ಸೈಫ್ ಅಲಿ ಖಾನ್ ಕೇಸ್‌ಗೆ ಬಿಗ್ ಟ್ವಿಸ್ಟ್: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಎಸ್ಕೇಪ್
ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ದಾಳಿ ನಡೆಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಘಟನೆ ನಡೆದು ಎರಡು ದಿನಗಳು ಕಳೆದರೂ ಆರೋಪಿ ಬಂಧನವಾಗದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹಾಗಾದರೆ ಈ ಹಿಂದೆ ಸೆರೆ ಸಿಕ್ಕ ಆರೋಪಿ ಯಾರು? ಪೊಲೀಸರು ಬಂಧಿಸಿದ್ದು ಯಾರನ್ನು? ಈ ಪ್ರಕರಣದ ಆರೋಪಿ ತಪ್ಪಿಸಿಕೊಂಡಿದ್ದೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.
ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಮೇಲೆ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ದಾಳಿ ಮಾಡಿರುವ ಘಟನೆ ಕಳೆದ ಎರಡು ದಿನಗಳ ಹಿಂದೆ ನಡೆದಿತ್ತು. ಶ್ರೀಮಂತ ನಟ ಸೈಫ್ ಅಲಿ ಖಾನ್ ಮನೆಗೆ ಕನ್ನ ಹಾಕಲು ಸಂಚು ರೂಪಿಸಿದ್ದ ಕಿಡಿಗೇಡಿ ಜನವರಿ 16 ಗುರುವಾರ ಮುಂಜಾನೆ ನಟನ ಮನೆಗೆ ನುಗ್ಗಿದ್ದಾನೆ. ಈ ವೇಳೆ ನಡೆದ ಅವಘಡದಲ್ಲಿ ನಟ ಸೈಫ್ ಅಲಿ ಖಾನ್ ಗಾಯಗೊಂಡಿದ್ದು, ಆರೋಪಿ ಚಾಕುವಿನಿಂದ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಅತ್ತ ಗಾಯಗೊಂಡ ನಟ ಸೈಫ್ ಅಲಿ ಖಾನ್ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದರೆ. ಇತ್ತ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಘಟನೆ ನಡೆದ 30 ಗಂಟೆಗಳ ಬಳಿಕ ಮುಂಬೈನ ಬಾಂದ್ರಾ ಪೊಲೀಸರು ಓರ್ವ ಶಂಕಿತ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು. ಈತನೇ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ವಿಚಾರಣೆ ನಂತರ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಪೊಲೀಸರು ಬಂಧಿಸಿದ ಶಂಕಿತ ಆರೋಪಿಗೂ ಪ್ರಕರಣಕ್ಕೂ ಸಂಬಂಧವಿಲ್ಲ ಎನ್ನುವುದು ತಿಳಿದು ಬಂದಿದೆ.
ಈ ಬಗ್ಗೆ ಸ್ವತಃ ಬಾಂದ್ರಾ ಪೊಲೀಸರೇ ಸ್ಪಷ್ಟನೆ ನೀಡಿದ್ದು, 'ನಟ ಸೈಫ್ ಅಲಿ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಈ ಹಿಂದೆ ಬಂಧಿಸಿದ ಆರೋಪಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ' ಎಂದು ಹೇಳಿದ್ದಾರೆ. ಅಲ್ಲದೇ ಇಪ್ಪತ್ತು ಜನರ ವಿಶೇಷ ತಂಡ ರಚಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಅಸಲಿ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದಾನೆ.

ಇದೀಗ ನಟ ಸೈಫ್ ಅಲಿ ಖಾನ್ ಪ್ರಕರಣದ ಆರೋಪಿ ನಗರದ ಮತ್ತೊಂದು ಸಿಟಿ ಟಿವಿಯಲ್ಲಿ ಸೆರೆ ಸಿಕ್ಕಿದ್ದಾನೆ. ಬಾಂದ್ರಾ ಪೊಲೀಸರು ನಗರದ ಎಲ್ಲಾ ಸಿಸಿ ಟಿವಿಗಳನ್ನು ಪರಿಶೀಲಿಸುವಾಗ ಲಕ್ಕಿ ಜಂಕ್ಷನ್ ಬಳಿಯ ಸಿಸಿ ಟಿವಿಯಲ್ಲಿ ಈತ ಸೆರೆಯಾಗಿದ್ದಾನೆ. ನಟನ ಮನೆಯಲ್ಲಿ ದಾಳಿ ನಡೆಸಿದ ಬಳಿಕ ಆರೋಪಿ ಬಟ್ಟೆ ಬದಲಾಯಿಸಿದ್ದು, ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಿ ತೆರೆಳುತ್ತಿರುವ ದೃಶ್ಯ ಸೆರೆಯಾಗಿದೆ. ಕೂಡಲೇ ಪೊಲೀಸರು ಆರೋಪಿ ಪತ್ತೆಗೆ ತನಿಖೆ ತೀವ್ರಗೊಳಿಸಿದ್ದು, ಸಮೀಪದ ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲಾ ಸಿಸಿ ಟಿವಿಗಳ ದೃಶ್ಯವನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.












Click it and Unblock the Notifications