ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಕೇಸ್: ಜೈಲಾಧಿಕಾರಿಗಳ ವಿಚಾರಣೆಗೆ ಅನುಮತಿ- ದಾಸನಿಗೆ ಮತ್ತೊಂದು ಸಂಕಷ್ಟ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸುವ ಸಮಯದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ಜೈಲಾಧಿಕಾರಿಗಳ ವಿಚಾರಣೆಗೆ ಪರ್ಮಿಟ್ ಸಿಕ್ಕಿದೆ. ಹೀಗಾಗಿ ದಾಸನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಪ್ರಸ್ತುತ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಕೇಸ್‌ಗಳು ದಾಖಲಾಗಿದ್ದವು. ಆರು ತಿಂಗಳ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಾಧಿಕಾರಿಗಳ ವಿಚಾರಣೆಗೆ ಅನುಮತಿ ಸಿಕ್ಕಿದೆ.

ಆರು ತಿಂಗಳ ಬಳಿಕ ಪ್ರಾಸಿಕ್ಯೂಷನ್‌ಗೆ ಗೃಹ ಇಲಾಖೆ ಅನುಮತಿ ನೀಡಿದೆ. ಹೀಗಾಗಿ ಕಳೆದೊಂದು ವಾರದಿಂದ ಜೈಲು ಸಿಬ್ಬಂದಿಯ ವಿಚಾರಣೆ ಮಾಡಲಾಗುತ್ತಿದ್ದು ಪಿಸಿ ಆಕ್ಟ್ ಅಡಿಯಲ್ಲಿ ತನಿಖೆ ಮಾಡಿ ಜೈಲು ಸಿಬ್ಬಂದಿ ಹೇಳಿಕೆ ದಾಖಲು ಮಾಡಲಾಗುತ್ತಿದೆ.
ರಾಜಾತಿಥ್ಯ: ಮೂರು ಕೇಸ್ ದಾಖಲು
ಹೌದು ದರ್ಶನ್‌ಗೆ ರಾಜಾತಿಥ್ಯ ನೀಡಿದ ಸಂಬಂಧ ಮೂರು ಕೇಸ್‌ಗಳು ದಾಖಲಾಗಿದ್ದವು. ಮೊದಲನೆಯದ್ದು ದರ್ಶನ್ ಕೈಗೆ ಸಿಗರೇಟ್ ಬಂದಿದ್ದು ಹೇಗೆ? ಎರಡನೇ ಪ್ರಕರಣದಲ್ಲಿ ಜೈಲಿನಲ್ಲಿ ಮೊಬೈಲ್ ಬಳಕೆ, ಯಾರ ಕೈವಾಡ? ಅಧಿಕಾರಿಗಳ ಪಾತ್ರ ಕಳ್ಳಾಟದ ಬಗ್ಗೆ ಮೂರನೇಯ ಪ್ರಕರಣ ದಾಖಲಿಸಲಾಗಿತ್ತು.
ಇದೀಗ ಈ ಮೂರು ಪ್ರಕರಣಗಳನ್ನು ಪಿಸಿ ಆಕ್ಟ್ ಅಡಿಯಲ್ಲಿ ತನಿಖೆ ಮಾಡಲಾಗುತ್ತಿದೆ. ಮೂರು ಪ್ರಕರಣದಲ್ಲಿ ಅಧಿಕಾರಿಗಳ ಕೈವಾಡದ ಬಗ್ಗೆ ಸಾಕ್ಷಿಗಳು ಲಭ್ಯವಾಗಿವೆ. ಹೀಗಾಗಿ ದರ್ಶನ್‌ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.

ವಿಲ್ಸನ್ ಗಾರ್ಡನ್ ನಾಗಾ ಚೇರ್ ಮೇಲೆ ಕುಳಿತು ಕೈಯಲ್ಲಿ ಸಿಗರೇಟ್ ಅನ್ನು ಹಿಡಿದು ಕಾಫಿ ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ಈ ಪ್ರಕರಣದಲ್ಲಿ ಜೈಲು ಅಧಿಕಾರಿಗಳು ಸೇರಿದಂತೆ ಯಾರು ಸಿಗರೇಟ್ ನೀಡಿದ್ದರು ಅವರ ವಿರುದ್ಧ ಕೇಸ್ ದಾಖಲಾಗಿತ್ತು.
ಮೂರು ಜನ ಪೊಲೀಸ್ ತಂಡ ಈ ಪ್ರಕರಣವನ್ನು ತನಿಖೆ ಮಾಡಿ ರಿಪೋರ್ಟ್ ಅನ್ನು ಸಲ್ಲಿಸಿತ್ತು. ಆದರೆ ಜೈಲು ಸಿಬ್ಬಂದಿ ವಿಚಾರಣೆಗೆ ಪೊಲೀಸರಿಗೆ ಅನುಮತಿ ಇಲ್ಲದ ಕಾರಣಕ್ಕೆ ಗೃಹ ಇಲಾಖೆಗೆ ಪೊಲೀಸರು ಅನುಮತಿ ಕೋರಿದ್ದರು. ಇದಕ್ಕೆ ಅನುಮತಿ ಮೇರೆಗೆ ಕಳೆದ ಒಂದು ವಾರದಿಂದ ಸಿಬ್ಬಂದಿಗಳ ತನಿಖೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ರೌಡಿ ಶೀಟರ್ ನಾಗ ಹಾಗೂ ಇನ್ನಿತರ ಖೈದಿಗಳನ್ನೂ ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಜೈಲಿನಲ್ಲಿ ದರ್ಶನ್ ಅವರಿಗೆ ಯಾವ ರೀತಿಯಾಗಿ ಸೌಲಭ್ಯಗಳು ಸಿಗುತ್ತಿದ್ದವು ಅನ್ನೋದರ ಬಗ್ಗೆ ಈಗ ತನಿಖೆ ನಡೆಯುತ್ತಿವೆ. ಈ ಘಟನೆಯ ಬಳಿಕ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಇದರಿಂದ ಯಾರಿಗೆಲ್ಲಾ ಸಂಕಷ್ಟ ಎದುರಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications