ಡಾಲಿಯ "ಹಲಗಲಿ" ಅವತಾರ ನೋಡಿ ಸಿಎಂ ಸಿದ್ದರಾಮಯ್ಯ ಏನಂದ್ರು?
ನಟ ಡಾಲಿ ಧನಂಜಯ್ ಅವರ ಮುಂದಿನ ಸಿನಿಮಾ ಹಲಗಲಿ. ಈ ಸಿನಿಮಾದ ಟೀಸರ್ ರಿಲೀಸ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದು ನಮ್ಮ ಮಣ್ಣಿನ ಕಥೆ, ನಮ್ಮ ನೆಲದ "ಹಲಗಲಿ" ಬಂಡಾಯದ ಕಥೆ ಎಂದು ಡಾಲಿ ಹೇಳಿದ್ದಾರೆ. ಡಾಲಿಯ ಫಸ್ಟ್ ಲುಕ್ ಕೂಡ ಅನಾವರಣಗೊಂಡಿದ್ದು, ಐತಿಹಾಸಿಕ ಹಿನ್ನೆಲೆಯುಳ್ಳ ಈ ಸಿನಿಮಾಗೆ ಸಿನಿರಂಗದ ಹಲವರಿಂದ ಪ್ರಶಂಸೆಗೆ ಒಳಗಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಹಲಗಲಿ ಟೀಸರ್ ನೋಡಿ ಮೆಚ್ಚಿದ್ದಾರೆ.
ಬ್ರಿಟಿಷರ ಸರ್ವಾಧಿಕಾರಿ ಸಾಮ್ರಾಜ್ಯದ ನಿಶಸ್ತ್ರೀಕರಣ ನೀತಿಯ ವಿರುದ್ಧ ಸಿಡಿದೆದ್ದ ಹಲಗಲಿಯ ಬೇಡರು ತಮ್ಮ ಅಸ್ಮಿತೆಗಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿ, ಹುತಾತ್ಮರಾದರು. ಹಲಗಲಿಯ ದಂಗೆ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾಗದ ಘಟನೆ ಎಂದು ಸಿಎಂ ಸಿದ್ದರಾಮಯ್ಯ ನೆನೆದಿದ್ದಾರೆ.
ಬ್ರಿಟಿಷರ ತುಪಾಕಿ, ಪಿರಂಗಿಗಳಿಗೆ ಎದೆಕೊಟ್ಟು ನಿಂತ ಸ್ವಾತಂತ್ರ್ಯ ಪ್ರೇಮಿಗಳ ಸತ್ಯ ಘಟನೆಯಾಧಾರಿತ "ಹಲಗಲಿ" ಚಿತ್ರದ ಟೀಸರ್ ಅನ್ನು ಸ್ವಾತಂತ್ರ್ಯ ದಿನದಂದೇ ವೀಕ್ಷಿಸಿದ್ದು ಹೆಚ್ಚು ಖುಷಿ ಕೊಟ್ಟಿತು. ಚಿತ್ರದ ನಾಯಕನಟ ಡಾಲಿ ಧನಂಜಯ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆಗಳು. ನಮ್ಮ ಮಣ್ಣಿನ ಕತೆಯನ್ನು ಜನರೆದುರು ತರುವ ಈ ಪ್ರಯತ್ನವು ಯಶಸ್ಸು ಕಾಣಲಿ ಎಂದು ಶುಭಕೋರಿದ್ದಾರೆ.

ನಿಮ್ಮ ದಯೆಯ ಮಾತುಗಳಿಗೆ ಗೌರವ ಮತ್ತು ಕೃತಜ್ಞತೆಗಳು ಸರ್. ನಿಮ್ಮ ಪ್ರೋತ್ಸಾಹ ಇಡೀ ಹಲಗಲಿ ತಂಡಕ್ಕೆ ತುಂಬಾ ಅರ್ಥಪೂರ್ಣವಾಗಿದೆ ಧನ್ಯವಾದಗಳು ಎಂದು ನಟ ಡಾಲಿ ರಿಪ್ಲೈ ಮಾಡಿದ್ದಾರೆ. ಡಾಲಿ ಧನಂಜಯ್ ಅವರ ಹಲಗಲಿ ಚಿತ್ರದ ಫಸ್ಟ್ ಲುಕ್ ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕಾದ ಚಿತ್ರ. ಕನ್ನಡ ನೆಲದ ಮಣ್ಣಿನ ಯಶೋಗಾಥೆ ಹೇಗೆ ಸಾಮಾನ್ಯ ಬೇಡ ನಾಯಕರು ಬ್ರಿಟಿಷರನ್ನ ಬಗ್ಗು ಬಡೆದರು ಎಂಬವುದರ ಬಗ್ಗೆ ಈ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
ಹಲಗಲಿ ಸಿನಿಮಾದ ಫಸ್ಟ್‌ಲುಕ್ ಟೀಸರ್‌ನಲ್ಲಿ ಡಾಲಿ ಹಲಗಲಿ ಬೇಡರ ನಾಯಕನಾಗಿ ಅಬ್ಬರಿಸಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಹುಟ್ಟಡಗಿಸುವ ದೃಶ್ಯಗಳು ಮೈರೋಮಾಂಚನಗೊಳಿಸುವಂತಿವೆ. ಸಿನಿಮಾಗೆ ಸುಕೇಶ್ ನಾಯಕ್ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತವಿದೆ. ಡಾಲಿ ಧನಂಜಯ್ ಜೊತೆಗೆ ಸಪ್ತಮಿಗೌಡ ಮತ್ತೊಮ್ಮೆ ಜತೆಯಾಗಿದ್ದಾರೆ. ಬಿ.ಸುರೇಶ್, ಶರತ್ ಲೋಹಿತಾಶ್ವ, ಬಿರಾದರ್ ಸೇರಿದಂತೆ ಹಿರಿಯ ಪೋಷಕ ಕಲಾವಿದರೂ ಈ ಸಿನಿಮಾದಲ್ಲಿ ಇದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ.
ಹಲಗಲಿ ಬೇಡರ ಇತಿಹಾಸವೇನು?
ಬ್ರಿಟೀಷ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ಪಾಲು ಗಮನಾರ್ಹವಾಗಿತ್ತು. ಈ ಬಂಡಾಯಗಳ ಪೈಕಿ ಹಲಗಲಿ ಬಂಡಾಯ ಕೂಡ ಪ್ರಮುಖವಾದದ್ದು. ಹಲಗಲಿ ಎಂಬ ಸಣ್ಣ ಊರಿನ ದೊಡ್ಡ ಬಂಡಾಯ ರೋಮಾಂಚನಕಾರಿ ಮತ್ತು ವೀರೋಚಿತವಾದುದು. ಹಲಗಲಿ ಬಂಡಾಯಕ್ಕೆ ಕೂಡ ಸುಮಾರು 150 ವರ್ಷಗಳ ಇತಿಹಾಸವಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಎಂಬ ಗ್ರಾಮದಲ್ಲಿ ನಡೆದ ಈ ಬಂಡಾಯ ಹಲಗಲಿಯ ಬೇಡರ ಬಂಡಾಯವೆಂದೇ ಇತಿಹಾಸದಲ್ಲಿ ಪುಟದಲ್ಲಿದೆ. ಇಲ್ಲಿನ ನಾಯಕ ಸಮುದಾಯದವರು ಜೀವನೋಪಾಯಕ್ಕಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಬ್ರಿಟಿಷರ ಶಸ್ತ್ರಾಸ್ತ್ರ ಅಧಿಸೂಚನೆ ನಿರಾಕರಿಸಿ, ತಮ್ಮ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸದೇ ಅಲ್ಲಿನ ಬೇಡರು ಪ್ರತಿಭಟಿಸಿದ್ದೇ ಹಲಗಲಿ ಬಂಡಾಯ.












Click it and Unblock the Notifications