Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ
ಮುಂಬೈ, ಜನವರಿ 16: ಇಂದು (ಜನವರಿ 16) ಗುರುವಾರ ಬೆಳ್ಳಂಬೆಳಗ್ಗೆಯೇ ಬಾಲಿವುಡ್ ನ ಖ್ಯಾತ ನಟನ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಮೇಲೆ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ದಾಳಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ನಟ ಸೈಫ್ ಅಲಿ ಖಾನ್ ಅವರನ್ನು ಅವರ ನಿವಾಸದ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಬಾಲಿವುಡ್‌ನಲ್ಲಿ ಪ್ರಖ್ಯಾತಿ ಪಡೆದಿರುವ ಸೈಫ್ ಅಲಿ ಖಾನ್ ಶ್ರೀಮಂತ ನಟ ಎಂದೇ ಗುರುತಿಸಿಕೊಂಡಿದ್ದಾರೆ. ಹೀಗಾಗಿ ದರೋಡೆಕೋರರ ಗುಂಪೊಂದು ಇವರ ಮನೆಗೆ ನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿದೆ. ಸದ್ಯ ಈ ಪ್ರಯತ್ನ ವಿಫಲಗೊಂಡಿದ್ದು, ನಟ ಸೈಫ್ ಅಲಿ ಖಾನ್ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಎನ್ನುವುದರ ವಿವರ ಈ ಕೆಳಗಿದೆ.

ಶ್ರೀಮಂತ ನಟ ಸೈಫ್ ಅಲಿ ಖಾನ್ ಮನೆಗೆ ಕನ್ನ ಹಾಕಲು ದರೋಡೆಕೋರರ ಗುಂಪೊಂದು ಸ್ಕೆಚ್ ಹಾಕಿದೆ. ಅದರಂತೆ ಸೈಫ್ ಅಲಿ ಖಾನ್ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಮಲಗಿದ್ದ ವೇಳೆ ಈ ಗುಂಪು ದಾಳಿ ಮಾಡಿದೆ. ಇಂದು (ಜನವರಿ 16) ಗುರುವಾರ ಮುಂಜಾನೆ 2.30ರ ವೇಳೆಗೆ ದರೋಡೆಕೋರರು ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದಾರೆ.
ಈ ವೇಳೆ ಸೈಫ್ ಅಲಿ ಖಾನ್ ಹಾಗೂ ಕುಟುಂಬಸ್ಥರಿಗೆ ಎಚ್ಚರವಾಗಿದ್ದು ಕೂಡಲೇ ದರೋಡೆಕೋರರನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ನಟನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡಿರುವ ನಟ ಸೈಫ್ ಅಲಿ ಖಾನ್‌ಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.












Click it and Unblock the Notifications