Drishyam-2: ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ 'ದೃಶ್ಯಂ 2' ರೀ-ರಿಲೀಸ್: ಕೋಟಿ ಬಿಡಿ, ಲಕ್ಷ ಗಳಿಸಲೂ ಒದ್ದಾಟ
ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ನಟನೆಯ 'ದೃಶ್ಯಂ 2' ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಭಾರಿ ಸದ್ದು ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಬಾಕ್ಸ್ ಆಫೀಸ್ ಅಂಕಿಅಂಶಗಳು ಮಾತ್ರ ಬೇರೆಯದೇ ಕಥೆ ಹೇಳುತ್ತಿವೆ. ಚಿತ್ರವು ಕೋಟಿಗಟ್ಟಲೆ ಕಲೆಕ್ಷನ್ ಮಾಡುವುದು ದೂರದ ಮಾತು, ಕನಿಷ್ಠ ಲಕ್ಷ ರೂಪಾಯಿಗಳನ್ನು ಗಳಿಸಲು ಸಹ ಪರದಾಡುತ್ತಿದೆ ಎಂದು ವರದಿಯಾಗಿದೆ.
ಒಟಿಟಿ ಪ್ರಭಾವವೇ ಮುಳುವಾಯಿತೇ?
2021ರಲ್ಲಿ ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ 'ದೃಶ್ಯಂ 2' ಚಿತ್ರವು ನೇರವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ಸಿನಿಮಾ ಜಾಗತಿಕವಾಗಿ ಭಾರಿ ಮೆಚ್ಚುಗೆ ಗಳಿಸಿತ್ತು. ಈಗ ಸುಮಾರು 5 ವರ್ಷಗಳ ನಂತರ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆಯಾದರೂ, ಪ್ರೇಕ್ಷಕರಿಂದ ತೀರಾ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಹೆಚ್ಚಿನ ಜನರು ಈ ಸಿನಿಮಾವನ್ನು ಮನೆಯಲ್ಲೇ ವೀಕ್ಷಿಸಿರುವುದರಿಂದ, ಚಿತ್ರಮಂದಿರಕ್ಕೆ ಬಂದು ನೋಡಲು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಯಾವುದೇ ಒಂದು ಸಿನಿಮಾ ಒಟಿಟಿಯಲ್ಲಿ ಸೂಪರ್ ಹಿಟ್ ಆದ ನಂತರ, ದೀರ್ಘ ಕಾಲದ ಬಳಿಕ ಅದನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವುದು ಆರ್ಥಿಕವಾಗಿ ಅಷ್ಟೊಂದು ಲಾಭದಾಯಕವಲ್ಲ ಎಂಬುದು ಈ ಚಿತ್ರದ ಮೂಲಕ ಸಾಬೀತಾಗಿದೆ. 'ದೃಶ್ಯಂ' ಮೊದಲ ಭಾಗ ಸೃಷ್ಟಿಸಿದ್ದ ಕ್ರೇಜ್ ಈ ಎರಡನೇ ಭಾಗಕ್ಕೆ ಥಿಯೇಟರ್‌ಗಳಲ್ಲಿ ಸಿಗದಿರುವುದು ಚಿತ್ರತಂಡಕ್ಕೆ ಭಾರೀ ಹಿನ್ನಡೆಯಾಗಿದೆ.
ದೃಶ್ಯಂ-3 ಮೇ 21ರಂದು ತೆರೆಗೆ
ಬಹುನಿರೀಕ್ಷಿತ 'ದೃಶ್ಯಂ 3' ಸಿನಿಮಾ ಇದೇ ಮೇ 21ರಂದು ತೆರೆಗೆ ಬರಲು ಸಿದ್ಧವಾಗಿದೆ. ಅದಕ್ಕೂ ಮುನ್ನ ಪ್ರೇಕ್ಷಕರಲ್ಲಿ ಮತ್ತೆ ಆ ಕ್ರೇಜ್ ಹುಟ್ಟುಹಾಕಲು ನಿರ್ಮಾಪಕರು 'ದೃಶ್ಯಂ 2' ಅನ್ನು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ ಮಾಡಿದ್ದರು. ಆದರೆ, ಈ ಐಡಿಯಾ ಈಗ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೋವಿಡ್ ಕಾರಣದಿಂದ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ 'ದೃಶ್ಯಂ 2' ಅನ್ನು ಈಗ ಚಿತ್ರಮಂದಿರಗಳಲ್ಲಿ ನೋಡಲು ಜನರು ಕಿಂಚಿತ್ತೂ ಆಸಕ್ತಿ ತೋರುತ್ತಿಲ್ಲ.
ವರದಿಗಳ ಪ್ರಕಾರ, ಕೇರಳದಾದ್ಯಂತ ಈ ಚಿತ್ರ ಕೇವಲ 3.5 ಲಕ್ಷ ರೂಪಾಯಿ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ. ಈಗಾಗಲೇ ಜನರು ಈ ಸಿನಿಮಾವನ್ನು ಒಟಿಟಿಯಲ್ಲಿ ಹಲವಾರು ಬಾರಿ ನೋಡಿರುವುದರಿಂದ, ಚಿತ್ರಮಂದಿರಕ್ಕೆ ಬಂದು ಹಣ ವ್ಯಯಿಸಲು ಆಸಕ್ತಿ ತೋರುತ್ತಿಲ್ಲ. ನಿಜವಾಗಿ 'ದೃಶ್ಯಂ 3' ಏಪ್ರಿಲ್ ತಿಂಗಳಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಸಂಘರ್ಷದ ಕಾರಣದಿಂದಾಗಿ ಬಿಡುಗಡೆ ವಿಳಂಬವಾಗಿತ್ತು. ಈಗ ಮೇ 21ಕ್ಕೆ ಈ ಹಿಟ್ ಫ್ರಾಂಚೈಸಿಯ ಕೊನೆಯ ಭಾಗ ತೆರೆಗೆ ಬರಲಿದೆ.
ಸಿನಿಮಾ ವಿಶ್ಲೇಷಕರ ಪ್ರಕಾರ, ಇಷ್ಟು ವರ್ಷಗಳ ನಂತರ 'ದೃಶ್ಯಂ 2' ಅನ್ನು ಮರು-ಬಿಡುಗಡೆ ಮಾಡುವ ಅಗತ್ಯವಿರಲಿಲ್ಲ. ಇದು 'ದೃಶ್ಯಂ 3' ಮೇಲಿರುವ ಹೈಪ್ ಮೇಲೆ ಯಾವುದೇ ಪರಿಣಾಮ ಬೀರದೆ, ಚಿತ್ರತಂಡಕ್ಕೆ ಆರ್ಥಿಕ ಮುಜುಗರ ಉಂಟುಮಾಡಿದೆ ಎನ್ನುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ 'ದೃಶ್ಯಂ 2' ಅನ್ನು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ ಮಾಡಲು ಮಾಡಿದ ವೆಚ್ಚವು, ಅದರಿಂದ ಬಂದ ಲಾಭಕ್ಕಿಂತ ಹೆಚ್ಚಾಗಿದೆ. ಇದು ಚಿತ್ರತಂಡಕ್ಕೆ ಆರ್ಥಿಕವಾಗಿ ಹಿನ್ನಡೆ ತಂದಿದ್ದರೂ, ಸಿನಿಮಾ ವಿಶ್ಲೇಷಕರು ಇದನ್ನು 'ದೃಶ್ಯಂ 3' ಚಿತ್ರದ ಭವಿಷ್ಯದ ಮುನ್ಸೂಚನೆ ಎಂದು ಪರಿಗಣಿಸುತ್ತಿಲ್ಲ.

ಸಿನಿಮಾ ಕಥೆ ಏನು?
ಹದಿಹರೆಯದ ಹುಡುಗನ ಕೊಲೆಯಾದ ರಾತ್ರಿ ತಾನು ಮತ್ತು ತನ್ನ ಕುಟುಂಬ ಎಲ್ಲಿದ್ದರು ಎಂಬ ಬಗ್ಗೆ ಪೊಲೀಸರಿಗೆ ನಂಬಲರ್ಹ ಸಾಕ್ಷ್ಯ ನೀಡಿದ್ದ ಜಾರ್ಜ್ ಕುಟ್ಟಿ (ಮೋಹನ್‌ಲಾಲ್), ಇನ್ಮುಂದೆ ಏನು ಮಾಡಲಿದ್ದಾನೆ? ಪೊಲೀಸರ ತನಿಖೆಯಿಂದ ಆತ ತಪ್ಪಿಸಿಕೊಳ್ಳಲು ಹೂಡುವ ಅಂತಿಮ ತಂತ್ರವೇನು? ಎಂಬ ಪ್ರಶ್ನೆಗಳಿಗೆ ಈ ಮೂರನೇ ಭಾಗ ಉತ್ತರ ನೀಡಲಿದೆ. ಜಾರ್ಜ್ ಕುಟ್ಟಿ ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಹೂಡುವ ಅಂತಿಮ ತಂತ್ರ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
2013ರಲ್ಲಿ ಕೇವಲ 3.5ರಿಂದ 5 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಮೊದಲ ಭಾಗ, ಜಾಗತಿಕವಾಗಿ 62-63 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು. ಕೇರಳದಲ್ಲಿ 150 ದಿನ ಹಾಗೂ ಯುಎಇಯಲ್ಲಿ 125 ದಿನಗಳ ಕಾಲ ಪ್ರದರ್ಶನ ಕಂಡು ಸಿನಿರಂಗವನ್ನೇ ಬೆರಗುಗೊಳಿಸಿತ್ತು. ಅಜಯ್ ದೇವಗನ್ ನಟನೆಯ ಇದರ ಹಿಂದಿ ರಿಮೇಕ್ ಕೂಡ ದೊಡ್ಡ ಮಟ್ಟದ ಯಶಸ್ಸು ಕಂಡಿದೆ.












Click it and Unblock the Notifications