'ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಇಲ್ಲದೇ ಸಿನಿಮಾ ಮಾಡ್ತಾರಂತೆ'
ಬೆಂಗಳೂರು, ಸೆಪ್ಟೆಂಬರ್ 18: ಲೈಂಗಿಕ ದೌರ್ಜನ್ಯ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫೈರ್ ಸಂಸ್ಥೆ ತೀವ್ರವಾಗಿ ಆಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿದ್ದು, ಈ ಸಭೆ ಫೈರ್ ಸಂಸ್ಥೆಗೆ ತೀವ್ರ ಅಸಮಾಧಾನ ತಂದಿದೆ.
ರಾಜ್ಯ ಮಹಿಳಾ ಆಯೋಗದ ನೇತೃತ್ವದಲ್ಲಿ ವಾಣಿಜ್ಯ ಮಂಡಳಿ ನಡೆಸಿದ ಸಭೆಯಲ್ಲಿ ನೂರಕ್ಕೂ ಅಧಿಕ ಕಲಾವಿದರು, ಚಿತ್ರರಂಗದ ಗಣ್ಯರು ಹಾಗೂ ಮಹಿಳಾ ಆಯೋಗದ ಅಧ್ಯಕ್ಷರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಸಮಿತಿ ರಚನೆ ಬೇಡಿಕೆ ಬಗ್ಗೆ ಚರ್ಚಿಸಲಾಗಿದ್ದು, ಸಮಿತಿ ರಚನೆಗೆ ವಾಣಿಜ್ಯ ಮಂಡಳಿ ನಿರಾಕರಿಸಿದೆ.

ಅಂದಿನ ಸಭೆ ಬಗ್ಗೆ ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿದ್ದು, 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ನಾವು ಕಮಿಟಿ ರಚನೆ ಮಾಡಲ್ಲ ಅಂತಾ ಹೇಳಿದ್ದಾರೆ. ಕಮಿಟಿಗೆ ವಿರೋಗಳು ಕೇಳಿ ಬಂದಿದೆ. ಒಂದು ವೇಳೆ ಕಮಿಟಿ ಮಾಡಿದರೆ ಅವರ ಪ್ರಕಾರ ಸಿನಿಮಾಗಳೇ ನಿಂತು ಹೋಗುತ್ತದೆಯಂತೆ. ಇಲ್ಲದೇ ಇದ್ದರೆ ಸಿನಿಮಾದಲ್ಲಿ ಯಾವ ಪಾತ್ರವನ್ನು ಮಹಿಳೆಯರು ಮಾಡಲು ಆಗುವುದಿಲ್ಲವಂತೆ. ನನ್ನ ಪ್ರಕಾರ ಇದು ಭಯ ಹುಟ್ಟಿಸುವ ಪರಿಸ್ಥಿತಿ' ಎಂದು ಹೇಳಿದರು.
'ಸಮಿತಿ ಮಾಡಿದರೆ ಚಿತ್ರರಂಗ ನಡೆಯಲ್ಲ, ಮಹಿಳೆಯರು ಇಲ್ಲದೇ ಸಿನಿಮಾ ಮಾಡಬೇಕಾಗುತ್ತದೆ ಎನ್ನುವುದು ಅವರ ವಾದ. ಆದರೆ ಒಂದು ಮಹಿಳೆ ವಿಚಾರ ಬಂದಾಗ ಬ್ಯುಸಿನೆಸ್ ನೋಡಕಾಗುತ್ತೆ. ಅಥವಾ ಮಹಿಳೆಯರು ಇಲ್ಲದೇ ಸಿನಿಮಾ ಮಾಡಬೇಕು ಎನ್ನುವ ಆಲೋಚನೆ ಬರುತ್ತದೆ. ನಾವು ನೀವು ಇಲ್ಲದೇ ಸಿನಿಮಾ ಮಾಡುತ್ತೇವೆ ಎನ್ನುವುದು ನನ್ನ ಪ್ರಕಾರ ಬೆದರಿಕೆ' ಎಂದರು.

'ವಾಣಿಜ್ಯ ಮಂಡಳಿ ಜೊತೆಗಿನ ಸಭೆಯಲ್ಲಿ ನಮಗೆ ಮಾತನಾಡಲು ಅವಕಾಶನೇ ಕೊಟ್ಟಿಲ್ಲ. ಎಲ್ಲರೂ ಒಟ್ಟಾಗಿ ಇಲ್ಲಿ ಮಹಿಳೆಯರಿಗೆ ಸಮಸ್ಯೆಯೇ ಇಲ್ಲ ಇಲ್ಲಿ. ತೊಂಬತ್ತು ವರ್ಷದಿಂದ ನಾನು ಚಿತ್ರರಂಗ ನಡೆಸುತ್ತಿದ್ದೇವೆ ಎಂದಿಗೂ ಸಮಸ್ಯೆ ಆಗಿಲ್ಲ ಎನ್ನುತ್ತಾರೆ. ಆದರೆ ಸಮಸ್ಯೆ ಬಂದಾಗ ಅವರು ಕೇಳಿಸಿಕೊಳ್ಳಲಿಲ್ಲ. ಹ್ಯಾಂಡ್ ಶೇಕ್ ಕೊಟ್ಟು ಸರಿ ಮಾಡಿಕೊಳ್ಳಿ ಎಂದಿದ್ದರು. ಇಂತಹದನೆಲ್ಲಾ ಈಗ ಒಪ್ಪಿಕೊಳ್ಳಲಾಗುವುದಿಲ್ಲ' ಎಂದರು.
'ಮೊದಲಿನ ನಟಿಯರು ಬರುತ್ತಿರಲಿಲ್ವಾ ಅಂತಾ ಕೇಳುತ್ತಾರೆ. ಖಂಡಿತಾ ಬರುತ್ತದ್ದರು ಆದರೆ ಅವರಿಗೆ ಆದ ಶೋಷಣೆ ಬಗ್ಗೆ ಹೇಳಿಕೊಳ್ಳಲು ಅವಕಾಶ ಸಿಗುತ್ತಿರಲಿಲ್ಲ. ಜೊತೆಗೆ ಧೈರ್ಯ ಇರುತ್ತಿರಲಿಲ್ಲ. ಈಗ ಮಹಿಳೆಯರು ಮಾತನಾಡಬೇಕು ಧೈರ್ಯವಾಗಿ ನಿಂತುಕೊಳ್ಳಬೇಕು. ಸಮಸ್ಯೆಗಳಾದಾಗ ಮುಂದೆ ಬಂದು ಹೇಳಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ' ಎಂದು ಹೇಳಿದರು.












Click it and Unblock the Notifications