ಬಿಗ್ ಬಾಸ್ ಆಟದ ಪರಿ ಬದಲಿಸಿದ ರಜತ್: ಈ ವಾರ ಕಿಚ್ಚನ ಚಪ್ಪಾಳೆ ಫಿಕ್ಸ್
ಬಿಗ್ ಬಾಸ್ ಕನ್ನಡ ಸೀಜನ್ 11ರ ಅಂತಿಮ ವಾರಗಳು ಬರುತ್ತಿದ್ದಂತೆ ಪ್ರೇಕ್ಷಕರಿಗೆ ನೋಡಲು ಇನ್ನಷ್ಟು ಮಜವಾಗಿದೆ. ಈ ವಾರದ ಟಾಸ್ಕ್ ಅಂತೂ ವಿಭಿನ್ನವಾಗಿದ್ದು, ನಿನ್ನೆಯ ಸಂಚಿಕೆ ಸಖತ್ ಮನೋರಂಜನೆ ನೀಡಿದೆ. ಇದಕ್ಕೆ ಕಾರಣ ರಜತ್ ಕಿಶನ್ ಬುಜ್ಜಿ ಎಂದು ನೇರವಾಗಿ ಹೇಳಬಹುದು. ರಜತ್ ಬಿಗ್ ಬಾಸ್ ಕನ್ನಡ ಸೀಜನ್ 11ರ ಆಟದ ಪರಿ ಬದಲಿಸಿದ್ದು ಕಾರ್ಯಕ್ರಮ ವೀಕ್ಷಿಸಲು ಮತ್ತಷ್ಟು ಇಷ್ಟವಾಗಿದೆ.
ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾದ ದಿನದಿಂದಲೂ ಸ್ಪರ್ಧಿಗಳ ನಡುವೆ ಗುಂಪುಗಾರಿಕೆ, ಜಗಳ, ಕಿತ್ತಾಟ, ವಾದ-ವಿವಾದ, ಬೈಗುಳ, ತಳ್ಳಾಟ, ಅಳುವುದು, ಒತ್ತಡಕ್ಕೆ ಸಿಕ್ಕಿ ಒಬ್ಬರ ಮೇಲೆ ಒಬ್ಬರು ಕೂಗಾಡುವುದು ಇಂತಹ ಘಟನೆಗಳು ಹೆಚ್ಚಾಗಿ ನಡೆದಿದ್ದು, ಆಗೊಮ್ಮೆ ಈಗೊಮ್ಮೆ ಕೆಲವೇ ಕೆಲವು ಸ್ಪರ್ಧಿಗಳಿಂದ ಮಾತ್ರ ನಗುವಿನ ಮನೋರಂಜನೆ ಸಿಗುತ್ತಿತ್ತು. ಆದರೆ ರಜತ್ ಈ ಆಟದ ಪರಿ ಬದಲಿಸಿದ್ದು, ಬಿಗ್ ಬಾಸ್ ಮನೆಯಲ್ಲೂ ನಗು ನೋಡುಗರ ಮುಖದಲ್ಲೂ ನಗು ಮೂಡುವಂತೆ ಮಾಡುತ್ತಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಬಂದ ಮೊದಮೊದಲು ರಜತ್ ಪ್ರತಿಯೊಬ್ಬರ ಜೊತೆಗೂ ಧ್ವನಿ ಏರಿಸೇ ಮಾತನಾಡುತ್ತಿದ್ದರು. ಅಲ್ಲದೇ ವೀಕೆಂಡ್ ಸಂಚಿಕೆಯಲ್ಲಿಯೂ ಇತರ ಸ್ಪರ್ಧಿಗಳಿಗೆ ತಮ್ಮ ಡೈಲಾಗ್ ಮೂಲಕ ಎಚ್ಚರಿಕೆ ನೀಡುತ್ತಿದ್ದರು. ಇದರಿಂದ ಪ್ರೇಕ್ಷಕರಿಗೂ ಕಿರಿಕಿರಿ ಅನಿಸುತ್ತಿತ್ತು. ಆದರೆ ಈ ರಜತ್ ಕಿಶನ್ ಮೇಲಿನ ಸಂಪೂರ್ಣ ಅಭಿಪ್ರಾಯ ಬದಲಾಗಿ ಹೋಗಿದ್ದು, ಆಟ, ಜಗಳ, ಕಾಮಿಡಿ, ಮನೋರಂಜನೆ ಎಲ್ಲಾದಕ್ಕೂ ರಜತ್ ಸೈ ಎನಿಸಿಕೊಂಡಿದ್ದಾರೆ. ಅದಕ್ಕೆ ನಿನ್ನೆಯ ಸಂಚಿಕೆಯೇ ಉದಾಹರಣೆ.
ಬಿಗ್ಬಾಸ್ ಮನೆ ಈಗ ಬಿಬಿ ರೆಸಾರ್ಟ್ ಆಗಿ ಬದಲಾಗಿದೆ. ಈ ರೆಸಾರ್ಟ್ ಬರುವ ಅತಿಥಿಗಳು ಒಂದು ತಂಡವಾದರೆ, ಬಂದ ಅತಿಥಿಗಳಿಗೆ ಸೇವೆ ನೀಡುವುದು ಅಂದರೆ ರೆಸಾರ್ಟ್ ಸಿಬ್ಬಂದಿ ಮತ್ತೊಂದು ತಂಡವಾಗಿದೆ. ಮೊದಲು ಕ್ಯಾಪ್ಟನ್ ಭವ್ಯ ಗೌಡ ನೇತೃತ್ವದ ಮೋಕ್ಷಿತಾ, ರಜತ್, ಧನರಾಜ್ ತ್ರಿವಿಕ್ರಮ್ ರೆಸಾರ್ಟ್ನ ಸಿಬ್ಬಂದಿಯಾಗಿದ್ದರು. ಅತಿಥಿಗಳಾಗಿ ಚೈತ್ರಾ ಕುಂದಾಪುರ, ಮಂಜು, ಹನುಮಂತು, ಗೌತಮಿ, ಐಶ್ವರ್ಯಾ ರೆಸಾರ್ಟ್‌ಗೆ ಬಂದಿದ್ದರು.

ಈ ವೇಳೆ ಚೈತ್ರಾ ಕುಂದಾಪುರದ ತಂಡದವರು ರೆಸಾರ್ಟ್ ಸಿಬ್ಬಂದಿಗೆ ಕಾಟ ಕೊಡುವ ಉದ್ದೇಶದಿಂದ ಮನಬಂದಂತೆ ನಡೆದುಕೊಂಡಿದ್ದರು. ಇದರಿಂದ ಜಗಳ ವಾದ- ವಿವಾದ ಕೂಡ ನಡೆದು ಕೊನೆಗೆ ಕ್ಯಾಪ್ಟನ್ ಭವ್ಯ ಗೌಡ ಕಣ್ಣೀರಿಟ್ಟ ಸೀನ್ ಕೂಡ ನಡೆಯಿತು. ಕೊನೆಗೆ ಆಟ ಅದಲು ಬದಲಾಗಿದ್ದು, ಭವ್ಯ ಗೌಡ ತಂಡ ರೆಸಾರ್ಟ್ ಅತಿಥಿಗಳಾದರೆ ಚೈತ್ರಾ ತಂಡ ರೆಸಾರ್ಟ್ ಸಿಬ್ಬಂದಿಯಾದರು. ಈ ಸಮಯದಲ್ಲಿ ರಜತ್ ಮಾಡಿದ ಉಪಾಯ ಇಡೀ ಸಂಚಿಕೆಯನ್ನು ನಗುವಿನಲ್ಲಿ ತೇಲಿಸುವಂತೆ ಮಾಡಿತು.
ಎದುರಾಳಿ ತಂಡಕ್ಕೆ ಸಿಕ್ಕಾಪಟ್ಟೆ ಗೋಳು ಕೊಟ್ಟಿರುವ ಭವ್ಯ ಗೌಡ ತಂಡ ಎಲ್ಲಿಯೂ ಟಾಸ್ಕ್ ಅನ್ನು ಗಂಭೀರವಾಗುವಂತೆ ಮಾಡಿಲ್ಲ. ರಜತ್ ಸಿಕ್ಕಾಪಟ್ಟೆ ತಮಾಷೆ ಮಾಡುತ್ತಲೇ ಎದುರಾಳಿ ತಂಡವನ್ನು ಅಯ್ಯೋ ಎನಿಸಿಕೊಂಡರು. ಇದು ನೋಡಲು ಪ್ರೇಕ್ಷಕರಿಗೂ ಕೂಡ ಮಜವಾಗಿತ್ತು. ನಿನ್ನೆಯ ಸಂಚಿಕೆಯಲ್ಲಿ ರಜತ್ ಒಂದೆಡೆ ಹೈಲೈಟ್ ಆದರೆ ಇಡೀ ಸಂಚಿಕೆಯನ್ನು ಮತ್ತಷ್ಟು ಕಲರ್‌ಫುಲ್ ಮಾಡಿದ್ದು ಧನರಾಜ್, ರೋಬೋ ಎನ್ನುವ ಪಾತ್ರ ಆಯ್ಕೆ ಮಾಡಿಕೊಂಡ ಧನರಾಜ್, ಹನುಮಂತು ಜೊತೆ ಸೇರಿ ನೋಡುವವರಿಗೆ ಸಖತ್ ಮನೋರಂಜನೆ ನೀಡಿದರು. ಒಟ್ಟಾರೆ ನಿನ್ನೆಯ ಸಂಚಿಕೆ ಬಿಗ್ ಬಾಸ್ ಕನ್ನಡ ಸೀಜನ್ 11ರ ಟಾಪ್ ಸಂಚಿಕೆಗಳಲ್ಲಿ ಒಂದಾಗಿತ್ತು.












Click it and Unblock the Notifications