Darshan: ಮತ್ತೆ ಒಂದಾದ 'ಕರಿಯ' ಜೋಡಿ : ಭೂಮಿ ಮೇಲೆ ಒಂದ್ ಹನಿ ರಕ್ತಾನೂ ಸೋಕೊದಕ್ಕೆ ಬಿಡಲ್ಲ ಅಂದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಮೂರು ಖುಷಿ ಸುದ್ದಿ ಕೊಟ್ಟಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಗುರುವಾರ ಮಧ್ಯರಾತ್ರಿ ಅವರ 57ನೇ ಸಿನಿಮಾ 'ಡೆವಿಲ್: ದಿ ಹೀರೋ' ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು.
ಶುಕ್ರವಾರ ಅವರ ಮುಂದಿನ ಇನ್ನು ಎರಡು ಸಿನಿಮಾಗಳ ಬಗ್ಗೆ ಅಧಿಕೃತ ಘೋಷಣೆಯಾಗಿದ್ದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ರಾಬರ್ಟ್, ಕಾಟೇರ ಬಳಿಕ ತರುಣ್ ಸುಧೀರ್ ಮತ್ತು ದರ್ಶನ್ ಮತ್ತೆ ಒಂದಾಗಲಿದ್ದಾರೆ. ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ದರ್ಶನ್ ನಟಿಸುವುದು ಖಚಿತವಾಗಿದೆ. ಇದು ದರ್ಶನ್ ಅವರ 59ನೇ ಸಿನಿಮಾ ಆಗಿರಲಿದೆ.

ಹಾಗಾದ್ರೆ ಅವರ 58ನೇ ಸಿನಿಮಾ ಯಾವುದು ಗೊತ್ತಾ? ಅದೇ ಪ್ರೇಮ್ ಜೊತೆಗಿನ ಸಿನಿಮಾ. ಡೆವಿಲ್ ಬಳಿಕ ದರ್ಶನ್ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲವಾದರೂ, ಚಿತ್ರದ ಬಗ್ಗೆ 47 ಸೆಕೆಂಡ್‌ಗಳ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಡೈಲಾಗ್‌ನಿಂದಲೇ ಹೆಚ್ಚಿದ ಕುತೂಹಲ
ಸಣ್ಣ ಟೀಸರ್ ನಲ್ಲಿ ಚಿತ್ರದ ಬಗ್ಗೆ ಯಾವ ಗುಟ್ಟೂ ಬಿಟ್ಟುಕೊಡದೇ ಇದ್ದರೂ, ಭಾರಿ ಬಜೆಟ್ ಸಿನಿಮಾ ಎನ್ನುವುದು ಮಾತ್ರ ತಿಳಿಯಲಿದೆ. ಚಿತ್ರದಲ್ಲಿ ದರ್ಶನ್ ಮಾಸ್ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದಾರೆ.
'ನನ್ನ ಕೊನೆ ಉಸಿರು ಇರೋವರ್ಗು ಈ ಭೂಮಿ ಮೇಲೆ ನಿನ್ನ ಒಂದ್ ಹನಿ ರಕ್ತಾನೂ ಸೋಕೊದಕ್ಕೆ ನಾನ್ ಬಿಡಲ್ಲ' ಎಂದು ದರ್ಶನ್ ಡೈಲಾಗ್ ಹೇಳಿದ್ದು ಬಳಿಕ ಜೈಶ್ರೀರಾಮ್ ಎನ್ನುವ ಘೋಷಣೆಗಳು ಮೊಳಗುತ್ತವೆ. ಹನುಮ ಗದೆ ಹಿಡಿದಿರುವಂತೆ ಕಾಣುವ ಪಾದಗಳ ಚಿತ್ರ ಮಾತ್ರ ಕಾಣಿಸುತ್ತದೆ. ಇದು ಸಿನಿಮಾ ಮೇಲಿಕ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
21 ವರ್ಷಗಳ ಬಳಿಕ ಒಂದಾದ ಜೋಡಿ
2003ರಲ್ಲಿ ಬಿಡುಗಡೆಯಾಗಿದ್ದ ಕರಿಯ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಇಂದಿಗೂ ಈ ಸಿನಿಮಾ ದರ್ಶನ್ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಈ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.
ರಾಕಿಂಗ್ ಸ್ಟಾರ್ ಯಶ್‌ರ ಟಾಕ್ಸಿಕ್ ಸಿನಿಮಾ ನಿರ್ಮಾಣ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ ಈ ದರ್ಶನ್-ಪ್ರೇಮ್ ಸಿನಿಮಾಕ್ಕೆ ಹಣ ಹೂಡಲಿದೆ. ಈ ಚಿತ್ರದಲ್ಲಿ ದರ್ಶನ್ ಜೊತೆ ಸಂಜಯ್ ದತ್ ಕೂಡ ನಟಿಸುವ ಸಾಧ್ಯತೆ ಇದೆ. ಈ ಮೊದಲು ದರ್ಶನ್, ಪ್ರೇಮ್, ಸಂಜಯ್ ದತ್ ಭೇಟಿ ಮಾಡಿದ ಚಿತ್ರಗಳು ವೈರಲ್ ಆಗಿದ್ದವು. ಅಲ್ಲದೆ ಪ್ರೇಮ್ ತೆಲುಗು ನಟ ಚಿರಂಜೀವಿ ಅವರನ್ನು ಕೂಡ ಭೇಟಿ ಮಾಡಿದ್ದರು, ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಕುತೂಹಲ ಮೂಡಿದೆ. ಸದ್ಯಕ್ಕೆ ಪ್ರೇಮ್ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. 2025ರಲ್ಲಿ ಈ ಚಿತ್ರ ತೆರೆಕಾಣಲಿದೆ.












Click it and Unblock the Notifications