Darshan: ದರ್ಶನ್‌ಗೆ ಸಂಕಷ್ಟ ತಂದ ಫೊಟೊ, ವಿಡಿಯೋ; ಜಾಮೀನು ಸಿಗೋದು ಮತ್ತಷ್ಟು ಕಷ್ಟ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಕಳೆದ ಎರಡು ತಿಂಗಳಿನಿಂದ ಬಂಧಿಯಾಗಿರುವ ನಟ ದರ್ಶನ್ ರ ಜೈಲು ವಾಸದ ಫೊಟೊ, ವಿಡಿಯೋ ಭಾರಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ಕೊಲೆ ಆರೋಪದಲ್ಲಿ ಜೈಲು ಸೇರಿದ ಬಳಿಕ ಊಟ ಮಾಡದೆ ಚಿಂತೆಯಲ್ಲಿದ್ದಾರೆ, ಅವರ ತೂಕ ಕಡಿಮೆಯಾಗಿದೆ, ತಪ್ಪು ಮಾಡಿದ್ದಕ್ಕೆ ಪಶ್ಚಾತಾಪ ಪಡುತ್ತಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು, ಆದರೆ ದರ್ಶನ್ ನಿಜಕ್ಕೂ ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿದ್ದಾರ ಎನ್ನುವ ಪ್ರಶ್ನೆ ಎದುರಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆದರೆ ಇದೀಗ ವೈರಲ್ ಆಗಿರುವ ಫೋಟೊ ಮತ್ತು ವಿಡಿಯೋ ದರ್ಶನ್‌ಗೆ ಹೊಸ ಸಂಕಷ್ಟ ತಂದುಕೊಟ್ಟಿದೆ.

ಜಾಮೀನು ಸಿಗೋದು ಕಷ್ಟ
ಪರಪ್ಪನ ಅಗ್ರಹಾರದಲ್ಲಿ ಸೌಲಭ್ಯಗಳನ್ನು ಪಡೆದುಕೊಂಡಿರುವುದು ಇದೀಗ ದರ್ಶನ್‌ಗೆ ಜಾಮೀನು ಸಿಗುವ ವಿಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪೊಲೀಸರು ದರ್ಶನ್‌ರ ಪ್ರಭಾವದ ಬಗ್ಗೆ ಇದನ್ನೇ ಸಾಕ್ಷಿಯಾಗಿಟ್ಟುಕೊಂಡು ನ್ಯಾಯಾಲಯದಲ್ಲಿ ವಾದಿಸುವ ಸಾಧ್ಯತೆ ಇದೆ.
ದರ್ಶನ್ ಜೈಲಿನ ಒಳಗಡೆ ಇದ್ದುಕೊಂಡೇ ಸಿಗರೇಟ್, ಟೀ ಪಡೆದುಕೊಳ್ಳುವಷ್ಟು ಪ್ರಭಾವ ಹೊಂದಿದ್ದು, ಹೊರಗಡೆ ಬಂದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಮನವರಿಗೆ ಮಾಡಿಕೊಡುವ ಸಾಧ್ಯತೆ ಇದ್ದು, ಇದನ್ನೇ ಮುಂದಿಟ್ಟುಕೊಂಡು ದರ್ಶನ್‌ಗೆ ಜಾಮೀನು ಮಂಜೂರು ಮಾಡದಂತೆ ವಾದಿಸುವ ಸಾಧ್ಯತೆ ಇದೆ.
ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 2ನೇ ವಾರದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಆದರೆ ದರ್ಶನ್ ಇದೀಗ ತಾವೇ ಮಾಡಿಕೊಂಡಿರುವ ಎಡವಟ್ಟಿಗೆ ಬೆಲೆ ತರುವ ಸಾಧ್ಯತೆ ಇದೆ. ದರ್ಶನ್‌ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಕೂಡ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ ಕೂಡ ಈ ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.












Click it and Unblock the Notifications