ಗಿಲ್ಲಿಗಿಂತ ನನಗೆ ಡಿಮ್ಯಾಂಡ್ ಜಾಸ್ತಿ ಇದೆ, ಅವನಿಗೆ ಚಿನ್ನದ ಸರ ಹಾಕಿ ವಾಪಸ್ ತಗೋತಾರೆ: ಡಾಗ್ ಸತೀಶ್
ಬಿಗ್‌ಬಾಸ್ ಕನ್ನಡ ಸೀಸನ್-12ರ ವಿನ್ನರ್ ಗಿಲ್ಲಿ ವಿರುದ್ಧ ಡಾಗ್ ಸತೀಶ್ ಮತ್ತೆ ಲೇವಡಿ ಮಾಡಿದ್ದಾರೆ. ಬಿಗ್‌ಬಾಸ್ ಗೆದ್ದ ಬಳಿಕ ಗಿಲ್ಲಿ ಆಭರಣ ಮಳಿಗೆಯೊಂದರ ಉದ್ಘಾಟನೆಗೆ ಹೋಗಿದ್ದಾಗ ಅವರ ಕೊರಳಿಗೆ ಚಿನ್ನದ ಸರಗಳನ್ನು ಹಾಕಲಾಗಿತ್ತು. ಈ ವಿಡಿಯೋ ವೈರಲ್ ಕೂಡ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಗಿಲ್ಲಿ, ಅದು ಕಾರ್ಯಕ್ರಮಕ್ಕಷ್ಟೇ ಧರಿಸಿದ್ದ ಚಿನ್ನ, ಮತ್ತೆ ವಾಪಸ್ ತಗೊಂಡ್ರು ಎಂದಿದ್ದರು. ಈಗ ಇದೇ ವಿಚಾರವಾಗಿ ಡಾಗ್ ಸತೀಶ್ ಗಿಲ್ಲಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಗಿಲ್ಲಿಗಿಂತ ಹತ್ತು ಪಟ್ಟು ಹವಾ ನನ್ನದು
ಕಾರ್ಯಕ್ರಮಗಳಲ್ಲಿ ಸಿಗುವ ಉಡುಗೊರೆಗಳ ಬಗ್ಗೆ ಮಾತನಾಡುತ್ತಾ ಸತೀಶ್, "ಯಾವುದೇ ಸಮಾರಂಭಗಳಲ್ಲಿ ನನಗೆ ಚಿನ್ನದ ಸರ ಹಾಕಿದರೆ ಅದನ್ನು ನನಗೇ ಕೊಡುತ್ತಾರೆ. ಆದರೆ ಗಿಲ್ಲಿಗೆ ಹಾಕಿದ ಸರವನ್ನು ವಾಪಸ್ ತಗೋತಾರೆ. ಅವರಿಗೆ ಅಂತಹ ಬೆಲೆ ಬಾಳುವ ಉಡುಗೊರೆಯನ್ನು ಉಳಿಸಿಕೊಳ್ಳುವ ಅರ್ಹತೆ ಇಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ಸದ್ಯ ಇರುವ ಬೇಡಿಕೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಸತೀಶ್, "ನನಗೆ ದಿನಕ್ಕೆ ಕನಿಷ್ಠ ಮೂರು ಕಾರ್ಯಕ್ರಮಗಳಿಗೆ ಆಹ್ವಾನವಿರುತ್ತದೆ. ಗಿಲ್ಲಿಗಿಂತ ಹತ್ತು ಪಟ್ಟು ಹೆಚ್ಚಿನ ಹವಾ ನನಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಗಿಲ್ಲಿ ಮತ್ತು ಡಾಗ್ ಸತೀಶ್ ನಡುವಿನ ಕೆಸರೆರಚಾಟ ಈಗ ತಾರಕಕ್ಕೇರಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸತೀಶ್ ಅವರು ಗಿಲ್ಲಿ ನಟರಾಜ್ ಅವರ ವ್ಯಕ್ತಿತ್ವ ಹಾಗೂ ಅವರಿಗೆ ಸಿಗುತ್ತಿರುವ ಗೌರವದ ಬಗ್ಗೆ ಅತ್ಯಂತ ಕಟುವಾಗಿ ಮಾತನಾಡಿದ್ದಾರೆ. ಗಿಲ್ಲಿ ಹವಾ ಇನ್ನೂ ಕುಂದಿಲ್ಲ ಎಂಬ ಮಾತಿಗೆ ಕಿಡಿಕಾರಿದ ಸತೀಶ್, ತಮಗಿರುವ ಬೇಡಿಕೆಯೇ ಬೇರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಗಿಲ್ಲಿಗಿಂತ ಹತ್ತು ಪಟ್ಟು ಹೆಚ್ಚು ಜನಪ್ರಿಯತೆ ನನಗಿದೆ. ದಿನಕ್ಕೆ ಕನಿಷ್ಠ ಮೂರು ಕಾರ್ಯಕ್ರಮಗಳಿಗೆ ನಾನು ಅತಿಥಿಯಾಗಿ ಹೋಗುತ್ತಿದ್ದೇನೆ. ಗಿಲ್ಲಿಗೆ ಆ ಬೆಲೆ ಬಾಳುವ ವಸ್ತುಗಳನ್ನು ನಿಭಾಯಿಸುವ ಕೆಪಾಸಿಟಿ ಇಲ್ಲ, ಹಾಗಾಗಿಯೇ ಹಾಕಿದ ಸರವನ್ನು ಕಿತ್ತುಕೊಳ್ಳುತ್ತಾರೆ. ಆದರೆ ನಮಗೆ ಇರುವ ಮೌಲ್ಯಕ್ಕೆ ಗೌರವ ಸಲ್ಲಿಸಿ ಆ ವಸ್ತುಗಳನ್ನು ನಮಗೇ ಬಿಟ್ಟುಕೊಡುತ್ತಾರೆ ಎಂದೂ ಬೆನ್ನುತಟ್ಟಿಕೊಂಡಿದ್ದಾರೆ.
ಸತೀಶ್ ಅವರು ಗಿಲ್ಲಿ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಗಿಲ್ಲಿ ನಟರಾಜ್ ಅವರ ಸಾಮರ್ಥ್ಯ ಮತ್ತು ಜನಪ್ರಿಯತೆಯ ಬಗ್ಗೆಯೂ ಲೇವಡಿ ಮಾಡಿದ್ದಾರೆ. "ನನಗೆ ಫೋನ್ ಹಾಗೂ ಡೈಮಂಡ್ ನೆಕ್ಲೇಸ್‌ಗಳು ಉಡುಗೊರೆಯಾಗಿ ಬರುತ್ತಿವೆ. ಜನ ನನ್ನನ್ನು ಪ್ರೀತಿಸಿ ಇವನ್ನೆಲ್ಲ ನೀಡುತ್ತಾರೆ. ಆದರೆ ಗಿಲ್ಲಿಗೆ ಅಂತಹ ಮನ್ನಣೆ ಇಲ್ಲ" ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಬಿಗ್‌ಬಾಸ್‌ಗೆ ಹೋಗಿ ಮಾನ-ಮರ್ಯಾದೆ ಹೋಯ್ತು
ಬಿಗ್‌ಬಾಸ್ ಕಾರ್ಯಕ್ರಮದಿಂದ ತಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಸತೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಬಿಗ್‌ಬಾಸ್‌ಗೆ ಹೋಗುವ ಮೊದಲೇ ನನ್ನ ಲೈಫ್ ಚೆನ್ನಾಗಿತ್ತು. ಆಗ ಒಂದೊಂದು ಕಾರ್ಯಕ್ರಮಕ್ಕೆ ನಾನು 2.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದೆ. ಆದರೆ ಶೋಗೆ ಹೋಗಿ ಬಂದ ಮೇಲೆ ಮಾನ-ಮರ್ಯಾದೆ ಹೋದಂತಾಗಿದೆ. ಜನ ಈಗ ಕಡಿಮೆ ಸಂಭಾವನೆಗೆ ಕರೆಯುತ್ತಿದ್ದಾರೆ. ಹಾಗಾಗಿ ಇನ್ಮುಂದೆ ಎಲ್ಲೂ ಬಿಗ್‌ಬಾಸ್ ಹೆಸರು ಎತ್ತಲ್ಲ. ಕೇವಲ ನನ್ನ 'ಡಾಗ್' ಬಲದಿಂದಲೇ ನಾನು ಈಗಲೂ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದೇನೆ ಎಂದು ಸತೀಶ್ ಹೇಳಿದ್ದಾರೆ. ಡಾಗ್ ಸತೀಶ್ ಅವರ ಈ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಗಿಲ್ಲಿ ನಟರಾಜ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications