ವಿಷ್ಣುವರ್ಧನ್ ಸ್ಮಾರಕದ ಭೂಮಿ ಸ್ವಾಧೀನದ ಬಗ್ಗೆ ಬಿಗ್ ಅಪ್‌ಡೇಟ್: ಸಚಿವ ಖಂಡ್ರೆ ಹೇಳಿದ್ದೇನು?
ಭಾರಿ ವಿವಾದ ಹುಟ್ಟುಹಾಕಿರುವ ನಟ ವಿಷ್ಣುವರ್ಧನ್ ಸ್ಮಾರಕ ಜಾಗದ ವಿಚಾರವು ತಾರ್ಕಿಕ ಅಂತ್ಯ ಕಾಣುವ ಹಂತ ತಲುಪಿದೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸ್ಮಾರಕವನ್ನು ಇತ್ತೀಚೆಗೆ ತೆರವು ಮಾಡಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ವಿಷ್ಣುವರ್ಧನ್ ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋದ ಆ 10 ಎಕರೆ ವಿವಾದದ ಜಾಗವನ್ನ ತಮಗೆ ಒಪ್ಪಿಸಬೇಕು ಎಂದು ಕಂದಾಯ ಇಲಾಖೆಗೆ ಅರಣ್ಯ ಇಲಾಖೆ ಪತ್ರ ಬರೆದಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ವಿವಾದ ಸೃಷ್ಟಿಯಾದ ಹಿನ್ನೆಲೆ ಅಭಿಮಾನ್ ಸ್ಟುಡಿಯೋದ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು ಎಂಬ ವಿಚಾರ ಬೆಳಕಿಗೆ ಬಂದಿದ್ದು, ಆ ಜಾಗವನ್ನು ಸರ್ಕಾರ ವಶಕ್ಕೆ ಪಡೆಯುವುದಾಗಿ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಅಭಿಮಾನ್ ಸ್ಟುಡಿಯೋದ 10 ಎಕರೆ ಜಾಗವು ತಮ್ಮ ಇಲಾಖೆಗೆ ಸೇರಬೇಕು ಎಂದಿದ್ದಾರೆ.

1970ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಈ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಸ್ಟುಡಿಯೋ ನಿರ್ಮಾಣಕ್ಕಾಗಿ ನಟ ಬಾಲಣ್ಣ ಅವರಿಗೆ ನೀಡಲಾಗಿತ್ತು. ಅದೇ ಸಮಯದಲ್ಲಿ ಸರ್ಕಾರ ಷರತ್ತುಗಳನ್ನೂ ಹಾಕಿತ್ತು. ಆದರೆ ಅದನ್ನು ಪಾಲಿಸಿಲ್ಲ, ಬದಲಾಗಿ ಅವರು ಉಲ್ಲಂಘಿಸಿದ್ದಾರೆ. ಇದೀಗ ಬಾಕಿ ಉಳಿದಿರುವ 10 ಎಕರೆ ಜಾಗವನ್ನು ಕಂದಾಯ ಇಲಾಖೆಯೇ ಮುಟ್ಟುಗೋಲು ಹಾಕಿಕೊಂಡು, ಅರಣ್ಯ ಇಲಾಖೆಗೆ ಒಪ್ಪಿಸಬೇಕಾಗಿದೆ. ಈ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಆ ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಾಣ
ಬಾಲಣ್ಣ ಅವರಿಗೆ ಈ ಭೂಮಿ ಹಸ್ತಾಂತರಿಸುವ ಮುನ್ನ ಕೆಲ ಷರತ್ತುಗಳನ್ನು ವಿಧಿಸಲಾಗಿತ್ತು. ಅದೆಲ್ಲವನ್ನೂ ಅವರು ಉಲ್ಲಂಘಿಸಿದ್ದಾರೆ. ಈಗ ಮತ್ತೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಸಹ ಷರತ್ತಿನ ಉಲ್ಲಂಘನೆ. ಹೀಗಾಗಿ ಆ ಭೂಮಿಯನ್ನ ಅರಣ್ಯ ಇಲಾಖೆಗೆ ವಾಪಸ್ ಪಡೆಯಲು ಕಂದಾಯ ಇಲಾಖೆಗೆ ಕೇಳಲಾಗಿದೆ. ಅವರು ಆ ಜಾಗವನ್ನ ವಾಪಸ್ ನೀಡಿದರೆ ಆ ಜಾಗದಲ್ಲಿ ಒಂದು ಟ್ರೀ ಪಾರ್ಕ್ ಹಾಗೂ ಲಂಗ್ ಸ್ಪೇಸ್ ನಿರ್ಮಿಸಬೇಕು ಎಂದು ಯೋಜಿಸಿದ್ದೇವೆ ಎಂದಿದ್ದಾರೆ.

ಏನಿದು ವಿವಾದ?
ಕೆಂಗೇರಿ ಹೋಬಳಿಯ ಸರ್ವೆ ನಂಬರ್ 26ರಲ್ಲಿ ತುರಳ್ಳಿ 20 ಎಕರೆ ಜಮೀನನ್ನು ನಟ ಬಾಲಣ್ಣ ಅವರಿಗೆ ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕಾಗಿ ನೀಡಲಾಗಿತ್ತು. ಅದರಲ್ಲಿ ಸುಮಾರು 10 ಎಕರೆಯನ್ನ ಮಾರಾಟ ಮಾಡಲಾಗಿದ್ದು, ಇನ್ನುಳಿದ 10 ಎಕರೆ ಜಾಗವನ್ನು ಈಗ ಎಕರೆಗೆ ಸುಮಾರು 14.37 ಕೋಟಿ ರೂಪಾಯಿ ದರಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ವಿಷ್ಣುವರ್ಧನ್ ಸಮಾಧಿ ಹಾಗೂ ಬಾಲಣ್ಣ ಅವರ ಸಮಾಧಿ ಸ್ಥಳಗಳನ್ನು ನೆಲಸಮ ಮಾಡಲಾಗಿದ್ದು, ಇದೀಗ ಅರಣ್ಯ ಇಲಾಖೆ ಆ ಜಾಗ ತಮಗೆ ಸೇರಿದ್ದು ಎಂದು ಪಟ್ಟು ಹಿಡಿದಿದೆ.
ವಿಷ್ಣು ಸ್ಮಾರಕ ಮತ್ತೆ ನಿರ್ಮಾಣ?
ವಿಷ್ಣುವರ್ಧನ್ ಅಭಿಮಾನಿಗಳ ಸಂಘ ವಿಷ್ಣುಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅದೇ ಹತ್ತು ಎಕರೆ ಜಾಗ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಮಾತನಾಡಿರುವ ಸಚಿವ ಈಶ್ವರ್ ಖಂಡ್ರೆ, ವಿಷ್ಣುವರ್ಧನ್ ಅವರು ಜನಪ್ರಿಯ ನಟ, ಅವರ ಬಗ್ಗೆ ನಮಗೂ ಅಪಾರವಾದ ಗೌರವವಿದೆ. ಈಗ ಶ್ರೀನಿವಾಸ್ ಅವರು ಆ ಜಾಗ ಕೇಳಿದ್ದಾರೆ. ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.












Click it and Unblock the Notifications