ನಟಿ ರಮ್ಯಾ ಮತ್ತೆ ರಾಜಕೀಯಕ್ಕೆ ವಾಪಸ್? ಬೆಂಗಳೂರಿನ ಆ ಕ್ಷೇತ್ರದಿಂದ ಸ್ಪರ್ಧೆ?
ಸ್ಯಾಂಡಲ್‌ವುಡ್‌ನ ಮೋಹಕತಾರೆಯಾಗಿ ಮಿಂಚಿದ್ದ ನಟಿ ರಮ್ಯಾ ಅವರು ಬಳಿಕ ರಾಜಕೀಯಕ್ಕೆ ಧುಮುಕಿದ್ದರು. ಕಾಂಗ್ರೆಸ್‌ನಿಂದ ಗೆದ್ದು ಸಂಸದೆಯಾಗಿಯೂ ಮಿಂಚಿದ್ದರು. ಈ ಕಾರಣಕ್ಕೆ ಸಿನಿಮಾಗಳಿಂದ ಅವರು ದೂರವಾಗಿದ್ದರು. ಹಲವು ವರ್ಷಗಳ ಕಾಲ ರಾಜಕಾರಣದಲ್ಲೇ ಮುಂದುವರಿದು, ಅಲ್ಲಿಂದಲೂ ಬ್ರೇಕ್ ಪಡೆದಿದ್ದರು. ಸದ್ಯ ಅವರು ಸಿನಿಮಾ ಹಾಗೂ ರಾಜಕಾರಣ ಎರಡರಲ್ಲೂ ಸಕ್ರಿಯರಾಗಿರಲಿಲ್ಲ. ಒಳ್ಳೆ ಕಥೆ ಸಿಕ್ಕರೆ ಖಂಡಿತ ಸಿನಿಮಾ ಮಾಡ್ತೀನಿ ಎಂದು ತಮ್ಮ ಕಂಬ್ಯಾಕ್ ಬಗ್ಗೆ ಹೇಳುತ್ತಲೇ ಇದ್ದಾರೆ. ಇತ್ತ ರಮ್ಯಾ ಮತ್ತೆ ರಾಜಕೀಯಕ್ಕೆ ಬರಲು ಸಜ್ಜಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪುನೀತ್ ರಾಜ್‌ಕುಮಾರ್ ನಟನೆಯ "ಅಭಿ" ಸಿನಿಮಾ ಮೂಲಕ ರಮ್ಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಸದ್ದು ಮಾಡಿದರು. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ನಟಿಯಾದರು. ಇತ್ತೀಚೆಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ರಮ್ಯಾ ಮತ್ತೆ ತೆರೆ ಮೇಲೆ ನಾಯಕಿಯಾಗಿ ಮಿಂಚಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಆದರೆ ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡ್ತೀನಿ ಎಂದು ರಮ್ಯಾ ದಿನಗಳನ್ನು ದೂಡುತ್ತಿದ್ದಾರೆ.

ಆದರೆ ರಮ್ಯಾ ಅವರು ಮತ್ತೆ ಕರ್ನಾಟಕ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ರಮ್ಯಾ ಅವರು ಇತ್ತೀಚೆಗೆ ಕೆಲ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರಿಂದ ಅವರು ಮತ್ತೆ ಸಿನಿಮಾರಂಗಕ್ಕೆ ವಾಪಸ್ ಆಗುತ್ತಿದ್ದಾರೆ ಎಂದು ಹೇಳಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲೂ ರಮ್ಯಾ ಫುಲ್ ಆಕ್ಟೀವ್ ಆಗಿದ್ದರು. ಇತ್ತೀಚೆಗೆ ದರ್ಶನ್ ವಿಚಾರಲ್ಲೂ ಅವರು ತಮ್ಮ ಹೇಳಿಕೆಗಳಿಂದ ಸುದ್ದಿಯಾಗಿದ್ದಾರೆ. ಈಗ ದಿಢೀರ್ ಅವರು ಮತ್ತೆ ರಾಜಕಾರಣಕ್ಕೆ ವಾಪಸ್ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇತ್ತೀಚೆಗೆ ರಮ್ಯಾ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಇದಕ್ಕೆ ಪುಷ್ಟಿ ನೀಡಿದ್ದಾರೆ.
ದಿಢೀರ್ ಈ ಚರ್ಚೆ ಏಕೆ?
ರಮ್ಯಾ ಅವರು ಕಾಂಗ್ರೆಸ್ ಪಕ್ಷದಿಂದಲೇ ಮಂಡ್ಯ ಸಂಸದೆಯಾಗಿ ಪಾರ್ಲಿಮೆಂಟ್‌ಗೆ ಹೋಗಿದ್ದರು. ಆದರೆ ಇತ್ತೀಚೆಗೆ ರಾಜಕೀಯದಿಂದಲೂ ಬ್ರೇಕ್ ಪಡೆದಿದ್ದ ಅವರು ದಿಢೀರ್ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಹೆಬ್ಬಾಳ ಜಂಕ್ಷನ್‌ನಲ್ಲಿ ಕೆ.ಆರ್.ಪುರಂ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಂಚರಿಸಲು ನಿರ್ಮಿಸಿರುವ ಮೇಲ್ಸೇತುವೆಯನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಕೂಡ ಉಪಸ್ಥಿತರಿದ್ದರು.

ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ರಮ್ಯಾ ಅವರು ಇದೀಗ ಕಾಂಗ್ರೆಸ್ ಸರ್ಕಾರ ಹಮ್ಮಿಕೊಂಡಿದ್ದ ಫ್ಲೈಓವರ್ ಉದ್ಘಾಟನೆ ಸಮಾರಂಭದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ರಮ್ಯಾ ಅವರು ಮತ್ತೆ ರಾಜಕಾರಣದಲ್ಲಿ ಸಕ್ರಿಯರಾಗಲು ಆಸಕ್ತಿ ತೋರಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಇದೇ ಕಾರಣಕ್ಕೆ ಅವರು ಕಾಂಗ್ರೆಸ್‌ನಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಿಂದ ಸ್ಪರ್ಧೆ?
ರಮ್ಯಾ 2012ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಸೇರಿದರು. 2013ರಲ್ಲಿ ಮಂಡ್ಯ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆಲ್ಲುವ ಕಾಂಗ್ರೆಸ್ ಸಂಸದೆಯಾದರು. ನಂತರ 2014ರ ಚುನಾವಣೆಯಲ್ಲಿ ಮತ್ತೆ ಮಂಡ್ಯದಿಂದ ಸ್ಪರ್ಧಿಸಿ ಸೋತರು. ನಂತರ ಅವರು ಕಾಂಗ್ರೆಸ್‌ನಲ್ಲೇ ಮುಂದುವರಿದರು. ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸ್ಥಾನ ಕೂಡ ಸಿಕ್ಕಿತು. ಆದರೆ ಆ ಸ್ಥಾನದಿಂದಲೂ ರಮ್ಯಾ ಕೆಳಗಿಳಿದು ಬ್ರೇಕ್ ಪಡೆದಿದ್ದರು. ಈಗ ಮತ್ತೆ ಕಾಂಗ್ರೆಸ್‌ನಿಂದಲೇ ತಮ್ಮ ರಾಜಕೀಯ ಜೀವನ ಮುಂದುವರಿಸಲಿದ್ದಾರೆ. ಮುಂದೆ ಬೆಂಗಳೂರಿನ ಒಂದು ಪ್ರಮುಖ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications