Rishab Shetty: ನಟ ರಿಷಬ್ ಶೆಟ್ಟಿ ವಿರುದ್ಧ ಕೇಸ್ ದಾಖಲು
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ವಿರುದ್ಧ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ. ರಿಷಬ್ ಶೆಟ್ಟಿ ಅವರು ನಟಿಸುತ್ತಿರುವ ಜೈ ಹನುಮಾನ್ ಸಿನಿಮಾ ವಿಚಾರ ಸದ್ಯ ವಿವಾದಕ್ಕೆ ಕಾರಣವಾಗಿದೆ. ಹೈಕೋರ್ಟ್ ವಕೀಲ ಮಾಮಿದಾಳ್ ತಿರುಮಲ್ ರಾವ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ.
ಇದರಲ್ಲಿ ಹನುಮಂತನ ಚಿತ್ರಣವು ಆಕ್ಷೇಪಾರ್ಹವಾಗಿದೆ ಎಂದು ವಕೀಲ ಮಾಮಿದಾಳ್ ತಿರುಮಲ್ ರಾವ್ ಆರೋಪಿಸಿದ್ದಾರೆ. ಈ ಹಿನ್ನೆಲೆ ಜೈ ಹನುಮಾನ್ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ಮತ್ತು ನಾಯಕ ನಟ ರಿಷಬ್ ಶೆಟ್ಟಿ ಸೇರಿದಂತೆ ಚಿತ್ರದ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಮಾನವ ಮುಖದ ದೇವರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ರಿಷಬ್ ಶೆಟ್ಟಿ ಮತ್ತು ಮೈತ್ರಿ ಮೂವಿ ಮೇಕರ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ಈಗಾಗಲೇ ಜೈ ಹನುಮಾನ್ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಇದರಲ್ಲಿ ರಷಬ್ ಹನುಮಂತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಣವು ಧಾರ್ಮಿಕ ವ್ಯಕ್ತಿಗಿಂತ ನಟನಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಭಗವಾನ್ ಹನುಮಂತನ ನೈಜ ಸ್ವರೂಪದ ಬಗ್ಗೆ ಭವಿಷ್ಯದ ಪೀಳಿಗೆಯನ್ನು ದಾರಿ ತಪ್ಪಿಸಬಹುದು ಎಂದು ವಕೀಲ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ನಾಂಪಲ್ಲಿ ಕ್ರಿಮಿನಲ್ ಕೋರ್ಟ್ ಅಂಗೀಕರಿಸಿದ್ದು, ಮೈತ್ರಿ ಮೂವಿ ಮೇಕರ್ಸ್‌ಗೆ ಕಾನೂನು ಸಂಕಷ್ಟ ತಂದಿಟ್ಟಿದೆ.
ಜೈ ಹನುಮಾನ್ ಚಿತ್ರದ ಟೀಸರ್ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಕೀಲ ತಿರುಮಲ್ ರಾವ್, ನಟ ರಿಷಬ್ ಶೆಟ್ಟಿ ಅವರ ಸೆಲೆಬ್ರಿಟಿ ಸ್ಥಾನಮಾನಕ್ಕೆ ಆದ್ಯತೆ ನೀಡಿ, ಮಾನವ ಮುಖದ ಭಗವಾನ್ ಹನುಮಂತನನ್ನು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ದೂರಿದ್ದಾರೆ. ಇದು ಯುವ ಪೀಳಿಗೆಯನ್ನು ದಾರಿತಪ್ಪಿಸಬಹುದು. ಟೀಸರ್‌ನಲ್ಲಿ ರಿಷಬ್ ಶೆಟ್ಟಿಯನ್ನು ಮಾನವ ಮುಖದ ಸ್ನಾಯುವಿನ ರಾಜನಂತೆ ತೋರಿಸುತ್ತದೆ. ಇದು ಭಗವಾನ್ ಹನುಮಂತನ ಚಿತ್ರಣಕ್ಕೆ ಆಕ್ರಮಣಕಾರಿ ಎಂದು ನಾನು ನಂಬುತ್ತೇನೆ ಎಂದು ರಾವ್ ವಾದಿಸಿದ್ದಾರೆ.

ಸಿನಿಮಾಗಳಲ್ಲಿ ದೇವರ ವಿಚಾರವಾಗಿ ಇಂತಹ ಸೃಜನಾತ್ಮಕ ಸ್ವಾತಂತ್ರ್ಯಕ್ಕೆ ಅನುಮತಿ ನೀಡಿದರೆ, ಭವಿಷ್ಯದಲ್ಲಿ ಗಣೇಶ ಅಥವಾ ವರಾಹ ಸ್ವಾಮಿಯಂತಹ ಇತರ ಪೂಜ್ಯ ದೇವತೆಗಳನ್ನು ಕೂಡ ಚಲನಚಿತ್ರ ನಿರ್ಮಾಪಕರು ತಮಗೆ ಬೇಕಾದಂತೆ ಚಿತ್ರಿಸಿಕೊಳ್ಳುತ್ತಾರೆ. ಇಂತಹ ಚಿತ್ರಣಗಳನ್ನು ಅನುಮತಿಸಿದರೆ, ಭವಿಷ್ಯದ ಪೀಳಿಗೆಗಳು ಕೂಡ ನಮ್ಮ ಸಾಂಪ್ರದಾಯಿಕ ದೇವತೆಗಳ ಚಿತ್ರಣದೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
2024ರಲ್ಲಿ ಹನುಮಾನ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಕಂಡಿತ್ತು. ಬಳಿಕ ಈ ಸಿನಿಮಾದ ಬಹು ನಿರೀಕ್ಷಿತ ಸೀಕ್ವೆಲ್ ಆಗಿ ಜೈ ಹನುಮಾನ್ ಸಿನಿಮಾ ಮಾಡಲು ಮೈತ್ರಿ ಮೂವಿ ಮೇಕರ್ಸ್ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ, ತೇಜ ಸಜ್ಜಾ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ ಪ್ರಮುಖರು ತಾರಾಗಣದಲ್ಲಿದ್ದು, ಇದೀಗ ಈ ಚಿತ್ರಕ್ಕೆ ಬಿಡುಗಡೆಗೂ ಮೊದಲೇ ವಿಘ್ನ ಎದುರಾಗಿದೆ.
ಇನ್ನು ಇತ್ತೀಚೆಗಷ್ಟೇ ಪುಷ್ಪ-2 ಸಿನಿಮಾದ ರಿಲೀಸ್ ವೇಳೆ ಥಿಯೇಟರ್ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಕಳಂಕ ಮೈತ್ರಿ ಮೂವಿ ಮೇಕರ್ಸ್ ಮೇಲೆ ಇದೆ. ಈ ಕೇಸ್‌ನಲ್ಲಿ ನಟ ಅಲ್ಲು ಅರ್ಜುನ್ ಜೈಲು ದರ್ಶನ ಕೂಡ ಮಾಡಿಬರಬೇಕಾಯಿತು. ಇನ್ನೂ ಈ ಘಟನೆ ಮಾಸುವ ಮುನ್ನವೇ ಮೈತ್ರಿ ಮೂವಿ ಮೇಕರ್ಸ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.












Click it and Unblock the Notifications