ನಮ್ಮ ಕುಟುಂಬ ನೊಂದಿದೆ, ನೆಮ್ಮದಿಯಾಗಿ ತೋಟದಲ್ಲಿರ್ತೀನಿ: ಚಿತ್ರರಂಗಕ್ಕೆ ಪ್ರಥಮ್ ಗುಡ್‌ಬೈ?
ಬಿಗ್‌ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಈಗಷ್ಟೇ ಸ್ಯಾಂಡಲ್‌ವುಡ್‌ನ ಹೀರೋ ಆಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಕೆಲ ವಿವಾದಗಳಲ್ಲಿಯೂ ಪ್ರಥಮ್ ಸಿಲುಕಿಕೊಂಡಿದ್ದರು. ನಟ ದರ್ಶನ್ ಅವರ ವಿಚಾರಲ್ಲಿಯೂ ಪ್ರಥಮ್ ಆಡಿದ್ದ ಮಾತುಗಳು ಸಂಚಲನ ಸೃಷ್ಟಿಸಿತ್ತು. ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿದ್ದ ಆರೋಪ ಕೇಳಿಬಂದಿತ್ತು. ಈ ಕೇಸ್ ಸಂಬಂಧ ಆರೋಪಿಗಳನ್ನು ಅರೆಸ್ಟ್ ಕೂಡ ಮಾಡಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರಥಮ್ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿ ಶಾಕ್ ಕೊಟ್ಟಿದ್ದಾರೆ. ಈ ಪೋಸ್ಟ್ ಪ್ರಥಮ್ ಅವರು ಚಿತ್ರರಂಗಕ್ಕೆ ಗುಡ್‌ಬೈ ಎನ್ನುವ ಸುಳಿವು ಕೊಡುವಂತಿದೆ.
ಬಿಗ್‌ಬಾಸ್ ಕನ್ನಡ ಸೀಸನ್-4ರ ವಿನ್ನರ್ ಆಗಿ ಒಳ್ಳೆ ಹುಡುಗ ಪ್ರಥಮ್ ಹೊರಹೊಮ್ಮಿದ್ದರು. ಹೆಸರು ಪ್ರಥಮ್ ಆದರೂ ಒಳ್ಳೆ ಹುಡುಗ ಎಂದು ಎಲ್ಲೆಡೆ ಮನೆಮಾತಾಗಿದ್ದು. ಬಳಿಕ ಅವರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಸ್ಯಾಂಡಲ್‌ವುಡ್‌ಗೆ ನಾಯಕನಟನಾಗಿ ಭರ್ಜರಿ ಎಂಟ್ರಿಯೂ ಕೊಟ್ಟರು. ಇದರ ನಡುವೆ ಸಾಲು ಸಾಲು ವಿವಾದಗಳು ಪ್ರಥಮ್ ಅವರನ್ನು ಸುತ್ತುವರಿದಿತ್ತು. ಇದರಿಂದ ಬೇಸತ್ತು ಪ್ರಥಮ್ ಚಿತ್ರರಂಗದಿಂದ ಹೊರಹೋಗುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಅಭಿಮಾನಿಗಳೊಂದಿಗೆ ಪ್ರಥಮ್ ಜಗಳ ಮಾಡಿಕೊಂಡಿದ್ದರು. ತಮ್ಮ ಪೋಸ್ಟ್‌ಗಳ ಮೂಲಕ ಅವರಿಗೆ ಉಗಿಯುತ್ತಿದ್ದರು. ಇತ್ತೀಚೆಗಷ್ಟೇ ಪ್ರಥಮ್ ಅವರು ದರ್ಶನ್ ಅಭಿಮಾನಿಗಳಿಂದ ಜೀವ ಬೆದರಿಕೆ ಬಂದಿದೆ ಎಂದು ಆರೋಪಿಸಿದ್ದರು. ದೊಡ್ಡಬಳ್ಳಾಪುರದ ಜಾಗವೊಂದರಲ್ಲಿ ಪ್ರಥಮ್ ಅವರಿಗೆ ಕೆಲ ರೌಡಿಗಳು ಇದೇ ವಿಚಾರವಾಗಿ ಕಿರಿಕ್ ತೆಗೆದು, ಡ್ರ್ಯಾಗರ್ ತೋರಿಸಿ ಜೀವ ತೆಗೆಯಲು ಪ್ರಯತ್ನಿಸಿದ್ದರು ಎಂದು ಪ್ರಥಮ್ ತಿಳಿಸಿದ್ದರು.
ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪ್ರಥಮ್ ದರ್ಶನ್ ಹಾಗು ಅವರ ಅಭಿಮಾನಿಗಳ ವಿರುದ್ಧ ಸಿಡಿದಿದ್ದರು. ನಟ ಪ್ರಥಮ್ ಅವರಿಗೆ ಧಮ್ಕಿ ಹಾಕಿದ ಕೇಸ್‌ನಲ್ಲಿ ರೌಡಿಶೀಟರ್ ಬೇಕರಿ ರಘು, ಯಶಸ್ವಿನಿ ಗೌಡ ಅವರ ಹೆಸರು ಕೇಳಿಬಂತು. ಬಳಿಕ ಅವರು ಜಾಮೀನು ಕೂಡ ಪಡೆದಿದ್ದರು. ಆದರೆ ಜಾಮೀನು ಸಿಕ್ಕ ನಂತರವೂ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ಅವರ ಜಾಮೀನು ರದ್ದು ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ.
'ದೇವ್ರು ಇವ್ರನ್ನ ಚೆನ್ನಾಗಿ ಇಟ್ಟಿರ್ಲಿ'
ಈ ಎಲ್ಲ ಬೆಳವಣಿಗೆಯ ನಡುವೆ ಪ್ರಥಮ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಅಚ್ಚರಿಯ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಇತ್ತೀಚಿನ ಪ್ರಕರಣ ಉಲ್ಲೇಖಿಸಿರುವ ಪ್ರಥಮ್, 'ಇವತ್ತಿಗೂ ನನಗೆ ಇವರ ಮೇಲೆ ಬೇಸರವಾಗಲಿ, ದ್ವೇಷವಾಗಲಿ ಇಲ್ಲ. ನಮ್ಮ ಕುಟುಂಬ ಎಷ್ಟು ನೊಂದಿದ್ರು ಅಂತ ನನಗೆ ಮಾತ್ರ ಗೊತ್ತು. ಅವರು ಚಾಕು ತೋರಿಸಿದಾಗ ನೋವಾಗಿದ್ದಕ್ಕೆ ಬೇಸರದಲ್ಲಿ ಮಾತಾಡಿದ್ದೆ. ನಮ್ಮ ಮನೆಯವರು ಬೆಂಗಳೂರೇ ಸಾಕು ಅಂತ ಹಠ ಮಾಡಿದ್ರು. ಸಿನಿಮಾ ರಿಲೀಸ್ ಮುಗಿಸಿ, ನೆಮ್ಮದಿಯಾಗಿ ನಮ್ ತೋಟದಲ್ಲಿರ್ತೀನಿ. ದೇವ್ರು ಇವ್ರನ್ನ ಚೆನ್ನಾಗಿ ಇಟ್ಟಿರ್ಲಿ' ಎಂದು ಪ್ರಥಮ್ ಬರೆದುಕೊಂಡಿದ್ದಾರೆ. ಹಾಗಾಗಿ ಪ್ರಥಮ್ ಬೆಂಗಳೂರು ಹಾಗೂ ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications