ದುನಿಯಾ ವಿಜಯ್ ಮೊದಲ ತಮಿಳು ಸಿನಿಮಾಗೆ ವಿಘ್ನ, ಶೂಟಿಂಗ್ ಸೆಟ್‌ನಲ್ಲೇ ಖ್ಯಾತ ನಟಿ ಕಿರಿಕ್
ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅವರು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಡಿಮ್ಯಾಂಡ್ ಸೃಷ್ಟಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಿದ ಬಳಿಕ ಅವರಿಗೆ ಕೈತುಂಬಾ ಅವಕಾಶಗಳು ಅರಸಿ ಬಂದಿವೆ. ತೆಲುಗು ಬಳಿಕ ಅವರು ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಸಿನಿಮಾ ಸೆಟ್ಟೇರಿದೆ. ಆದರೆ ಆರಂಭದಲ್ಲೇ ಈ ಸಿನಿಮಾಗೆ ದೊಡ್ಡ ವಿಘ್ನ ಎದುರಾಗಿದ್ದು, ಸಿನಿಮಾದಲ್ಲಿ ನಟಿಸುತ್ತಿದ್ದ ಖ್ಯಾತ ನಟಿ ನಯನತಾರಾ ಗಲಾಟೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ತಮಿಳಿನ "ಮೂಕುತಿ ಅಮ್ಮನ್ 2" ಸಿನಿಮಾದಲ್ಲಿ ನಯನತಾರಾ ಹಾಗೂ ದುನಿಯಾ ವಿಜಯ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಶೂಟಿಂಗ್ ಶುರುವಾದ ಬೆನ್ನಲ್ಲೇ ನಯನತಾರಾ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೂಕುತಿ ಅಮ್ಮನ್ ಸಿನಿಮಾದ ಸೀಕ್ವೆಲ್ ಆಗಿರುವ "ಮೂಕುತಿ ಅಮ್ಮನ್ 2" ಇತ್ತೀಚೆಗೆ ಸೆಟ್ಟೇರಿತ್ತು. ಶೂಟಿಂಗ್ ಕೂಡ ಭರದಿಂದ ಸಾಗಿದ್ದು, ನಟಿ ನಯನತಾರಾ ಅವರು ದೇವತೆ ಪಾತ್ರಕ್ಕೆ ಆಯ್ಕೆಯಾಗಿದ್ದರು. ಸುಂದರ್ ಸಿ ನಿರ್ದೇಶನದ ಈ ಸಿನಿಮಾ 2020ರ ಹಿಟ್ ಚಿತ್ರದ ಮುಂದುವರಿದ ಭಾಗವಾಗಿದೆ. ಈ ಸಿನಿಮಾದ ಮುಹೂರ್ತ ಮಾರ್ಚ್ 6ರಂದು ನೆರವೇರಿತ್ತು. ಆದರೆ ವರದಿಗಳ ಪ್ರಕಾರ ನಟಿ ನಯನತಾರಾ ಮತ್ತು ಸಹಾಯಕ ನಿರ್ದೇಶಕರ ನಡುವೆ ಕಿರಿಕ್ ಆಗಿದೆಯಂತೆ. ಈ ಸಿನಿಮಾದಲ್ಲಿ ನಯನತಾರಾ ಅವರ ವೇಷಭೂಷಣದ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಈ ಕಾರಣಕ್ಕೆ ನಟಿ ನಯನತಾರಾ ಚಿತ್ರತಂಡದ ವಿರುದ್ಧ ಗರಂ ಆಗಿದ್ದು, ಶೂಟಿಂಗ್ ಸೆಟ್‌ನಲ್ಲೇ ಜೋರು ಗಲಾಟೆಯಾಗಿದೆ ಎನ್ನಲಾಗಿದೆ.

ಕೊನೆಗೆ ಚಿತ್ರತಂಡದೊಂದಿಗೆ ಕಿರಿಕ್ ಆದ ಕಾರಣ ನಿರ್ದೇಶಕ ಸುಂದರ್ ಸಿ ಅವರು ಶೂಟಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ನಯನತಾರಾ ಅವರು ಈ ಸಿನಿಮಾದಿಂದ ಹೊರನಡೆದಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಈ ಪಾತ್ರಕ್ಕೆ ನಯನತಾರಾ ಅವರ ಬದಲಿಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರನ್ನು ಕರೆತರಲು ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಎಲ್ಲೆಡೆ ಹರಿದಾಡಿದ ಕಾರಣ ನಿರ್ಮಾಪಕ ಇಶಾರಿ ಕೆ.ಗಣೇಶ್ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸಲು ಯತ್ನಿಸಿದ್ದು, ನಯನತಾರಾ ಅವರೊಂದಿಗೆ ಮಾತುಕತೆ ನಡೆಸಿದ್ದಾರಂತೆ. ಚಿತ್ರತಂಡವು ಗಲಾಟೆಯಾದ ಕಾರಣ ಪೊಲ್ಲಾಚಿ ಶೆಡ್ಯೂಲ್ ಅನ್ನು ನಿಲ್ಲಿಸಿತು. ಬಳಿಕ ಚೆನ್ನೈನ ಅಲಪಕ್ಕಂನಲ್ಲಿರುವ ಪೊನ್ನಿಯಮ್ಮನ್ ದೇವಸ್ಥಾನದಲ್ಲಿ ಶೂಟಿಂಗ್‌ಗೆ ಪ್ಲ್ಯಾನ್ ಮಾಡಿದೆ ಎಂದು ವರದಿಯಾಗಿದೆ.

ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದ್ದು, ಕನ್ನಡದ ಕರಿಚಿರತೆ ದುನಿಯಾ ವಿಜಯ್, ರೆಜಿನಾ ಕ್ಯಾಸಂಡ್ರ, ಯೋಗಿ ಬಾಬು, ಊರ್ವಶಿ, ಅಭಿನಯ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಚೆನ್ನೈನಲ್ಲಿ ನಡೆಯುತ್ತಿದ್ದು, ಮುಂದಿನ ಶೆಡ್ಯೂಲ್ ಅನ್ನು ಪೊಲ್ಲಾಚಿಯಲ್ಲಿ ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ. ಮೂಲಗಳ ಪ್ರಕಾರ ದುನಿಯಾ ವಿಜಯ್ ಅವರು ಈ ಸಿನಿಮಾದಲ್ಲಿ ವಿಲನ್ ಆಗಿ ಪ್ರಮುಖ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications