Dhanraj Achar: ಬಿಗ್ ಬಾಸ್‌ನಿಂದ ಮೋಸ ಆಯ್ತಾ?: ಕೊನೆಗೂ ಮೌನ ಮುರಿದ ಧನರಾಜ್
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ವಾರದಲ್ಲಿದ್ದು ಗ್ರ್ಯಾಂಡ್ ಫಿನಾಲೆಗೆ ಇನ್ನು ಎರಡೇ ದಿನ ಬಾಕಿ ಇದೆ. ಇಪ್ಪತ್ತು ಜನರ ಪೈಕಿ ಆರು ಮಂದಿ ಸ್ಪರ್ಧಿಗಳು ಫಿನಾಲೆಗೆ ಕಾಲಿಟ್ಟಿದ್ದು, ನಟಿ ಗೌತಮಿ ಜಾದವ್ ಹಾಗೂ ಧನರಾಜ್ ಆಚಾರ್ ಕೊನೆಯ ಹಂತದಲ್ಲಿ ಈ ಅವಕಾಶವನ್ನು ಕಳೆದುಕೊಂಡರು.
ಫಿನಾಲೆ ವಾರಕ್ಕೆ ಕಾಲಿಡುವ ಅಂಚಿನಲ್ಲಿದ್ದ ಧನರಾಜ್ ಆಚಾರ್ ಕೊನೆಯ ಕ್ಷಣದಲ್ಲಿ ಈ ಅವಕಾಶವನ್ನು ಕಳೆದುಕೊಂಡರು. ನೂರು ದಿನ ಬಿಗ್ ಬಾಸ್ ಮನೆಯಲ್ಲಿ ಕಳೆದಿರುವ ಧನರಾಜ್ ಕಪ್ ಗೆಲ್ಲದಿದ್ದರೂ, ತಮ್ಮ ಮುಗ್ಧತೆ, ಪ್ರಾಮಾಣಿಕತೆಯಿಂದ ಜನರ ಮನಸ್ಸು ಗೆದ್ದಿದ್ದಾರೆ. ಹೀಗಾಗಿ ಧನರಾಜ್ ಆಚಾರ್ ಎಲಿಮಿನೇಟ್ ಆಗುತ್ತಿದ್ದಂತೆ ಬಿಗ್ ಬಾಸ್ ನಿರ್ಧಾರದ ವಿರುದ್ಧ ಪ್ರೇಕ್ಷಕರು ಅಸಮಾಧಾನಗೊಂಡಿದ್ದಾರೆ.

ಆ ವಾರ ಮೊದಲೇ ಮಿಡ್ ವೀಕ್ ಎಲಿಮಿನೇಷನ್ ಘೋಷಣೆ ಮಾಡಿದ್ದ ಬಿಗ್ ಬಾಸ್, ಧನರಾಜ್ ಸೇಫ್ ಆಗುತ್ತಿದ್ದಂತೆ ಈ ಎಲಿಮಿನೇಷನ್ ಪ್ರಕ್ರಿಯೆಯನ್ನು ರದ್ದು ಮಾಡಿದ್ದಾರೆ. ಧನರಾಜ್ ಟಾಸ್ಕ್‌ನಲ್ಲಿ ಕನ್ನಡಿ ನೋಡಿ ಪೂರ್ಣಗೊಳಿಸಿದರು ಎನ್ನುವ ಕಾರಣ ಕೊಟ್ಟು ಮಿಡ್ ವೀಕ್ ಎಲಿಮಿನೇಷನ್ ರದ್ದು ಮಾಡಿದ್ದ ಬಿಗ್ ಬಾಸ್, ಕೊನೆಗೆ ಧನರಾಜ್ ಸ್ವತಃ ತನ್ನನ್ನು ನಾಮಿನೇಷನ್‌ನಲ್ಲಿ ಸೇರಿಸಿಕೊಳ್ಳಿ ಎಂದು ಹೇಳಿದ ಬಳಿಕ ಮತ್ತೆ ನಾಮಿನೇಷನ್ ಪ್ರಕ್ರಿಯೆಗೆ ಅವಕಾಶ ಮಾಡಿಕೊಟ್ಟರು.
ಈ ಹಿಂದೆ ಅನೇಕ ಸ್ಪರ್ಧಿಗಳು ಆಟದಲ್ಲಿ ತಪ್ಪು ಮಾಡಿ ಗೆದ್ದಿದ್ದರು. ಅಂತವರಿಗೆ ಮತ್ತೆ ಅವಕಾಶ ಕೂಡ ಕೊಟ್ಟಿದ್ದರು. ಆದರೆ ಧನರಾಜ್ ಪಾಲಿಗೆ ಬಿಗ್ ಬಾಸ್‌ನಿಂದ ಯಾವ ಕ್ಷಮೆಯೂ ಸಿಗಲಿಲ್ಲ. ಇದು ಪ್ರೇಕ್ಷಕರನ್ನು ಬಹಳ ಕಾಡಿದೆ. ಹಾಗಾದ್ರೆ ಬಿಗ್ ಬಾಸ್ ಪಕ್ಷಪಾತ ಮಾಡಿದ್ರಾ? ಬಿಗ್ ಬಾಸ್ ತಂಡದಿಂದ ಧನರಾಜ್‌ಗೆ ಅನ್ಯಾಯಾ ಆಯ್ತಾ? ಎನ್ನುವ ಪ್ರಶ್ನೆಗಳು ಉದ್ಭವವಾಗಿದ್ದು, ಈ ಪ್ರಶ್ನೆಗೆ ಸ್ವತಃ ಧನರಾಜ್ ಉತ್ತರಿಸಿದ್ದಾರೆ.
ಇತರ ಸ್ಪರ್ಧಿಗಳಿಗೆ ನೀಡಿದಂತೆ ಧನರಾಜ್‌ಗೆ ಯಾಕೆ ಮತ್ತೊಂದು ಅವಕಾಶ ನೀಡಿಲ್ಲ. ಇದು ಯಾರೋ ಒಬ್ಬ ಸ್ಪರ್ಧಿಯನ್ನು ಉಳಿಸುವ ಹುನ್ನಾರವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಧನರಾಜ್, 'ನಾನು ನೂರು ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದು ನೋಡಿದ ಪ್ರಕಾರ ಬಿಗ್ ಬಾಸ್ ಪಕ್ಷಪಾತವಾಗಿ ಯಾವುದೇ ತೀರ್ಮಾನ ಕೊಡುತ್ತಾರೆ ಅಂತಾ ಅನಿಸಿಲ್ಲ. ಆಟದಲ್ಲಿ ಯಾರ ಪರವಾಗಿಯೂ ತೀರ್ಮಾನ ಕೊಟ್ಟಿಲ್ಲ'.

'ತ್ರಿವಿಕ್ರಮ್ ಅವರ ಆಟದಲ್ಲಿ ಕೂಡ ನೋಡುವುದಾದರೇ ಮತ್ತೊಮ್ಮೆ ಎಚ್ಚರಿಕೆ ಕೊಟ್ಟು ಆಟ ಆಡಿಸುತ್ತಾರೆ. ಎಲ್ಲೂ ಯಾರಿಗೂ ಮೋಸ ಆಗಬಾರದು ಅಂತಾ. ನಿಯಮದ ಉಲ್ಲಂಘನೆ ಆಗಬಾರದು ಎಂದು ಮತ್ತೆ ಆಟ ಆಡಿಸುತ್ತಾರೆ. ನನ್ನ ಆಟದ ವಿಚಾರದಲ್ಲಿ ಮೊದಲನೆಯದಾಗಿ ಉಸ್ತುವಾರಿ ನೋಡಬೇಕಿತ್ತು. ಅದಲ್ಲದೇ ಆಟಗಾರರಾಗಿ ನಾವು ಕೂಡ ಅರ್ಥ ಮಾಡಿಕೊಳ್ಳಬೇಕಿತ್ತು. ಟಾಸ್ಕ್ ಪುಸ್ತಕ ಓದಿ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಕೂಡ. ಒಟ್ಟಾಗಿ ಎಲ್ಲರದೂ ತಪ್ಪಾಗಿ ಕೊನೆಯಲ್ಲಿ ಬಿಗ್ ಬಾಸ್ ಪ್ರವೇಶವಾಯಿತು. ಎಲ್ಲೋ ಒಂದು ಕಡೆ ಆಗಿ ಹೋಯ್ತು ಎನ್ನುವಷ್ಟರಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಯಿತು' ಎಂದು ನ್ಯಾಷನಲ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಧನರಾಜ್ ಹೇಳಿದ್ದಾರೆ.












Click it and Unblock the Notifications