ಕೆಲ ನಿರ್ಮಾಪಕರು ನಟರಿಗೆ ಕಾಂಡೋಮ್ ಪೂರೈಕೆ ಮಾಡುತ್ತಾರೆ ಎಂಬ ಹೇಳಿಕೆಗೆ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ
Chakravarthy Chandrachud: ಕೆಲವು ಸಿನಿಮಾ ನಿರ್ಮಾಪಕರು ನಟರಿಗೆ ಕಾಂಡೋಮ್‌ಗಳನ್ನು ಪೂರೈಕೆ ಮಾಡುತ್ತಾರೆ ಎಂಬ ನಟ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರ ಹೇಳಿಕೆ ಸ್ಯಾಂಡಲ್‌ವುಡ್ ವಲಯದಲ್ಲಿ ಭಾರೀ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ, ಚಿತ್ರರಂಗದೊಳಗೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿವಾದ ತೀವ್ರಗೊಳ್ಳುತ್ತಿದ್ದ ಹಿನ್ನೆಲೆ ಕನ್ನಡ ಸಿನಿಮಾ ನಿರ್ಮಾಪಕರ ಸಂಘ ತುರ್ತು ಸಭೆಯನ್ನು ನಡೆಸಿದೆ. ಸಭೆಯಲ್ಲಿ ಚರ್ಚೆ ನಡೆಸಿದ ನಂತರ, ಚಕ್ರವರ್ತಿ ಚಂದ್ರಚೂಡ್ ಅವರ ಹೇಳಿಕೆ ಚಿತ್ರೋದ್ಯಮದ ಗೌರವಕ್ಕೆ ಧಕ್ಕೆಯಾಗುವಂತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆ ಅವರ ವಿರುದ್ಧ ಅಧಿಕೃತ ದೂರು ದಾಖಲಿಸುವ ಕುರಿತು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ: ಈ ಬಗ್ಗೆ ಸ್ಪಷ್ಟನೆ ನೀಡಿದ ಚಕ್ರವರ್ತಿ ಚಂದ್ರಚೂಡ್ ಅವರು, "ನಾನು ಮಾತನಾಡಿರುವುದು ತಮಿಳು ಸಿನಿಮಾ, ಅಲ್ಲಿಯ ವಾತಾವರಣ, ರಾಜಕೀಯ ವ್ಯವಸ್ಥೆಯ ಬಗ್ಗೆ ಹೊರತು ಕನ್ನಡ ನಿರ್ಮಾಪಕರ ಬಗ್ಗೆ ಆಗಲಿ ಕನ್ನಡ ಚಿತ್ರ ರಂಗದ ಬಗ್ಗೆ ಅಲ್ಲವೇ ಅಲ್ಲ. ಅಲ್ಲದೆ "ಕಮೋಡ್ ಟು ಕಾಂಡೋಮ್" ಅನ್ನುವ ಉಪಮೆಯನ್ನು ಬಳಸಿದ್ದೇನೆ ಅಷ್ಟೇ ವಿನಃ ಯಾವುದೇ ನಿರ್ಮಾಪಕರ ವಿರುದ್ಧ ಅಲ್ಲ. ಜೊತೆಗೆ ಒಬ್ಬ ಕನ್ನಡ ನಿರ್ಮಾಪಕ ತಮಿಳು ರಾಜಕೀಯಕ್ಕೆ ಹೇಗೆ ಸಿಲುಕಿದ್ದಾರೆ ಎಂಬ ಹಿನ್ನೆಲೆಯಲ್ಲೂ ಸಹ ದನಿ ಎತ್ತಿದ್ದೇನೆ ಎಂದು ಪೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ, "ತಮಿಳು ಚಿತ್ರ ರಂಗದಲ್ಲಿಯೂ ಕೆಲಸ ಮಾಡಿದ ಅನುಭವ ಇರುವುದರಿಂದ ಅಲ್ಲಿ ನಾಯಕ ಕೇಂದ್ರೀತ ವಾತಾವರಣ ಹೇಗಿದೆ ಮತ್ತು ಅದರ ಪರಿಣಾಮಗಳನ್ನು ವಿವರಿಸಿದ್ದೇನೆ. ಅಖಾಡ ವಿಡಿಯೋದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದೆ ಒಂದು ಭಾಗವನ್ನು ಮಾತ್ರ ಕತ್ತರಿಸಿ ಹಂಚುತ್ತಿರುವುದರಿಂದ ಈ ಪ್ರಮಾದವಾಗಿದೆ. ಯಾವುದೇ ನಿರ್ಮಾಪಕರು ಇದರಿಂದ ನೊಂದುಕೊಳ್ಳುವ ಅವಶ್ಯಕತೆಯೂ ಇಲ್ಲ," ಎಂದು ಚಕ್ರವರ್ತಿ ಚಂದ್ರಚೂಡ್ ಅವರು ತಿಳಿಸಿದ್ದಾರೆ.
ಚಂದ್ರಚೂಡ್ ವಿರುದ್ಧ ದೂರು: ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡುವ ವೇಳೆ ನಟ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ನೀಡಿದ್ದ 'ಕಾಂಡೋಮ್ ಸಪ್ಲೈ' ಸಂಬಂಧಿತ ಹೇಳಿಕೆ ಸ್ಯಾಂಡಲ್‌ವುಡ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕನ್ನಡ ಸಿನಿಮಾ ನಿರ್ಮಾಪಕರ ಸಂಘ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ದಾಖಲಿಸಿದೆ.
ನಿರ್ಮಾಪಕರ ಸಂಘದ ಪ್ರಕಾರ, ಚಕ್ರವರ್ತಿ ಚಂದ್ರಚೂಡ್ ನೀಡಿರುವ ಹೇಳಿಕೆಗಳು ಚಿತ್ರರಂಗದಲ್ಲಿ ಗೊಂದಲ ಮತ್ತು ಆತಂಕವನ್ನು ಸೃಷ್ಟಿಸುವಂತಿವೆ. ಅಸಂಬದ್ಧ ಆರೋಪಗಳ ಮೂಲಕ ಕನ್ನಡ ಚಿತ್ರರಂಗದ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಇದೀಗ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ.
ಪ್ರಿಯಾ ಹಾಸನ್ ಆಕ್ರೋಶ: ಚಕ್ರವರ್ತಿ ಚಂದ್ರಚೂಡ್ ಅವರು ಸಿನಿಮಾ ನಿರ್ಮಾಪಕರ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳು ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿವೆ. ಅವರ ಹೇಳಿಕೆಯನ್ನು ಅನೇಕ ನಿರ್ಮಾಪಕರು ಹಾಗೂ ಚಿತ್ರರಂಗದ ಪ್ರಮುಖರು ಖಂಡಿಸುತ್ತಿದ್ದಾರೆ. ಈ ವಿಚಾರದ ಕುರಿತು ನಟಿ ಹಾಗೂ ನಿರ್ಮಾಪಕಿ ಪ್ರಿಯಾ ಹಾಸನ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಟಿವಿ9 ಜೊತೆ ಮಾತನಾಡಿದ ಅವರು, ಚಂದ್ರಚೂಡ್ ಅವರ ವಿಡಿಯೋ ನೋಡಿ ಬೇಸರ ಹಾಗೂ ಅಸಹ್ಯ ಉಂಟಾಯಿತು ಎಂದು ಹೇಳಿದ್ದಾರೆ. ಅವರು ಬಳಸಿರುವ ಪದಗಳು ಅತ್ಯಂತ ಅಸಭ್ಯವಾಗಿದ್ದು, ಹೆಣ್ಮಕ್ಕಳು ಕೇಳಲು ಕೂಡ ಹಿಂಜರಿಯುವಂತಹ ಭಾಷೆಯಾಗಿದೆ ಎಂದು ಪ್ರಿಯಾ ಹಾಸನ್ ಹೇಳಿದ್ದಾರೆ. ಚಿತ್ರರಂಗದ ದಿಗ್ಗಜ ಡಾ.ರಾಜ್‌ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಎಂದು ಗೌರವದಿಂದ ಕರೆದಿದ್ದರು. ಆದರೆ, ಇಂತಹ ಹಿನ್ನಲೆಯಲ್ಲಿ ಚಂದ್ರಚೂಡ್ ಅವರು ನಿರ್ಮಾಪಕರ ಬಗ್ಗೆ ಹೀನಾಯವಾಗಿ ಮಾತನಾಡಿರುವುದು ಎಲ್ಲ ನಿರ್ಮಾಪಕರ ಮನಸ್ಸಿಗೆ ನೋವು ತಂದಿದೆ ಎಂದು ಪ್ರಿಯಾ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಚಕ್ರವರ್ತಿ ಚಂದ್ರಚೂಡ್ ಹೇಳಿಕೆಗಳ ವಿರುದ್ಧ ಚಿತ್ರರಂಗದೊಳಗೆ ಅಸಮಾಧಾನ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.












Click it and Unblock the Notifications