Darshan Thoogudeepa: ಇಂದೇ ದರ್ಶನ್‌ಗೆ ಜಾಮೀನು ಫಿಕ್ಸ್! ಡಿ-ಬಾಸ್ ಅಭಿಮಾನಿಗಳೇ ರೆಡಿನಾ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಮಧ್ಯಂತರ ಜಾಮೀನಿನ ಮೇಲೆ ಹೊರಬಂದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಇಂದು (ನವೆಂಬರ್ 28) ನಡೆಸಲಿದೆ. ನವೆಂಬರ್ 26 ದರ್ಶನ್ ಪರ ವಕೀಲ ಸಿವಿ ನಾಗೇಶ್ ಪ್ರಬಲವಾದ ವಾದವನ್ನು ಮಂಡಿಸಿದರು. ಸಿವಿ ನಾಗೇಶ್ ಅವರ ಖಡಕ್ ವಾದಕ್ಕೆ ಕೋರ್ಟ್ ಇಂದು ದರ್ಶನ್‌ಗೆ ಬಿಡುಗಡೆ ಭಾಗ್ಯ ನೀಡುವ ಲಕ್ಷಣಗಳು ಸ್ಪಷ್ಟವಾಗಿವೆ.
ದರ್ಶನ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಸುಖ ಸುಮ್ಮನೆ ಅವರನ್ನು ಸಿಕ್ಕಿ ಹಾಕಿಸಲಾಗಿದೆ. ತನಿಖೆಯನ್ನು ಹಳ್ಳ ಹಿಡಿಸಿದ್ದಾರೆ ಎನ್ನುವುದು ಸಿವಿ ನಾಗೇಶ್ ಅವರ ವಾದದ ತಿರುಳಾಗಿತ್ತು. ಎಲ್ಲಾ ವಾದ ವಿವಾದವನ್ನು ಆಲಿಸಿದ ನಂತರ ಹೈಕೋರ್ಟ್ ತೀರ್ಪನ್ನು ಇಂದು ನವೆಂಬರ್ 28ಕ್ಕೆ ಕಾಯ್ದಿರಿಸಿತ್ತು. ಹೀಗಾಗಿ ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಜೈಲಿನಿಂದ ಸಂಪೂರ್ಣವಾಗಿ ಬಿಡುಗಡೆ ಭಾಗ್ಯ ಸಿಗುವುದು ಪಕ್ಕಾ ಎನ್ನುತ್ತಿದ್ದಾರೆ ದರ್ಶನ್ ಆಪ್ತರು.

ಇಂದು ದರ್ಶನ್ ಜಾಮೀನು ಭವಿಷ್ಯ ನಿರ್ಧಾರ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮೇಲಿನ ಆರೋಪದಲ್ಲಿ ಹಲವಾರು ಲೋಪದೋಷಗಳಿವೆ ಎಂದು ವಕೀಲರಾದ ಸಿವಿ ನಾಗೇಶ್ ಪ್ರಬಲ ವಾದವನ್ನು ಮಂಡಿಸಿದ್ದಾರೆ. ದರ್ಶನ್ ಅವರಿಗಾಗಲಿ ಅಥವಾ ಅವರ ತಂಡದ ಸದಸ್ಯರಿಗಾಗಿ ಕೊಲೆ ಮಾಡುವ ಉದ್ದೇಶ ಇರುವ ಬಗ್ಗೆ ಸಾಕ್ಷಿಗಳು ಇಲ್ಲ. ದರ್ಶನ್ ಹಾಗೂ ಪವಿತ್ರಾ ಗೌಡ ಜೊತೆಗೆ ಅವರ ತಂಡದವರೊಂದಿಗೆ ಎಲ್ಲೂ ಕೂಡ ಕೊಲೆ ಮಾಡುವ ಬಗ್ಗೆ ಯಾರೂ ಕೂಡ ಮಾತನಾಡಿರುವ ಸಾಕ್ಷಿಗಳಿಲ್ಲ. ಹೀಗಿರುವಾಗ ಕೊಲೆ ಸಂಚು ನಡೆದಿಲ್ಲ ಎಂದು ನವೆಂಬರ್ 26ರಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ.
ಒಂದು ವೇಳೆ ದರ್ಶನ್‌ಗೆ ಕೊಲೆ ಮಾಡುವ ಉದ್ದೇಶ ಇದ್ದಿದ್ದರೆ ಬೆಂಗಳೂರಿಗೆ ರೇಣುಕಾಸ್ವಾಮಿಯನ್ನು ಕರೆತರುವ ಅಗತ್ಯವೇ ಇರಲಿಲ್ಲ. ವಿಶೇಷವಾಗಿ ಸಿಸಿಟಿವಿ ಇರುವ ಶೆಡ್ಡಿನಲ್ಲಿ ಅವರು ಕೊಲೆ ಮಾಡುವ ಸಂಚು ರೂಪಿಸಲು ಅವರೇನು ದಡ್ಡರೇ. ಕೊಲೆ ಮಾಡುವ ಉದ್ದೇಶ ಇರುವವರು ಸಾಕ್ಷಿಗಳು ಇಲ್ಲದಂತೆ ನೋಡಿಕೊಳ್ಳುತ್ತಾರೆ. ಆದರೆ ಶೆಡ್ಡಿನಲ್ಲಿ ಸಿಸಿಟಿವಿ ಕ್ಯಾಮರಾ ಇರುವುದು ಗೊತ್ತಾಗಿಯೋ ಸಹ ಅವರು ರೇಣುಕಾಸ್ವಾಮಿಯನ್ನು ಕರೆದಂದಿದ್ದಾರೆ ಅಂದರೆ ಅವರಿಗೆ ಕೊಲೆ ಮಾಡುವ ಉದ್ದೇಶ ಇಲ್ಲದೇ ಇರುವುದು ಸ್ಪಷ್ಟವಾಗುತ್ತದೆ.
ಅಲ್ಲದೆ ರೇಣುಕಾಸ್ವಾಮಿ ಮೇಲೆ ಎಲ್ಲರೂ ಕೈ ಮಾಡಿದ್ದಾರೆ. ಯಾರು ಕೈ ಮಾಡಿದಾಗ ಆತ ಸತ್ತ ಅನ್ನೋದರ ಸ್ಪಷ್ಟತೆ ಇಲ್ಲ. ಹೀಗಾಗಿ ದರ್ಶನ್ ರೇಣುಕಾಸ್ವಾಮಿಗೆ ಬುದ್ಧಿ ಹೇಳಿ ಹೊಡೆಯಲು ಹೋಗಿದ್ದರೇ ವಿನ: ಸಾಯಿಸಲು ಅಲ್ಲಿಗೆ ಹೋಗಿರಲಿಲ್ಲ. ಎಲ್ಲರೂ ಹೊಡೆಯುವಾಗ ಆತ ಮೃತಪಟ್ಟಿದ್ದಾನೆ. ಇದರಿಂದ ದರ್ಶನ್ ಅವರಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಅಂದ್ಮೆಲೆ ಆತ ಕೊಲೆ ಅಪರಾಧಿ ಆಗಲು ಹೇಗೆ ಸಾಧ್ಯ? ಎಂದು ಸಿವಿ ನಾಗೇಶ್ ಖಡಕ್ ಆಗಿ ವಾದಿಸಿದ್ದಾರೆ.
ದರ್ಶನ್‌ಗೆ ಜಾಮೀನು ಸಿಗುವುದು ಪಕ್ಕಾ?
ಸಿವಿ ನಾಗೇಶ್ ಅವರ ವಾದದ ಬಳಿಕ ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ನೀಡುವ ಸಾಧ್ಯತೆ ಇದೆ. ಅಲ್ಲದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದೆ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕೂಡ ಆರೋಪಿಸಿದ್ದಾರೆ. ಎಸಿಪಿ ಚಂದನ್ ತಮ್ಮ ಪೊಲೀಸರನ್ನು ಕಾಪಾಡಲು ದರ್ಶನ್ ವಿರುದ್ಧ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪಗಳನ್ನು ಮಾಡಿದ್ದು ಪ್ರಕರಣ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳುತ್ತಿದೆ.
ದರ್ಶನ್ ಯಾರೂ ಮಾಡಬಾರದ ತಪ್ಪೇನು ಮಾಡಿಲ್ಲ- ಸ್ನೇಹಮಯಿ ಕೃಷ್ಣ
ರೇಣುಕಾಸ್ವಾಮಿಗೆ ಎಲ್ಲರೂ ಹೊಡೆದಿದ್ದಾರೆ. ಹೀಗಾಗಿ ಯಾರು ಹೊಡೆತಕ್ಕೆ ರೇಣುಕಾಸ್ವಾಮಿ ಸತ್ತ ಅನ್ನೋದು ಸ್ಪಷ್ಟವಾಗಿಲ್ಲ. ದೊಂಬಿಯಲ್ಲಿ ಆದ ಸಾವಿಗೂ ಒಬ್ಬ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಮಾಡಿದ ಕೊಲೆಗೂ ತುಂಬಾ ವ್ಯತ್ಯಾಸ ಇದೆ. ನಾನು ದರ್ಶನ್ ತಪ್ಪ ಮಾಡಿಲ್ಲ ಅಂತ ಎಲ್ಲೂ ಕೂಡ ಹೇಳ್ತಾಯಿಲ್ಲ. ಆದರೆ ಅವರಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಹೀಗಾಗಿ ಇಲ್ಲಿ ದರ್ಶನ್ ಹಾಗೂ ಸಂಗಡಿಗರು ಮಾಡುವ ಕೃತ್ಯವೇ ಬೇರೆ ಎಸಿಪಿ ಚಂದನ್ ಮಾಡುವ ಕೃತ್ಯವೇ ಬೇರೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಕೃತ್ಯಕ್ಕಿಂತ ಕೃತ್ಯಕ್ಕೆ ಪ್ರಚೋದನೆ ನೀಡುವುದು ದೊಡ್ಡ ಅಪರಾಧ
ಇಲ್ಲಿ ರೇಣುಕಾಸ್ವಾಮಿ ಮಾಡಿದ ಕೆಲಸ ಕೃತ್ಯಕ್ಕೆ ಪ್ರಚೋದನೆ ನೀಡಿದೆ. ಆತ ಕಳುಹಿಸಿರುವ ಫೋಟೋಗಳು ಸ್ಪಷ್ಟವಾಗಿ ಹೇಳುತ್ತವೆ ಕೊಲೆ ಪ್ರಚೋದನೆ ನೀಡಿರುವುದು ಯಾರು ಎಂದು, ಕೋರ್ಟ್ ಕೂಡ ಹೇಳುತ್ತದೆ ಮನುಷ್ಯನ ಸಹಜ ಗುಣಗಳನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು. ಬೇರೆ ಹೆಣ್ಣು ಮಕ್ಕಳಿಗೂ ಆತ ಇಂತಹ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಇದನ್ನು ಅವರು ಹೆಚ್ಚಾಗಿ ಪರಿಗಣಿಸಬೇಕು. ಅದನ್ನು ಬಿಟ್ಟು ಇಲ್ಲ ಸಲ್ಲದ ಆರೋಪಗಳನ್ನ ದರ್ಶನ್ ಮೇಲೆ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ.
ಹೀಗಾಗಿ ದರ್ಶನ್ ಪರ ಮಾತನಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಕೋರ್ಟ್‌ಗೆ ಒದಗಿಸುವಲ್ಲಿ ವಕೀಲರು ಕಾರ್ಯ ಪ್ರವೃತ್ತರಾಗಿದ್ದಾರೆ. ಇರಿಂದಾಗಿ ದರ್ಶನ್ ಅಪರಾಧಿ ಅಲ್ಲ ಎಂದು ಸಾಬೀತು ಪಡಿಸಲು ಸಾಕ್ಷಿಗಳು ಬಲವಾಗಿದ್ದರೆ ಇಂದು ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ನೀಡುವುದು ಪಕ್ಕಾ. ಹೀಗಾಗಿ ದರ್ಶನ್ ಅಭಿಮಾನಿಗಳು, ಆಪ್ತರು, ಸ್ನೇಹಿತರು, ಚಿತ್ರರಂಗ ಈ ಸಮಯಕ್ಕಾಗಿ ಎದುರು ನೋಡುತ್ತಿದೆ. ಒಂದು ವೇಳೆ ಇಂದು ದರ್ಶನ್‌ಗೆ ಜಾಮೀನು ಸಿಕ್ಕರೆ ಅಭಿಮಾನಿಗಳಿಗೆ ಈ ದಿನ ದೊಡ್ಡ ಆಚರಣೆಯಾಗೋದರಲ್ಲಿ ಅನುಮಾನವೇ ಇಲ್ಲ.












Click it and Unblock the Notifications