Lawyer Jagadish: ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಅರೆಸ್ಟ್: ಕಾರಣ ಇಲ್ಲಿದೆ
ಬೆಂಗಳೂರು, ಜನವರಿ 25: ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಅವರನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರ ಜೊತೆಗೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಜನವರಿ 24) ಶುಕ್ರವಾರದ ರಾತ್ರಿ ಲಾಯರ್ ಜಗದೀಶ್, ಅವರ ಪುತ್ರ ಹಾಗೂ ಇಬ್ಬರು ಗನ್ಮ್ಯಾನ್ಗಳನ್ನ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಈಗ ಬೆಂಗಳೂರಿನ ಹಲವೆಡೆ ದೇವರ ಉತ್ಸವಗಳು ನಡೆಯುತ್ತಿದ್ದು, ಕೊಡಿಗೆಹಳ್ಳಿಯಲ್ಲಿ ಕೂಡ ಅಣ್ಣಮ್ಮ ದೇವಿಯ ಉತ್ಸವ ಆಯೋಜಿಸಲಾಗಿತ್ತು. ಕೊಡಿಗೆಹಳ್ಳಿ ಸ್ಥಳೀಯರು ಅಣ್ಣಮ್ಮ ದೇವಿಯನ್ನು ಕೂರಿಸಿದ್ದರು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಸ್ತೆಗೆ ಅಡ್ಡವಾಗಿ ಪೆಂಡಾಲ್ ಹಾಕಲಾಗಿದೆ ಎಂದು ಲಾಯರ್ ಜಗದೀಶ್ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಲಾಯರ್ ಜಗದೀಶ್ ಪೊಲೀಸರಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ.

ಲಾಯರ್ ಜಗದೀಶ್ ದೂರು ನೀಡಿರುವುದಕ್ಕೆ ಕೋಪಗೊಂಡ ಸ್ಥಳೀಯರು ಈ ಬಗ್ಗೆ ಮಾತನಾಡಲು ಅವರ ಮನೆ ಬಳಿ ತೆರಳಿದ್ದರು. ಈ ವೇಳೆ ಗಲಾಟೆಯಾಗಿದ್ದು, ಸ್ಥಳೀಯರು ಹಾಗೂ ಲಾಯರ್ ಜಗದೀಶ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಲ್ಲದೇ ಜನವರಿ 23ರಂದು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ನಾಗರಾಜ್ ಎನ್ನುವವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಜೊತೆಗೆ ಲಾಯರ್ ಜಗದೀಶ್ ವಿರುದ್ಧ ಕೂಡ ಪ್ರತಿದೂರು ದಾಖಲಾಗಿತ್ತು.
ನಿನ್ನೆ ಮತ್ತೆ ಕೊಡಿಗೆಹಳ್ಳಿಯ ಅಣ್ಣಮ್ಮ ದೇವಿಯ ಉತ್ಸವದ ವಿಚಾರವಾಗಿ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಹಾಗೂ ಸ್ಥಳೀಯರ ಮಧ್ಯೆ ಮಾರಾಮಾರಿ ಜೋರಾಗಿದ್ದು, ಗಲಾಟೆಯಲ್ಲಿ ಲಾಯರ್ ಜಗದೀಶ್ ಗಾಯಗೊಂಡಿದ್ದರು. ಮೂಗಿನಿಂದ ರಕ್ತ ಬರುತ್ತಿರುವುದನ್ನು ಲೆಕ್ಕಿಸದೇ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಈ ಬಗ್ಗೆ ಮಾತನಾಡಿದ್ದರು.
ಈ ಪ್ರಕರಣದಲ್ಲಿ ದೂರು ಹಾಗೂ ಪ್ರತಿ ದೂರು ಎರಡೂ ದಾಖಲಾದ ಕಾರಣ ಗಲಾಟೆಯಲ್ಲಿ ಗಾಯಗೊಂಡಿದ್ದ ಲಾಯರ್ ಜಗದೀಶ್‌ಗೆ ಪೊಲೀಸರೇ ಚಿಕಿತ್ಸೆ ಕೊಡಿಸಿ ವೈದ್ಯಕೀಯ ತಪಾಸಣೆ ಮಾಡಿಸಿ ಬಂಧಿಸಿದ್ದಾರೆ. ಅಲ್ಲದೇ ಲಾಯರ್ ಜಗದೀಶ್ ಪುತ್ರ ಹಾಗೂ ಇಬ್ಬರು ಗನ್ ಮ್ಯಾನ್ಗಳನ್ನು ಕೂಡ ಬಂಧಿಸಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications