ನಟಿ ರಮ್ಯಾ ಬೆಂಬಲಕ್ಕೆ ನಿಂತ ಫೈರ್ ಸಂಸ್ಥೆ; ದೂರು ಕೊಟ್ಟರೆ ಕ್ರಮ ಎಂದ ಗೃಹ ಸಚಿವ
ನಟಿ ರಮ್ಯಾ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಸೋಷಿಯಲ್ ಮೀಡಿಯಾ ಗಲಾಟೆ ಅತಿರೇಕಕ್ಕೆ ತಲುಪಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರವಾಗಿ ರಮ್ಯಾ ಹಾಗೂ ಡಿಬಾಸ್ ಫ್ಯಾನ್ಸ್ ನಡುವೆ ವಾಕ್ಸಮರ ಮುಂದುವರಿದಿದೆ. ರಮ್ಯಾ ಅವರು ರೇಣುಕಾಸ್ವಾಮಿ ಪರ ಮಾತನಾಡುತ್ತಿದ್ದಾರೆ ಎಂದು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ರಮ್ಯಾ ಪೋಸ್ಟ್‌ಗೆ ಕೆಟ್ಟ ಕಾಮೆಂಟ್ ಹಾಕಿ ವಿಕೃತಿ ಮೆರೆದಿದ್ದಾರೆ. ಸದ್ಯ ಇದು ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿದೆ. ಈ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೂಡ ಪ್ರತಿಕ್ರಿಯಿಸಿ ಮಹತ್ವದ ಮಾಹಿತಿ ನೀಡಿದ್ದಾರೆ.
ನಟಿ ರಮ್ಯಾ ಅವರು ದೂರು ಕೊಟ್ಟರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ನಟಿ ದೂರು ಕೊಟ್ಟರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಅಲ್ಲದೇ ನಮ್ಮಲ್ಲಿ ಇಂತಹ ಕೆಲವು ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ದೂರು ತೆಗೆದುಕೊಳ್ತಾರೆ. ಆ ರೀತಿ ಏನಾದರೂ ಅವಕಾಶ ಇದ್ದರೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣ ಸಂಬಂಧ ರಾಜ್ಯ ಮಹಿಳಾ ಆಯೋಗ ಕೂಡ ಗಂಭೀರವಾಗಿ ಪರಿಗಣಿಸಿದ್ದು, ರಮ್ಯಾ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದೆ. ಕರ್ನಾಟಕ ಮಹಿಳಾ ಆಯೋಗವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಅಧಿಕೃತವಾಗಿ ಪತ್ರ ಬರೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ಅಪಮಾನಕಾರಿ ವಿಷಯಗಳ ಪ್ರಸಾರವನ್ನು ತಡೆಯಲು ಹಾಗೂ ಮಹಿಳೆಯರ ಗೌರವವನ್ನು ರಕ್ಷಿಸಲು ಪೊಲೀಸರಿಗೆ ಸೂಚನೆ ನೀಡಿದೆ.
ರಮ್ಯಾ ಬೆಂಬಲಕ್ಕೆ ಫೈರ್!
ನಟಿ ರಮ್ಯಾ ಅವರ ಬೆಂಬಲಕ್ಕೆ ಸಿನಿಮಾರಂಗದ ಹಲವರು ನಿಲ್ಲುತ್ತಿದ್ದಾರೆ. ಬಿಗ್‌ಬಾಸ್ ವಿನ್ನರ್ ಪ್ರಥಮ್ ಕೂಡ ರಮ್ಯಾ ಅವರ ಜೊತೆ ನಿಲ್ಲಬೇಕು ಎಂದಿದ್ದಾರೆ. ಇದೀಗ ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ & ಇಕ್ವಾಲಿಟಿ (ಫೈರ್) ಸಂಸ್ಥೆ ಕೂಡ ರಮ್ಯಾ ಅವರ ಬೆಂಬಲಕ್ಕೆ ನಿಂತಿದೆ. ನಟಿ ಮತ್ತು ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಅಶ್ಲೀಲ ಮತ್ತು ಸ್ತ್ರೀದ್ವೇಷದ ಸಾಮಾಜಿಕ ಮಾಧ್ಯಮ ದುರುಪಯೋಗದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ರಮ್ಯಾ ಅವರ ವಿರುದ್ಧ ನಡೆಸಲಾಗುತ್ತಿರುವ ಸ್ತ್ರೀದ್ವೇಷ ಮತ್ತು ಅಶ್ಲೀಲ ಟ್ರೋಲಿಂಗ್ ವಿರುದ್ಧದ ಹೋರಾಟದಲ್ಲಿ ಚಲನಚಿತ್ರೋದ್ಯಮ ಫಾರ್ ರೈಟ್ಸ್ & ಈಕ್ವಾಲಿಟಿ (ಫೈರ್) ಅವರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ಭಾರತೀಯ ಸಂವಿಧಾನದ 19ನೇ ವಿಧಿಯಲ್ಲಿ ಪ್ರತಿಪಾದಿಸಿರುವಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯವು ನಮ್ಮ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ಪ್ರಜಾಪ್ರಭುತ್ವ ಸಮಾಜದಲ್ಲಿ ಆರೋಗ್ಯಕರ ಚರ್ಚೆ ಮತ್ತು ವಿಭಿನ್ನ ಅಭಿಪ್ರಾಯಗಳು ಅತ್ಯಗತ್ಯವಾದರೂ, ಅಂತಹ ಚರ್ಚೆಯನ್ನು ನಾಗರಿಕತೆ ಮತ್ತು ಗೌರವದಿಂದ ನಡೆಸಬೇಕು ಎಂದು ಹೇಳಿದೆ.
ರಮ್ಯಾ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾದ, ದ್ವೇಷಪೂರಿತ ಆನ್‌ಲೈನ್ ಕಿರುಕುಳವು ಈ ಪ್ರಜಾಪ್ರಭುತ್ವ ತತ್ವಗಳ ನೇರ ಉಲ್ಲಂಘನೆಯಾಗಿದೆ ಮತ್ತು ಆನ್‌ಲೈನ್ ಸ್ತ್ರೀದ್ವೇಷ ಪ್ರತಿಬಿಂಬಿಸುತ್ತದೆ. ಮಹಿಳೆಯರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಿಂದನೀಯ ಪೋಸ್ಟ್‌ಗಳು 499, 500, 505(2), 509, ಇತ್ಯಾದಿ ಮತ್ತು ಐಟಿ ಕಾಯ್ದೆ (ಸೈಬರ್ ಕಾನೂನುಗಳು) ನಂತಹ ವಿವಿಧ ಐಪಿಸಿ ವಿಭಾಗಗಳ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಇಂತಹ ಆನ್‌ಲೈನ್ ದುರುಪಯೋಗಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಗೃಹ ಸಚಿವಾಲಯ ಮತ್ತು ಸೈಬರ್ ಕ್ರೈಂಗೆ ಒತ್ತಾಯಿಸಿದೆ.












Click it and Unblock the Notifications