ದರ್ಶನ್ ಆನೆ ಇದ್ದಂತೆ; ಇದು ಉದ್ದೇಶಪೂರ್ವಕ ಕೃತ್ಯವಲ್ಲ! ರಾಮ್‌ಗೋಪಾಲ್ ವರ್ಮಾ
ದರ್ಶನ್ ಬಂಧನ ಪ್ರಕರಣ ಇದೀಗ ಸ್ಯಾಂಡಲ್‌ವುಡ್‌ನ ಆಚೆಗೂ ಸದ್ದು ಮಾಡುತ್ತಿದೆ. ತೆಲುಗು, ಹಿಂದಿ ಸಿನಿಮಾಗಳ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ದರ್ಶನ್ ಪ್ರಕರಣದ ಬಗ್ಗೆ ಸಾಕಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಟ್ರೋಲ್‌ಗಳ ಬಗ್ಗೆ ಸೆಲೆಬ್ರಿಟಿಗಳು ಹೆಚ್ಚಾಗಿ ತಲೆ ಕೆಡಿಸಿಕೊಳ್ಳಬಾರದು ಎಂದು ಬುದ್ದಿವಾದ ಹೇಳಿದ್ದಾರೆ.

ದರ್ಶನ್ ಒಂದು ಸಿನಿಮಾಗೆ 10 ಕೋಟಿಗಿಂತ ಹೆಚ್ಚು ಹಣ ಪಡೆಯುತ್ತಾರೆ ಎಂದರೆ, ಅವರು ಎಂತಹ ಸೂಪರ್ ಸ್ಟಾರ್, ಎಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಆದರೆ, ಅಂತಹವರು ಯಾರೋ ಒಬ್ಬ ಟ್ರೋಲ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಬಾರದಿತ್ತು ಎಂದಿದ್ದಾರೆ.
ಇದೊಂದು ಆಕಸ್ಮಿಕ ಕೃತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ ಒಂದು ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಗೊತ್ತಾಗುತ್ತದೆ. ಕೊಲೆ ಮಾಡುವ ಉದ್ದೇಶ ದರ್ಶನ್‌ಗೆ ಇರಲಿಲ್ಲ, ಅದು ಕೋಪದಲ್ಲಿ ಏನೋ ಮಾಡಲು ಹೋಗಿ ಅನಾಹುತ ಆಗಿದೆ. ಪವಿತ್ರಾ ಗೌಡ ಈ ಟ್ರೋಲರ್ ಗಳಿಗೆ ಪ್ರತಿಕ್ರಿಯೆ ಕೊಡದೇ ಇದ್ದರೆ ಈ ಘಟನೆ ತಪ್ಪಿಸಬಹುದಿತ್ತು ಎಂದಿದ್ದಾರೆ.
ಟ್ರೋಲರ್ ಗಳಿಗೆ ಬೇಕಾಗಿರುವುದೇ ಇದು, ಕೆಲಸವಿಲ್ಲದವರು ಈ ರೀತಿ ಮಾಡುತ್ತಾರೆ. ದರ್ಶನ್ ಅಂತಹ ದೊಡ್ಡನಟ ಇಂತಹವರಿಗೆಲ್ಲ ಅವರು ಪ್ರತಿಕ್ರಿಯೆ ನೀಡಲೇಬಾರದು, ಈಗ ಅವರೇ ಸಮಸ್ಯೆಯಲ್ಲಿ ಸಿಲುಕಿಕೊಂಡರು ಎಂದಿದ್ದಾರೆ.
ದರ್ಶನ್ ಆನೆ ಇದ್ದಂತೆ
ದರ್ಶನ್ ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್, ಆತ ಆನೆ ಇದ್ದಂತೆ ಟ್ರೋಲರ್ ಗಳು ನಾಯಿಗಳಿದ್ದಂತೆ, ನಾಯಿಗಳು ಬೊಗಳುವುದಕ್ಕೆ ಆನೆ ಪ್ರತಿಕ್ರಿಯೆ ನೀಡಬಾರದು. ಒಂದು ವೇಳೆ ನಾಯಿಗಳ ಜೊತೆ ಆನೆ ಜಗಳಕ್ಕಿಳಿದರೆ ಆನೆಯ ಮರ್ಯಾದೆಯೇ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಅಂತಹ ಟ್ರೋಲ್ ಮಾಡುವವರಿಗೆ ಅದೊಂದು ಕೆಲಸ ಅಷ್ಟೆ. ಅದಕ್ಕೆ ಪ್ರತಿಕ್ರಿಯೆ ನೀಡಿದರೆ ಅವರಿಗೆ ಅನುಕೂಲವಾಗುತ್ತದೆ. ಅಂತಹ ಟ್ರೋಲರ್ ಗಳನ್ನು ನಾವು ನಿರ್ಲಕ್ಷಿಸಬೇಕು, ಆದರೆ ದರ್ಶನ್ ಕೋಪದಲ್ಲಿ ತೆಗೆದುಕೊಂಡ ತೀರ್ಮಾನ ಈ ಸ್ಥಿತಿಗೆ ಕಾರಣ ಎಂದರು.
ಕೆಲವು ಅಭಿಮಾನಿಗಳು ಚೇಲಾಗಳಿದ್ದಂತೆ ಇರುತ್ತಾರೆ. ಅವರು ತಮ್ಮ ನೆಚ್ಚಿನ ನಟನಿಗಾಗಿ ಏನು ಮಾಡಲು ಬೇಕಾದರೂ ಸಿದ್ದರಿರುತ್ತಾರೆ ಅಂತಹವರೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಜೊತೆಯಾಗಿರುವುದು ಎಂದರು.
ಸೆಲೆಬ್ರಿಟಿಗಳಾದವರು ಇಂತಹ ಟ್ರೋಲ್‌ಗಳಿಗೆ ರಿಯಾಕ್ಟ್ ಮಾಡಬಾರದು. ಟ್ರೋಲರ್ ಗಳಿಗೆ ನಾವೇ ಪ್ರಚಾರ ಕೊಟ್ಟಂತಾಗುತ್ತದೆ. ತೀರಾ ಮಿತಿ ಮೀರಿದಾಗ ಕಾನೂನು ಕ್ರಮಕ್ಕೆ ಮುಂದಾಗಬೇಕು. ಅದು ಬಿಟ್ಟು ಆ ಕ್ಷಣದ ಕೋಪದಲ್ಲಿ ನೀವು ಯೋಚಿಸುವ ಶಕ್ತಿ ಕಳೆದುಕೊಂಡರೆ ಈ ರೀತಿಯ ಅನಾಹುತಗಳು ಆಗುತ್ತವೆ ಎಂದಿದ್ದಾರೆ.
ರೇಣುಕಾಸ್ವಾಮಿಯನ್ನು ಕೊಲೆ ಮಾಡಬೇಕು ಎನ್ನುವುದು ದರ್ಶನ್ ಉದ್ದೇಶವಾಗಿರಲಿಲ್ಲ. ಅವರು ಹೆದರಿಸಲು ಹೊಡೆದಿದ್ದಾರೆ ಆತ ಸಾವನ್ನಪ್ಪಿದ್ದಾನೆ. ಆಮೇಲೆ ಏನು ಮಾಡಬೇಕು ಎಂದು ಗೊತ್ತಾಗದೇ ಶವವನ್ನು ಎಲ್ಲೋ ಹಾಕಿದ್ದಾರೆ. ಇದು ಯಾವುದು ಮೊದಲೇ ಪ್ಲಾನ್ ಮಾಡಿರುವುದಲ್ಲ ಎಂದು ಪ್ರಕರಣವನ್ನು ಗಮನಿಸಿದರೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications