Rashmika Mandanna: ಪೊಲೀಸ್ ವಿಚಾರಣೆಗೆ ಹಾಜರಾದ ನಟಿ ರಶ್ಮಿಕಾ ಮಂದಣ್ಣ: ಕಾರಣವೇನು?
ದೆಹಲಿ, ಏಪ್ರಿಲ್ 30: ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಪೊಲೀಸ್ ವಿಚಾರಣೆಗೆ ಹಾಜರಾಗಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ಹಾಜರಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಹೊರ ಬಿದ್ದಿದ್ದು, ಇದರಿಂದ ನಟಿಯ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ದೆಹಲಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ಡೀಪ್ ಫೇಕ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ರಶ್ಮಿಕಾ ಪೊಲೀಸರಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ಪ್ರಕರಣವನ್ನು ದೆಹಲಿ ಪೊಲೀಸರು ಗಂಭೀರವಾಗಿ ಪರಿಗಣಿಸಿ, ವಿಡಿಯೋ ಎಡಿಟ್ ಮಾಡಿದವನು, ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದವನನ್ನು ಸೇರಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಈ ಮೊದಲೇ ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಮುಂದಿನ ಭಾಗವಾಗಿ ದೆಹಲಿ ಪೊಲೀಸ್ ವಿಶೇಷ ಘಟಕದ ಐಎಫ್ಎಸ್ಓ ತಂಡವು ರಶ್ಮಿಕಾ ಮಂದಣ್ಣರ ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದೆ ಎನ್ನಲಾಗಿದೆ.
ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವೈರಲ್
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮುಖವನ್ನು ಬದಲಾಯಿಸಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ತಯಾರಿಸಿ ವಿಡಿಯೋ ಹರಿಬಿಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೇ ಬಾಲಿವುಡ್ ಚಿತ್ರರಂಗ ಸೇರಿದಂತೆ ನಟ ನಟಿಯರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಆರೋಪಿಗಳನ್ನು ಬಂಧಿಸುವಂತೆ ನೇರವಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಇ. ನವೀನ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ರಶ್ಮಿಕಾ ಮಂದಣ್ಣ ಸೇರಿ ದಕ್ಷಿಣ ಭಾರತದ ಇಬ್ಬರು ನಟಿಯರ ಸೆಲೆಬ್ರಿಟಿ ಪೇಜ್ಗಳನ್ನು ನಡೆಸುತ್ತಿದ್ದ. ರಶ್ಮಿಕಾ ಅವರ ಡೀಪ್ ಫೇಕ್ ವಿಡಿಯೋ ಮೂಲಕ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಡೀಪ್‌ಫೇಕ್ ವಿಡಿಯೋಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್ ಆಗಿದ್ದು, ಅಶ್ಲೀಲ ಡೀಪ್‌ಫೇಕ್ ವಿಡಿಯೋಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications