Rajath: ಮಾಜಿ ಪ್ರೇಯಸಿ ಜೊತೆಗಿನ ಬಿಗ್ ಬಾಸ್ ರಜತ್ ಫೋಟೋ ವೈರಲ್: ದೂರು ದಾಖಲು
ಬಿಗ್ ಬಾಸ್ ಕನ್ನಡ ಸೀಜನ್ 11 ಕೊನೆಯ ವಾರಕ್ಕೆ ಕಾಲಿಟ್ಟಿದೆ. ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಸ್ಪರ್ಧಿಗಳು ಈಗ ಫಿನಾಲೆ ವಾರಕ್ಕೆ ಕಾಲಿಟ್ಟಿರುವ ಖುಷಿಯಲ್ಲಿದ್ದಾರೆ. ರಜತ್, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಬಿಗ್ ಬಾಸ್ ಕನ್ನಡ ಸೀಜನ್ 11ರ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.
ಈ ಎಲ್ಲಾ ಫಿನಾಲೆ ಸ್ಪರ್ಧಿಗಳ ಪೈಕಿ ರಜತ್ ಬಿಗ್ ಬಾಸ್ ಪಯಣವನ್ನು ಮೆಚ್ಚಲೇ ಬೇಕು. ಯಾಕೆಂದರೆ ಅರ್ಥ ಸೀಜನ್ ಅಂದರೆ ಐವತ್ತು ದಿನಗಳು ಕಳೆದ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ರಜತ್ ಉಳಿದ ಎಲ್ಲಾ ಸ್ಪರ್ಧಿಗಳಿಗೂ ಟಕ್ಕರ್ ಕೊಟ್ಟು ಫಿನಾಲೆ ವಾರ ತಲುಪಿದರು. ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಅಗ್ರೇಸಿವ್ ಆಗಿ ಆಟ ಆಡುತ್ತಿದ್ದ ರಜತ್ ಆಟಗಳ ಮಧ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಪ್ರತಿಯೊಂದು ವಿಚಾರಕ್ಕೂ ಮನೆಯ ಇತರ ಸ್ಪರ್ಧಿಗಳ ಜೊತೆ ಕಿರಿಕ್ ತೆಗೆಯುತ್ತಿದ್ದರು.

ಮೊದಲಿನಿಂದಲೂ ಪ್ರತಿಯೊಬ್ಬರ ಜೊತೆಗೂ ಧ್ವನಿ ಏರಿಸೇ ಮಾತನಾಡುತ್ತಿದ್ದ ರಜತ್ ವೀಕೆಂಡ್ ಸಂಚಿಕೆಯಲ್ಲಿಯೂ ಇತರ ಸ್ಪರ್ಧಿಗಳಿಗೆ ತಮ್ಮ ಡೈಲಾಗ್ ಮೂಲಕ ಎಚ್ಚರಿಕೆ ನೀಡುತ್ತಿದ್ದರು. ಮೊದಮೊದಲು ಪ್ರೇಕ್ಷಕರ ಕೋಪಕ್ಕೆ ಕಾರಣರಾಗುತ್ತಿದ್ದ ರಜತ್ ಈಗ ಬಹುತೇಕರ ಮೆಚ್ಚಿನ ಸ್ಪರ್ಧಿಯಾಗಿದ್ದಾರೆ. ತಮಾಷೆ ಹಾಗೂ ಕೆಲವು ಸ್ಪರ್ಧಿಗಳ ಬಗ್ಗೆ ರಜತ್ ತೋರಿಸುವ ಕಾಳಜಿ, ಸರಿಯಾದ ಸಮಯದಲ್ಲಿ ವಾದ, ಟಾಸ್ಕ್‌ಗಳಲ್ಲಿಯೂ ಉತ್ತಮವಾಗಿ ಆಡುತ್ತಾ ರಜತ್ ಫಿನಾಲೆ ತಲುಪಿದ್ದಾರೆ.
ಅತ್ತ ಬಿಗ್ ಬಾಸ್ ಮನೆಯೊಳಗೆ ರಜತ್ ಗೆಲುವಿನ ಹೋರಾಟದಲ್ಲಿದ್ದರೆ ಇತ್ತ ಹೊರಗಡೆ ರಜತ್ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಹೀಗಾಗಿ ಅವರ ಪತ್ನಿ ಕಿರುತೆರೆಯ ರಿಯಾಲಿಟಿ ಶೋ ಸ್ಪರ್ಧಿ ಅಕ್ಷಿತಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಕಿಡಿಗೇಡಿಯೊಬ್ಬ ಬಿಗ್ ಬಾಸ್ ಸ್ಪರ್ಧಿ ರಜತ್ ಹಾಗೂ ಅವರ ಮಾಜಿ ಗೆಳತಿ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.

ಇದೀಗ ಆ ಫೋಟೋಗಳು ಟ್ರೋಲ್ ಪೇಜ್‌ಗಳ ಬಾಯಿಗೆ ಆಹಾರವಾಗಿದ್ದು, ಇಬ್ಬರು ಜೊತೆಗೆ ಇರುವ ಫೋಟೋಗಳನ್ನು ವೈರಲ್ ಮಾಡಲಾಗುತ್ತಿದೆ. ಫೋಟೋ ಡಿಲೀಟ್ ಮಾಡುವಂತೆ ಮೆಸೇಜ್ ಮೂಲಕ ಮನವಿ ಮಾಡಿದ ರಜತ್ ಪತ್ನಿ ಅಕ್ಷಿತಾಗೆ ಕೆಲವು ಟ್ರೋಲ್ ಪೇಜ್‌ಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಫೋಟೋ ಡಿಲೀಟ್ ಮಾಡುವ ಉದ್ದೇಶದಿಂದ ಅಕ್ಷಿತಾ ಅಪರಿಚಿತ ವ್ಯಕ್ತಿ ನೀಡಿದ ಯುಪಿಐ ಐಡಿಗೆ ಸುಮಾರು 6,500 ರೂಪಾಯಿ ಹಣವನ್ನು ಹಾಕಿದ್ದಾರೆ. ಹಣ ಹಾಕಿದ ನಂತರ ಬೇರೆ ಬೇರೆ ಟ್ರೋಲ್ ಪೇಜ್‌ನಲ್ಲಿ ಮತ್ತೆ ಫೋಟೋ ಅಪ್ಲೋಡ್ ಮಾಡಲಾಗಿದೆ. ಮತ್ತೆ ಫೋಟೋ ಡಿಲೀಟ್ ಮಾಡಲು ಕೇಳಿದಾಗ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಟ್ರೋಲ್ ಪೇಜ್ ವಿರುದ್ಧ ಬೇಸತ್ತು ಸೈಬರ್ ಠಾಣೆ ಮೆಟ್ಟಿಲೇರಿದ ರಜತ್ ಪತ್ನಿ ಅಕ್ಷಿತಾ, ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ದೂರು ನೀಡಿದ್ದಾರೆ. ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಫೋಟೋ ಡಿಲೀಟ್ ಮಾಡಿರುವ ಟ್ರೋಲ್ ಪೇಜ್‌ಗಳು ಖಾತೆಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ. ಸದ್ಯ ಬ್ಲ್ಯಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.












Click it and Unblock the Notifications