ಕಿಚ್ಚ ಸುದೀಪ್‌ಗೆ ಡಿ.ಕೆ.ಶಿವಕುಮಾರ್ ಸನ್ಮಾನ, ನಟ್ಟು ಬೋಲ್ಟ್ ವಿವಾದ ಸುಖಾಂತ್ಯ
"ಕನ್ನಡ ಚಿತ್ರರಂಗದವರ ನಟ್ಟು-ಬೋಲ್ಟ್ ಟೈಟ್ ಮಾಡೋದು ನಮಗೆ ಚೆನ್ನಾಗಿ ಗೊತ್ತಿದೆ" ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ನಟ ಕಿಚ್ಚ ಸುದೀಪ್ ತಿರುಗೇಟು ನೀಡಿದ ಬಳಿಕ ರಾಜಕೀಯ-ಚಿತ್ರರಂಗ ವಲಯದಲ್ಲಿ ಭಾರೀ ಚರ್ಚೆ ಹಾಗೂ ವಿವಾದ ಸೃಷ್ಟಿಯಾಗಿತ್ತು. ಇದಾದ ಬಳಿಕ ಕುಣಿಗಲ್ ಉತ್ಸವದ ವೇದಿಕೆಯಲ್ಲಿ ಸುದೀಪ್ ಹಾಗೂ ಡಿ.ಕೆ.ಶಿವಕುಮಾರ್ ಮುಖಾಮುಖಿಯಾಗಿದ್ದಾರೆ. ಅಲ್ಲದೆ, ಖುದ್ದು ಡಿ.ಕೆ.ಶಿವಕುಮಾರ್ ಅವರೇ ಕಿಚ್ಚ ಸುದೀಪ್ ಅವರನ್ನು ಗೌರವಿಸಿ ಸನ್ಮಾನ ಮಾಡಿದ್ದು, ನಟ್ಟು ಬೋಲ್ಟ್ ವಿವಾದ ಸುಖಾಂತ್ಯ ಕಂಡಿದೆ.
ಕೆಲ ತಿಂಗಳ ಹಿಂದೆ ನಡೆದ ಚಲನಚಿತ್ರೋತ್ಸವದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರು ನೀಡಿದ್ದ ಹೇಳಿಕೆಯು ಕನ್ನಡ ಚಿತ್ರರಂಗದ ವಿರುದ್ಧದ ಟೀಕೆಯಂತೆ ಕಾಣಿಸಿಕೊಂಡಿತ್ತು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಿಚ್ಚ ಸುದೀಪ್, ತಮ್ಮದೇ ಶೈಲಿಯಲ್ಲಿ ತೀಕ್ಷ್ಣ ಉತ್ತರ ನೀಡಿದ್ದರು. ಇಲ್ಲಿ ಎಲ್ಲರ ನಟ್ಟು ಬೋಲ್ಟ್ ಟೈಟಾಗಿಯೇ ಇದೆ ಎಂದಿದ್ದರು. "ಕನ್ನಡ ಚಿತ್ರರಂಗ ಯಾರ ಒತ್ತಡಕ್ಕೂ ತಲೆಬಾಗುವ ಕ್ಷೇತ್ರವಲ್ಲ" ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಿದ್ದರು. ಈ ಪ್ರತಿಕ್ರಿಯೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ತೀವ್ರಗೊಂಡಿದ್ದವು.

ಬಳಿಕ ಡಿ.ಕೆ.ಶಿವಕುಮಾರ್ ಅವರು ಕೂಡ ನಾನು ಯಾರ ಮಾತಿಗೂ ಪ್ರತಿಕ್ರಿಯೆ ನೀಡಲ್ಲ. ಎಲ್ಲರ ವಿಚಾರ ಗೊತ್ತಿದೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು. ಅಲ್ಲದೆ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ವಿಘ್ನ ಎದುರಾದಾಗಲೂ ನಟ್ಟು ಬೋಲ್ಟ್ ಟೈಟ್ ಹೇಳಿಕೆ ಮುನ್ನೆಲೆಗೆ ಬಂದಿತ್ತು. ಆದರೆ ಕೊನೆಗೆ ಡಿ.ಕೆ.ಶಿವಕುಮಾರ್ ಅವರೇ ಮಧ್ಯಪ್ರವೇಶಿಸಿ, ಈ ಸಮಸ್ಯೆ ಬಗೆಹರಿಸಿದ್ದರು.
ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ
ಇದಾದ ಬಳಿಕ ಸುದೀಪ್ ಕೂಡ ಸಂದರ್ಶನಗಳಲ್ಲಿ ಇದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ದರು. ನನ್ನ ಹಾಗೂ ಡಿ.ಕೆ ಸರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಚಿತ್ರರಂಗದ ಪರವಾಗಿ ಅವರ ಮಾತಿಗೆ ಉತ್ತರ ನೀಡಿದೆ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದಿದ್ದರು. ಬಳಿಕ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಡಿಕೆ ಶಿವಕುಮಾರ್ ಅವರು ವಿಶ್ ಕೂಡ ಮಾಡಿದ್ರು. ಆದರೆ ಮುಖಾಮುಖಿಯಾಗಿರಲಿಲ್ಲ.
ಈ ನಡುವೆ ಕುಣಿಗಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಚ್ಚರಿಯ ಬೆಳವಣಿಗೆ ಕಂಡುಬಂದಿತು. ವೇದಿಕೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ಕಿಚ್ಚ ಸುದೀಪ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ದೃಶ್ಯ ಇತ್ತೀಚಿನ ವಿವಾದಕ್ಕೆ ತೆರೆ ಎಳೆದಂತಾಯಿತು. ಇಬ್ಬರ ಈ ವೇದಿಕೆಯ ಮೇಲಿನ ಆತ್ಮೀಯತೆ, ವಿವಾದಕ್ಕೆ ಪೂರ್ಣ ವಿರಾಮ ಹಾಕಿದಂತಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಈ ಬೆಳವಣಿಗೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಜಕೀಯ-ಚಿತ್ರರಂಗ ನಡುವೆ ಅನಗತ್ಯ ಸಂಘರ್ಷ ಬೇಡ ಎಂದರು. ಇಬ್ಬರ ಹೇಳಿಕೆಗಳಿಂದ ಆರಂಭವಾದ ಗದ್ದಲವು ಕುಣಿಗಲ್ ಉತ್ಸವದ ಸನ್ಮಾನದಿಂದಲೇ ಶಾಂತಗೊಂಡಿದೆ. ಡಿಕೆ ಶಿವಕುಮಾರ್-ಕಿಚ್ಚ ಸುದೀಪ್ ನಡುವಿನ ವಿವಾದ ಕೊನೆಗೂ ಸುಖಾಂತ್ಯ ಕಂಡಿದೆ.












Click it and Unblock the Notifications