ತಮನ್ನಾಗೆ ಕೋಟಿ ಕೋಟಿ ಸಂಭಾವನೆ; ಮೋಹಕತಾರೆ ರಮ್ಯಾ ಏನಂದ್ರು?
ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿ ಬರೋಬ್ಬರಿ 6.2 ಕೋಟಿ ರೂಪಾಯಿ ಸಂಭಾವನೆ ನೀಡಿರುವ ಬಗ್ಗೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಕನ್ನಡದ ನಟಿಯರನ್ನೇ ಇದಕ್ಕೆ ರಾಯಭಾರಿಯನ್ನಾಗಿ ಮಾಡಿ ಎಂಬ ಆಗ್ರಹ ಜೋರಾಗಿ ಕೇಳಿಬರುತ್ತಿದೆ. ಇದೇ ವಿಚಾರವಾಗಿ ನಟ ಮೋಹಕತಾರೆ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದು, ಮಹತ್ವದ ವಿಚಾರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂದು ಯಾವುದೇ ಕಥೆ ಹೇಳಲು ನವೀನ ಮತ್ತು ವಿಶಿಷ್ಟ ಮಾರ್ಗಗಳಿವೆ. ನಿಮ್ಮ ಉತ್ಪನ್ನವನ್ನು ಅನುಮೋದಿಸಲು ರಾಯಭಾರಿಯನ್ನು ಪಡೆಯುವ ಸಂಪ್ರದಾಯವು ಹಳೆಯದು. ಈ ಸಂದರ್ಭದಲ್ಲಿ ಅದು ತೆರಿಗೆ ಪಾವತಿದಾರರ ಹಣವನ್ನು ವ್ಯರ್ಥ ಮಾಡುತ್ತದೆ. ಇಂದು ಸಾರ್ವಜನಿಕರು ಸೆಲೆಬ್ರಿಟಿಯೊಬ್ಬರು ಅದನ್ನು ಪ್ರದರ್ಶಿಸುತ್ತಾರೆ ಎಂಬ ಕಾರಣಕ್ಕಾಗಿ ಏನನ್ನಾದರೂ ಖರೀದಿಸುವುದಿಲ್ಲ. ಸೋಪ್ ಅವರನ್ನು ರಾಯಭಾರಿಯಂತೆ ಕಾಣುವಂತೆ ಮಾಡುವುದಿಲ್ಲ ಎಂದು ಅವರಿಗೆ ತಿಳಿದಿದೆ ಎಂದು ನಟಿ ರಮ್ಯಾ ತಿರುಗೇಟು ನೀಡಿದ್ದಾರೆ.

ಜನರು ನಿಷ್ಠಾವಂತ ಗ್ರಾಹಕರಾಗಲು ನಿಮ್ಮ ಉತ್ಪನ್ನವು ಉತ್ತಮವಾಗಿರಬೇಕು. ಅದರಂತೆ ನಮ್ಮಲ್ಲಿ ಉತ್ತಮ ಉತ್ಪನ್ನವಿರುವುದು ಮಾತ್ರವಲ್ಲದೆ ಅದಕ್ಕೆ ಪರಂಪರೆಯೂ ಇದೆ. ಮೈಸೂರು ಸ್ಯಾಂಡಲ್ ಸೋಪ್ ಬಳಸಿದ ಮತ್ತು ಬಳಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ರಾಯಭಾರಿ. ಪ್ರತಿಯೊಬ್ಬ ಕನ್ನಡಿಗನೂ ರಾಯಭಾರಿ. ಅದನ್ನು ಜಗತ್ತಿಗೆ ಕೊಂಡೊಯ್ಯಲು ಪ್ರತಿಯೊಬ್ಬ ಕನ್ನಡಿಗನನ್ನು ತೊಡಗಿಸಿಕೊಳ್ಳಿ, ಅವರು ಅದನ್ನು ಉಚಿತವಾಗಿ ಮಾಡುತ್ತಾರೆ, ಕನ್ನಡಿಗರ ಹೆಮ್ಮೆಯ ಮುಂದೆ ಯಾವುದೂ ಸರಿಸಾಟಿ ಇಲ್ಲ ಎಂದು ಹೇಳಿದ್ದಾರೆ.
ಸಾವಯವ, ಸೃಜನಶೀಲ ಸಂಬಂಧಗಳು ಜನರೊಂದಿಗೆ ಹೋಗಬೇಕಾದ ಮಾರ್ಗವಾಗಿದೆ. ಆಪಲ್ ಒಂದು ಯಶಸ್ವಿ ಬ್ರ್ಯಾಂಡ್, ಇದುವರೆಗೆ ಆಪಲ್ ಹಣ ಪಾವತಿಸಿದ ಬ್ರಾಂಡ್ ಅಂಬಾಸಿಡರ್ ಅನ್ನು ಹೊಂದಿರಲಿಲ್ಲ. ಡವ್ ಸೋಪ್ ಅಭಿಯಾನಗಳು ನಾನು ನೋಡಿದ ಕೆಲವು ಅತ್ಯುತ್ತಮವಾದವುಗಳಲ್ಲಿ ಒಂದಾಗಿದೆ ಎಂದು ಉದಾಹರಣೆ ನೀಡಿದ್ದಾರೆ.

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಖಂಡನೆ
ಮೈಸೂರು ಸಂಸ್ಥಾನದ ಅರಸರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಸಂಸ್ಥೆಗಳಲ್ಲಿ ಒಂದಾಗಿದ್ದ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ಗೆ ಪರಭಾಷೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅತ್ಯಂತ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ನಿರ್ಧಾರ ಎಂದು ಮೈಸೂರು ರಾಜವಂಶಸ್ಥ ಹಾಗೂ ಬಿಜೆಪಿ ಸಂಸದ ಯದುವೀರ್ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
1916ರಲ್ಲಿ ನಮ್ಮ ಮೈಸೂರು ಸಂಸ್ಥಾನದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಈ ಸಂಸ್ಥೆ ಕಟ್ಟಲು ಪ್ರಮುಖ ಪಾತ್ರ ವಹಿಸಿದ್ದರು. ಈ ಸಂಸ್ಥೆಯ ಸೋಪ್ ದಶಕಗಳಿಂದಲೂ ಎಲ್ಲರ ಮನೆಯಲ್ಲಿ ಸ್ಥಾನ ಪಡೆದಿತ್ತು. ಈ ಸಂಸ್ಥೆಯ ಬಹುತೇಕ ವಸ್ತುಗಳನ್ನು ಬಳಸುತ್ತಿದ್ದವರೇ ಕನ್ನಡಿಗರು. ಇಂತಹ ಸಂಸ್ಥೆಗೆ ಪರಭಾಷೆ ನಟಿಯನ್ನು ರಾಯಭಾರಿಯನ್ನಾಗಿ ಮಾಡಿದ್ದು ಹುಚ್ಚುತನ. ಅದು ಸಾಲದೆಂಬಂತೆ ಆರು ಕೋಟಿಗೂ ಹೆಚ್ಚು ಹಣ ನೀಡಿ ರಾಯಭಾರಿ ಮಾಡಿರುವುದು ಅಕ್ಷಮ್ಯ ಎಂದು ಖಂಡಿಸಿದ್ದಾರೆ.
ಈ ಸಂಸ್ಥೆಗೆ ರಾಯಭಾರಿಯನ್ನು ಮಾಡಲೇಬೇಕು ಎಂಬುದು ಸರ್ಕಾರದ ನಿರ್ಧಾರವಾಗಿದ್ದರೆ ಕನ್ನಡದ ಜನಪ್ರಿಯ ಹಾಗೂ ಪ್ರತಿಭಾವಂತ ನಟಿಯರನ್ನು ನೇಮಿಸಿಕೊಳ್ಳಬೇಕಿತ್ತು. ತಮನ್ನಾ ಭಾಟಿಯಾ ಅವರಿಗೆ ಮಣೆ ಹಾಕುವ ಮೂಲಕ ರಾಜ್ಯ ಸರ್ಕಾರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ. ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಜನರಿಗೆ ನೀಡದೇ ಮಾತು ತಪ್ಪಿರುವ ಕಾಂಗ್ರೆಸ್ ಸರ್ಕಾರ, ಈಗ ಪರಭಾಷೆ ನಟಿಗೆ ಮಣೆ ಹಾಕುವುದನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರ ಈ ಕೂಡಲೇ ಈ ನೇಮಕವನ್ನು ತಕ್ಷಣವೇ ರದ್ದುಗೊಳಿಸಬೇಕು. ಕನ್ನಡಿಗರ 6.20 ಕೋಟಿ ರೂಪಾಯಿಯನ್ನು ಉಳಿಸಲಿ ಎಂದು ಒತ್ತಾಯಿಸಿದ್ದಾರೆ.











Click it and Unblock the Notifications