಯಾಕೆ ಬೇಕು ಅಷ್ಟೇ ಅಂತಾ ಸುಮ್ಮನಾಗಿದ್ದೆ' ಎಂದು ತಮಗಾದ ನೋವನ್ನು ತೋಡಿಕೊಂಡರು.












Click it and Unblock the Notifications