Darshan Thoogudeepa: ರೇಣುಕಾಸ್ವಾಮಿ ಹತ್ಯೆಗೆ 1 ವರ್ಷ: ಸಹಾಯಕ್ಕೆ ಮುಂದಾದ್ರ ದರ್ಶನ್?
ಬೆಂಗಳೂರು, ಜೂನ್ 08: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಚಿತ್ರದುರ್ಗದ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಈಗಾಗಲೇ ರೆಗ್ಯುಲರ್ ಬೇಲ್ ಸಿಕ್ಕಿದ್ದು, ತಮ್ಮ ಪತ್ನಿ, ಮಗ ಹಾಗೂ ಕುಟುಂಬದ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ ತುಂಬಿದ್ದು, ರೇಣುಕಾಸ್ವಾಮಿ ಭಾವಚಿತ್ರಕ್ಕೆ ಪತ್ನಿ ಪುತ್ರ ಸೇರಿ ಕುಟುಂಬಸ್ಥರು ನಮನ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ ಒಂದು ವರ್ಷ ತುಂಬಿದ್ದು, ರೇಣುಕಾಸ್ವಾಮಿ ಪೋಷಕರು ರೇಣುಕಾಸ್ವಾಮಿ ನೆನೆದು ಕಣ್ಣೀರಿಟ್ಟಿದ್ದಾರೆ. ಮಗನನ್ನು ಕಳೆದುಕೊಂಡಿರುವ ರೇಣುಕಾಸ್ವಾಮಿ ಕುಟುಂಬಸ್ಥರು ಕಣ್ಣೀರಿಡುತ್ತಲೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪುತ್ರ ಶೋಕ ನಿರಂತರವಾಗಿದ್ದು ಎಂದೂ ಮರೆಯಲಾಗಲ್ಲ. ಮೊಮ್ಮಗನ ಆರೈಕೆ ಆಟ ಪಾಠದಲ್ಲಿ ನೋವನ್ನು ಮರೆಯುತ್ತಿದ್ದೇವೆ ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ಹೆಸರು ಕೇಳಿ ಬಂದ ಬೆನ್ನಲ್ಲೇ 2024 ರ ಜೂನ್ 11ರಂದು ನಟ ದರ್ಶನ್ ಅವರನ್ನು ಪೊಲೀಸರು ಬೆಳ್ಳಂಬೆಳಗ್ಗೆ ಬಂಧನ ಮಾಡಿದ್ದರು. ಮೈಸೂರಿನ ನಿವಾಸದಲ್ಲಿ ನಟ ದರ್ಶನ್ ಬಂಧನಕ್ಕೊಳಗಾಗಿದ್ದು, ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಇನ್ನೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬರೋಬ್ಬರಿ ಆರು ತಿಂಗಳು ಜೈಲು ವಾಸ ಅನುಭವಿಸಿದ್ದರು,ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಪಾಲಾದ ದಿನದಿಂದಲೂ ಪತಿ ಪರವಾಗಿ ನಿಂತವರು ವಿಜಯಲಕ್ಷ್ಮಿ. ದೇವರ ಮೊರೆ ಹೋದ ವಿಜಯಲಕ್ಷ್ಮಿ ಕಾನೂನು ಹೋರಾಟ ಮಾಡಿ ಯಶಸ್ವಿಯಾಗಿದ್ದರು.
ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತಾರಾ ದರ್ಶನ್?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ಆರು ತಿಂಗಳ ಬಳಿಕ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಹಲವರು ಜೈಲಿನಿಂದ ಬಿಡುಗಡೆಯಾದರು. ದರ್ಶನ್ ಜೈಲಿನಿಂದ ಬಂದ ಬಳಿಕ ರೇಣುಕಾಸ್ವಾಮಿ ಕುಟುಂಬವನ್ನ ಭೇಟಿ ಮಾಡಿ ಆರ್ಥಿಕ ಸಹಾಯ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ರೇಣುಕಾಸ್ವಾಮಿ ಅವರ ಪುತ್ರನಿಗೆ ಹಾಗೂ ಅವರ ಕುಟುಂಬಕ್ಕೆ ಸಹಾಯ ಹಸ್ತ ಚಾಚುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ದರ್ಶನ್ ಇದುವರೆಗೂ ರೇಣುಕಾಸ್ವಾಮಿ ಅವರ ಕುಟುಂಬಸ್ಥರನ್ನ ಭೇಟಿ ಮಾಡಿಲ್ಲ ಎಂದು ತಿಳಿದು ಬಂದಿದೆ.
ಇದೇ ವೇಳೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ಅವರು ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯ ಸರ್ಕಾರ ಭರವಸೆ ಕೊಟ್ಟಂತೆ ನಡೆದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸರ್ಕಾರ ಪ್ರಕರಣವನ್ನು ಫಾಸ್ಟ್ ಟ್ರಾಕ್ ಮೂಲಕ ನಡೆಸಬೇಕು. ಮಾನವೀಯ ನೆಲೆಗಟ್ಟಿನಲ್ಲಿ ನಮ್ಮ ಸೊಸೆಗೆ ನೌಕರಿ ವ್ಯವಸ್ಥೆ ಮಾಡಬೇಕು. ನಮಗೆ ಕಾನೂನು, ಸರ್ಕಾರ ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಆದರೆ ಸೊಸೆಗೆ ನೌಕರಿ ಕೊಡಲು ಕಾನೂನು ಪ್ರಕಾರ ಬರಲ್ಲ ಅಂದಿದ್ದಾರೆ. ನನ್ನ ಮಗನನ್ನು ಕೊಂದವರಿಗೆ ಶಿಕ್ಷೆಯಾಗಬೇಕು ಎಂದು ಕಣ್ಣೀರು ಹಾಕಿದ್ದಾರೆ.












Click it and Unblock the Notifications