ನನಗೆ ಪ್ರತಿ ಪೈಸೆಯ ಬೆಲೆ ಆವತ್ತು ಗೊತ್ತಾಯ್ತು: ಸಂಕಷ್ಟ ಹೇಳಿಕೊಂಡ ಕ್ರೇಜಿಸ್ಟಾರ್
ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರು ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಟ್ರೆಂಡ್ ಸೃಷ್ಟಿಸಿದ್ದ ನಟ. ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ಮಾಡುವ ವಿಭಿನ್ನ ಪ್ರಯತ್ನಗಳಿಗೆ ಕೈಹಾಕಿದ್ದವರು. ಹಿರಿಯ ನಟರನ್ನೂ ಹಿಂದಿಕ್ಕಿ ಹಿಟ್ ಸಿನಿಮಾಗಳನ್ನು ನೀಡಿದ್ದ ರವಿಚಂದ್ರನ್ ಅವರು ಹಲವು ವರ್ಷಗಳ ನಂತರ ತಮ್ಮ ಸಿನಿ ಜರ್ನಿಯನ್ನು ನಟ ಅಜಯ್ ರಾವ್ ಅವರ ಯುದ್ಧಕಾಂಡ ಸಿನಿಮಾದ ವೇದಿಕೆಯಲ್ಲಿ ನೆನೆದಿದ್ದಾರೆ. ಇದೇ ವೇಳೆ ತಮ್ಮ ಸಾಲಗಳ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ತಾವು ಎದುರಿಸಿದ ಆರ್ಥಿಕ ಸಮಸ್ಯೆ ಬಗ್ಗೆಯೂ ಕ್ರೇಜಿಸ್ಟಾರ್ ಓಪನ್ ಆಗಿ ಮಾತನಾಡಿದ್ದಾರೆ.
'ನಾನು ಸಿನಿಮಾ ಮಾಡಿಕೊಂಡು ಬಂದಾಗ ನಮ್ಮಪ್ಪ ಸಿನಿಮಾಗೆ ಕೋಟಿಗಟ್ಟಲೆ ದುಡ್ಡು ಹಾಕ್ತಿದ್ರು. ನನಗೆ ದುಡ್ಡಿನ ಬೆಲೆನೇ ಗೊತ್ತಿರಲಿಲ್ಲ. ಇವತ್ತಿಗೂ ದುಡ್ಡಿನ ಬೆಲೆ ನನಗೆ ಗೊತ್ತಿಲ್ಲ. ನಾನು ಹೀಗೇ ಬೆಳೆದುಕೊಂಡು ಬಂದೆ. ಶೂಟಿಂಗ್ ಮಾಡ್ತಿದ್ದಾಗ ನನಗೆ ಇಷ್ಟು ಜನ ಡ್ಯಾನ್ಸರ್ ಬೇಕು, ನೂರು ಟ್ಯಾಂಕರ್ ನೀರು ಬೇಕು ಎಂದು ಕೇಳ್ತಿದ್ದೆ. ಅದನ್ನ ನಮ್ಮಪ್ಪ ಹೇಗೆ ಎಲ್ಲಿಂದ ತರಿಸುತ್ತಿದ್ರೋ ಗೊತ್ತಿಲ್ಲ. ಮಗ ಆಸೆ ಪಟ್ಟಿದ್ದಾನೆ, ಅವನಿಗೆ ಏನು ಬೇಕೋ ಕೊಡ್ರೋ ಅಂತಿದ್ರು. ಇದರ ಹಿಂದೆ ಅವರು ಎಷ್ಟೆಲ್ಲ ಸಾಲ ಮಾಡ್ತಿದ್ರು ಅನ್ನೋದು ನಿಜವಾಗ್ಲೂ ಗೊತ್ತಿರಲಿಲ್ಲ' ಎಂದು ರವಿಚಂದ್ರನ್ ನೆನೆದಿದ್ದಾರೆ.

'ಆದರೆ ಒಂದು ದಿನ ಬಂತು. ನನ್ನ ಜೇಬು ಖಾಲಿಯಾದಾಗ ಪ್ರತಿ ಪೈಸೆಯ ಬೆಲೆ ತಿಳೀತು. ಆದ್ರೆ ಎಷ್ಟೇ ದುಡ್ಡಿಲ್ಲ ಅಂದ್ರೂ ಸಿನಿಮಾ ಮಾಡೋ ಹುಚ್ಚಂತೂ ನಮ್ಮನ್ನ ಬಿಡಲ್ಲ. ಆ ಮೇಲೆ ಇರೋ ದುಡ್ಡಲ್ಲೇ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದೆ. ನಾಳೆ ಬೆಳಿಗ್ಗೆ ನಮ್ಮ ಹತ್ರ ದುಡ್ಡಿಲ್ಲ ಅಂದ್ರೂ ಇರೋದ್ರಲ್ಲೇ ಸಿನಿಮಾ ಮಾಡೋದನ್ನ ಕಲೀಬೇಕು. ಹಣ ಖರ್ಚು ಮಾಡೋದಲ್ಲ ಮುಖ್ಯ, ಕಂಟೆಂಟ್ ತುಂಬಾ ಮುಖ್ಯ. ಜನಕ್ಕೆ ನಾವೇನು ತಲುಪಿಸುತ್ತೇವೆ? ಅವರ ಮನಸ್ಸನ್ನ ಎಷ್ಟು ಹಿಂಡುತ್ತೇವೆ ಅನ್ನೋದು ಕೂಡ ಮುಖ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಜಯ್ ರಾವ್‌ಗೆ ಸಾಲದ ಕಿವಿಮಾತು
'ಅಜಯ್ ರಾವ್ ಸಾಲ ಮಾಡಿ ಸಿನಿಮಾ ಮಾಡಿದ್ದೀನಿ ಎಂದು ಹೇಳಿಕೊಂಡಿದ್ದಾರೆ. ಇವರ ಇಂಟರ್ವ್ಯೂಗಳನ್ನು ನೋಡ್ಕೊಂಡು ಬಂದೆ. ಅಜಯ್ ರಾವ್ ಮಾತು ಕೇಳಿ ನಾನು ಮಾಡಿದ್ದ ಸಾಲಗಳೆಲ್ಲ ನೆನಪಾಯ್ತು. ಎಷ್ಟು ಸಾಲ ಮಾಡಿದ್ದೆ ಎಂದು ಲೆಕ್ಕ ಹಾಕೊಂಡು ಕೂತಿದ್ದೆ. ಅಜಯ್ ಸಾಲ ಮಾಡೋಕೆ ತಾಕತ್ ಬೇಕು ಅಂದ. ನನ್ನ ಪ್ರಕಾರ ಸಾಲ ತೀರ್ಸೋಕೆ ತಾಕತ್ ಬೇಕು. ನಾನು ಸಾಲದಲ್ಲೇ ಸಿನಿಮಾ ಮಾಡಿದ್ದೀವಿ, ಸಾಲದಲ್ಲೇ ಹೋರಾಡುತ್ತಿದ್ದೀವಿ. ಇಷ್ಟೊಂದು ಸೀರಿಯಸ್ ಆಗಿ ಒಂದು ಸಿನಿಮಾ ಮಾಡಬೇಕಾ' ಎಂದು ರವಿಚಂದ್ರನ್ ಹೇಳಿದ್ದಾರೆ.

'ಇದೆಲ್ಲವೂ ಅಜಯ್ ರಾವ್ ಕಾನ್ಫಿಡೆನ್ಸ್. ಸಾಲ ಮಾಡೋದಲ್ಲ, ಅದನ್ನು ತೀರಿಸೋದು ನಿಜವಾದ ತಾಕತ್ತು ಎಂದು ಕಿವಿಮಾತು ಹೇಳಿದ್ದಾರೆ. ಹಾಗಾಗಿ ಆ ಸಾಲವನ್ನು ತೀರಿಸು, ಸಾಲ ಮಾಡ್ತೀನಿ ಎಂದು ಎಲ್ಲೂ ಹೇಳ್ಕೋಬೇಡ. ನೀನು ಅಷ್ಟು ದುಡ್ಡು ಸಂಪಾದನೆ ಮಾಡ್ಕೋ. ಲೈಫ್‌ನ ಏಕೆ ಸ್ಟ್ರಗಲ್ ಮಾಡ್ಕೊತಿಯಾ?' ಎಂದು ವಿ.ರವಿಚಂದ್ರನ್ ಅಜಯ್ ರಾವ್‌ಗೆ ಕಿವಿಮಾತು ಹೇಳಿದ್ದಾರೆ.












Click it and Unblock the Notifications