Darshan Thoogudeepa: ಹೀರೋ ಪಾತ್ರ ಬೇಡ ವಿಲನ್ ಪಾತ್ರವೇ ಬೇಕು ಎಂದಿದ್ದ ದರ್ಶನ್ ತೂಗುದೀಪ್; ಕಾರಣವೇನು?
ದರ್ಶನ್ ತೂಗುದೀಪ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಿದೆ. ದೀಪಾವಳಿ ಹಬ್ಬಕ್ಕೆ ಮುನ್ನವೇ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಇನ್ನೂ ವಿಶೇಷ ಎಂದರೆ ದರ್ಶನ್‌ರ ಸೂಪರ್ ಹಿಟ್ ಸಿನಿಮಾ 'ನವಗ್ರಹ' ಮರುಬಿಡುಗಡೆಗೆ ಸಜ್ಜಾಗಿದೆ. ದರ್ಶನ್ ಮಧ್ಯಂತರ ಜಾಮೀನು ಪಡೆದು, ಸದ್ಯ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದರೆ. ಮತ್ತೊಂದು ಕಡೆ ನವಗ್ರಹ ಚಿತ್ರತಂಡ ಮರುಬಿಡಗಡೆ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.
ನವೆಂಬರ್ 8ರಂದು ನವಗ್ರಹ ಸಿನಿಮಾ ಭರ್ಜರಿಯಾಗಿ ಮರುಬಿಡುಗಡೆ ಆಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳು ಒಂದಾಗಿ ಸೇರಿ ಮಾಡಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಟ ದರ್ಶನ್ ಈ ಸಿನಿಮಾದಲ್ಲಿ ಜಗ್ಗು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೈಸೂರಿನ ಅಂಬಾರಿ ಕದಿಯುವ ಗುಂಪಿನ ನಾಯಕನ ಪಾತ್ರದಲ್ಲಿ ದರ್ಶನ್ ಮಿಂಚಿದ್ದರು.

ಚಿತ್ರ ಮರುಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ದರ್ಶನ್ ಸಹೋದರ, ನವಗ್ರಹ ಸಿನಿಮಾದ ನಿರ್ದೇಶಕ ದಿನಕರ್ ತೂಗುದೀಪ್ ಆಸಕ್ತಿಕರ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ದಿನಕರ್ ತೂಗುದೀಪ ದರ್ಶನ್‌ಗಾಗಿ ಕೊಡಲು ಉದ್ದೇಶಿಸಿದ್ದ ಪಾತ್ರವೇ ಬೇರೆ, ದರ್ಶನ್ ಬೇಡಿಕೆ ಇಟ್ಟಿದ್ದೇ ಬೇರೆ ಎಂದು ಹೇಳಿದ್ದಾರೆ.
ಪೊಲೀಸ್ ಪಾತ್ರ ಮಾಡಬೇಕಿತ್ತು
ನವಗ್ರಹ ಸಿನಿಮಾದಲ್ಲಿ ದರ್ಶನ್ ಪೊಲೀಸ್ ಅಧಿಕಾರಿ ಭಗತ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಅಂಬಾರಿ ಕದಿಯುವ ಗುಂಪಿನ ನಾಯಕನಾಗಿ ಟೋನಿ ಪಾತ್ರವನ್ನು ಮಾಡಿರುವ ವಿನೋದ್ ಪ್ರಭಾಕರ್ ಮಾಡಬೇಕಿತ್ತು. ಕಥೆ ಕೇಳಿದ ದರ್ಶನ್, ಜೊತೆ ಜೊತೆಯಲಿ ಸಿನಿಮಾದಲ್ಲಿ ಕೂಡ ಅತಿಥಿ ಪಾತ್ರ ಮಾಡಿದ್ದೇನೆ, ಈ ಸಿನಿಮಾದಲ್ಲಿ ಕೂಡ ಅತಿಥಿ ಪಾತ್ರ ಮಾಡಲಾರೆ, ವಿಲನ್ ಪಾತ್ರವನ್ನೇ ಮಾಡುತ್ತೇನೆ ಎಂದು ಹಠ ಮಾಡಿ, ಜಗ್ಗು ಪಾತ್ರದಲ್ಲಿ ಕಾಣಿಸಿಕೊಂಡರು.
ತಂದೆಗಾಗಿ ವಿಲನ್ ಪಾತ್ರ
ದರ್ಶನ್ ತೂಗುದೀಪ ತಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರ ನೆನಪಿಗಾಗಿ ವಿಲನ್ ಪಾತ್ರವನ್ನು ಮಾಡಲು ನಿರ್ಧರಿಸಿದ್ದರು. ಖಳನ ಪಾತ್ರದಲ್ಲಿ ನಟಿಸಬೇಕು ಎನ್ನುವುದು ಅವರ ಕನಸಾಗಿತ್ತು, ಅದನ್ನು ನವಗ್ರಹ ಸಿನಿಮಾನದಲ್ಲಿ ಈಡೇರಿಸಿಕೊಂಡರು. ಪಾತ್ರದ ನಟನೆಗಾಗಿ ಉತ್ತಮ ಖಳನಟ ಎನ್ನುವ ಪ್ರಶಸ್ತಿ ಪಡೆದು ಅದನ್ನು ತಂದೆಗೆ ಅರ್ಪಿಸಬೇಕು ಎನ್ನುವುದು ದರ್ಶನ್‌ರ ಕನಸಾಗಿತ್ತು.
ಇದೀಗ ದರ್ಶನ್‌ರನ್ನು ಜಗ್ಗು ಪಾತ್ರದಲ್ಲಿ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಸಿನಿಮಾದಲ್ಲಿ ದರ್ಶನ್ ಜೊತೆಗೆ ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ನಾಗೇಂದ್ರ ಅರಸ್, ತರುಣ್ ಸುಧೀರ್, ಧರ್ಮ ಕೀರ್ತಿರಾಜ್ ನಟಿಸಿದ್ದಾರೆ.
ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು ಮರು ಬಿಡುಗಡೆಯಲ್ಲೂ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆ ಮಾಡಲಿದ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ.












Click it and Unblock the Notifications