Darshan Thoogudeepa: 56 ಪೊಲೀಸ್ ಸಿಬ್ಬಂದಿ, ವೈದ್ಯರು, ಆರ್‌ಟಿಒ ಅಧಿಕಾರಿಗಳು ದರ್ಶನ್ ವಿರುದ್ಧ ಸಾಕ್ಷಿದಾರರು ಹೇಗೆ...?
ಬೆಂಗಳೂರು ಸೆಪ್ಟೆಂಬರ್ 4: ತಪ್ಪಾಗಿದೆ ಬಿಟ್ಟುಬಿಡಿ ಎಂದು ಅಂಗಲಾಚುತ್ತಿದ್ದ ರೇಣುಕಾಸ್ವಾಮಿಯ ತಲೆಯನ್ನು ಲಾರಿಗೆ ಚಚ್ಚಿ ಹೀನಾಮಾನವಾಗಿ ದರ್ಶನ್ ಹಲ್ಲೆ ಮಾಡಿರುವುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿಯನ್ನು ಸಾಯಿಸಲು ಪ್ರಚೋದನೆ ನೀಡಿದ್ದಕ್ಕೆ ಪವಿತ್ರಾ ಗೌಡ ಅವರನ್ನು ಎ1 ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಮೂರು ತಿಂಗಳ ಸುದೀರ್ಘ ತನಿಖೆಯ ಚಾರ್ಜ್‌ಶೀಟ್ ಅನ್ನು ಇಂದು ಸಲ್ಲಿಕೆ ಮಾಡಲಾಗಿದೆ. ಇದರಲ್ಲಿ ಪವಿತ್ರಾ ಗೌಡ ರೇಣುಕಾಸ್ವಾಮಿಯನ್ನು ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಬಳಿಕ ಆ ಚಪ್ಪಲಿಯನ್ನು ಕಿತ್ತುಕೊಂಡು ದರ್ಶನ್ ಮನಸೋಯಿಚ್ಚೆ ಹಲ್ಲೆ ಮಾಡುತ್ತಾರೆ. ಹಲ್ಲೆ ಮಾಡಿದ ನಂತರವೂ ಕೂಡ ಲಾರಿಗೆ ರೇಣುಕಾಸ್ವಾಮಿಯನ್ನು ಚಚ್ಚುತ್ತಾರೆ ದರ್ಶನ್.

'ಆತನನ್ನು ಸಾಯಿಸಿ, ಬಿಡಬೇಡಿ.. kill Him' ಎಂದು ಕಿರುಚಾಡಿದ್ದ ಪವಿತ್ರಾ..
ಇದಾದ ಬಳಿಕವೂ ಪವಿತ್ರಾ ಗೌಡ 'kill Him.. Don't leave him (ಆತನನ್ನು ಸಾಯಿಸಿ, ಆತನನ್ನು ಬಿಡಬೇಡಿ...)' ಎಂದು ಕಿರುಚುತ್ತಾರೆ. ಈಕೆಯ ಕಿರುಚಾಟಕ್ಕೆ ಅಲ್ಲಿದ್ದವರು ಮನಬಂದಂತೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ.
ಲಾರಿಗೆ ರೇಣುಕಾಸ್ವಾಮಿಯ ತಲೆಯನ್ನು ಚಚ್ಚಿದ ಬಳಿಕ ಆತನ ಪ್ಯಾಂಟ್ ಅನ್ನು ಬಿಚ್ಚಿ ಆತನ ಮರ್ಮಾಂಗಕ್ಕೆ ದರ್ಶನ್ ಬೂಟು ಕಾಲಿಂದ ತುಳಿಯುತ್ತಾರೆ. ಎದೆಗೆ ಒದಿಯುತ್ತಾರೆ. ಇದರಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದು ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿದೆ. ಪವಿತ್ರಾ ಗೌಡ 'ಕಿಲ್ ಹಿಮ್' ಎನ್ನುವ ಮಾತು ದರ್ಶನ್ ಗ್ಯಾಂಗ್‌ಗೆ ರೇಣುಕಾಸ್ವಾಮಿ ಕೊಲೆಗೆ ಪ್ರಚೋದನೆ ನೀಡಿದೆ.

ಜೊತೆಗೆ ಪವಿತ್ರಾ ಗೌಡ ಅಪಹರಣ ಮಾಡುವುದರಿಂದ ಹಿಡಿದು, ರೇಣುಕಾಸ್ವಾಮಿ ಕೊಲೆ ಮಾಡುವವರೆಗೂ ಮಾಹಿತಿಯನ್ನು ಟ್ರಾಕ್ ಮಾಡಿದ್ದಾರೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡುವವರೆಗೂ ಪವಿತ್ರಾ ಗೌಡ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಈ ಕೇಸ್‌ನಲ್ಲಿ ಪವಿತ್ರಾ ಎ1 ಆರೋಪಿಯಾಗಿದ್ದಾರೆ.
ರೇಣುಕಾಸ್ವಾಮಿ ಸಾವನ್ನಪ್ಪಿದ ನಂತರ ಆತನ ಶವವನ್ನು ಸಾಗಿಸುವಂತೆ ತಿಳಿಸಿ ದರ್ಶನ್ ಪವಿತ್ರಾ ಅಲ್ಲಿಂದ ಹೊರಟಿದ್ದಾರೆ. ನಂತರ ಹಣವನ್ನು ನೀಡಿ ಪ್ರಕರಣ ಬೇರೆಯವರ ತಲೆ ಮೇಲೆ ಹಾಕಿಕೊಳ್ಳುವಂತೆ ದರ್ಶನ್ ಸೂಚನೆ ನೀಡಿದ್ದಾರೆ. 17 ಆರೋಪಿಗಳ ಪೈಕಿ ಮೂರು (ನಿಖಿಲ್ ನಾಯ್ಕ್, ಕಾರ್ತಿಕ್, ಕೇಶವ್‌ಮೂರ್ತಿ) ಜನರನ್ನು ಹೊರತುಪಡಿಸಿ ಇನ್ನುಳಿದವರ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 12 ಜನ ರೇಣುಕಾಸ್ವಾಮಿ ಮೇಲೆ ಅರ್ಧ ಗಂಟೆ ಸತತವಾಗಿ ಹಲ್ಲೆ ಮಾಡಿರುವುದು ಚಾರ್ಜ್‌ಶೀಟ್‌ನಲ್ಲಿ ಇದೆ.
ಇವರೇ ದರ್ಶನ್ ವಿರುದ್ಧ ಸಾಕ್ಷಿ...
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರು ಇಂದು (ಸೆಪ್ಟೆಂಬರ್ 4) ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಕಮಿಷನರ್ ದಯಾನಂದ್ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಸಂಪೂರ್ಣ ಮುಗಿದಿದೆ. 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ. 7 ಸಂಪುಟಗಳ, 10 ಕಡತ ಇದೆ. 3991 ಪುಟ ಇದೆ. ಕೊಲೆ ಪ್ರಕರಣದಲ್ಲಿ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. 3 ಸಾಕ್ಷಿದಾರರು ಇದ್ದಾರೆ. ವೈದ್ಯರು, ಆರ್‌ಟಿಒ ಅಧಿಕಾರಿಗಳು, 56 ಪೊಲೀಸ್ ಸಿಬ್ಬಂದಿ ಸಾಕ್ಷಿದಾರರಾಗಿದ್ದಾರೆ ಎಂದು ಕಮಿಷನರ್ ದಯಾನಂದ್ ಮಾಹಿತಿ ನೀಡಿದ್ದಾರೆ.
ಮೂವರಿಗೆ ಜಾಮೀನು!
17 ಆರೋಪಿಗಳ ಪೈಕಿ ಮೂವರು ಆರೋಪಿಗಳಿಗೆ ಜಾಮೀನು ಸಿಗುವ ಸಾಧ್ಯತೆ ಇದೆ. ನಿಖಿಲ್ ನಾಯ್ಕ್, ಕಾರ್ತಿಕ್, ಕೇಶವ್‌ಮೂರ್ತಿ ಈ ಮೂವರು ಕೊಲೆಯಲ್ಲಿ ಭಾಗಿಯಾಗಿಲ್ಲ ಎಂಬ ಸತ್ಯ ಬಯಲಾಗಿದೆ. ಈ ಮೂವರು ತಾವೇ ಕೊಲೆ ಮಾಡಿರುವುದಾಗಿ ಆರೋಪ ಹೊತ್ತಿದ್ದರು. ಈ ಮೂಲಕ ಸಾಕ್ಷಿ ನಾಶಕ್ಕೆ ಇವರು ಮುಂದಾಗಿದ್ದರು. ಆದರೆ ಇವರು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ ಎನ್ನುವುದು ದೃಢವಾಗಿದೆ. ದರ್ಶನ್ ನೀಡಿದ ಹಣವನ್ನು ಪಡೆದು ತಾವೇ ಆರೋಪಿಗಳು ಎಂದು ಪೊಲೀಸರ ಮುಂದೆ ನಾಟಕವಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಇವರು ನೇರವಾಗಿ ಕೊಲೆಯಲ್ಲಿ ಭಾಗಿಯಾಗದ ಕಾರಣ ಇವರಿಗೆ ಜಾಮೀನು ಸಿಗುವ ಸಾಧ್ಯತೆ ಇದೆ.












Click it and Unblock the Notifications